PMK ಆಂತರಿಕ ಕಚ್ಚಾಟ; ಅಧ್ಯಕ್ಷನನ್ನಾಗಿ ಮಗನನ್ನು ಗುರುತಿಸಿದ ಚು. ಆಯೋಗ; ಆಯೋಗವನ್ನೇ ಮಗ ಖರೀದಿಸಿದ್ದಾನೆ ಎಂದು ಅಪ್ಪ ಕಿಡಿ

ಡಾ.ಎಸ್​. ರಾಮದಾಸ್ ಮತ್ತು ಪುತ್ರ ಡಾ. ಅನ್ಬುಮಣಿ ರಾಮದಾಸ್
ಡಾ.ಎಸ್​. ರಾಮದಾಸ್ ಮತ್ತು ಪುತ್ರ ಡಾ. ಅನ್ಬುಮಣಿ ರಾಮದಾಸ್
Published on
ಚೆನ್ನೈ: ಮುಂದಿನ ವರ್ಷ ನಡೆಯಲಿರುವ ತಮಿಳುನಾಡಿನ ವಿಧಾನಸಭೆ ಚುನಾವಣೆಗಾಗಿ ಅಲ್ಲಿನ ಪಕ್ಷಗಳು ಸಿದ್ದತೆ ನಡೆಸಿದ್ದು, ಆದರೆ ಪಟ್ಟಾಳಿ ಮಕ್ಕಳ್ ಕಚ್ಚಿ(PMK) ಪಕ್ಷದಲ್ಲಿ ತಂದೆ- ಮಗನ ನಡುವೆ ಪಕ್ಷದ ಹಿಡಿತದ ಬಗ್ಗೆ ಆಂತರಿಕ ಕಚ್ಚಾಟ ನಡೆದಿದೆ. ಜೊತೆಗೆ ಭಾರತೀಯ ಚುನಾವಣೆ ಆಯೋಗ ಆ ಕಚ್ಚಾಟಕ್ಕೆ ಮತ್ತಷ್ಟು ತುಪ್ಪ ಸುರಿದಿದೆ.
ತಮಿಳುನಾಡಿನ ವನ್ನಿಯಾರ್ ಸಮುದಾಯದ ನಾಯಕ ಡಾ.ಎಸ್​. ರಾಮದಾಸ್ ಸ್ಥಾಪಿಸಿದ ಪಕ್ಷ ಪಿಎಂಕೆ. ಇಂದು ಅವರ ಮಗ ಮಾಜಿ ಕೇಂದ್ರ ಸಚಿವ ಅನ್ಬುಮಣಿ ರಾಮದಾಸ್ ನಡುವೆ ಪಕ್ಷದ ಹಿಡಿತದ ಬಗ್ಗೆ ಆಂತರಿಕ ಯುದ್ದವೇ ನಡಯುತ್ತಿದೆ. ಈ ಹಿಂದೆ ಪಕ್ಷದ ಅನ್ಬುಮಣಿ ಅಧ್ಯಕ್ಷರಾಗಿದ್ದರು. ಆದರೆ ಕಚ್ಚಾಟದಿಂದ ಕೆಲವು ತಿಂಗಳ ಹಿಂದೆ ಅವರನ್ನು ವಜಾಗೊಳಿಸಿ ಪಕ್ಷದ ಸಂಘಟನೆಯನ್ನು ಮರು ಸಂಘಟಿಸಲಾಗಿತ್ತು.
ಆದರೆ ಶುಕ್ರವಾರ(ನ. 28) ಅನ್ಬುಮಣಿ ಅವರನ್ನೇ ಪಿಎಂಕೆ ಅಧ್ಯಕ್ಷರನ್ನಾಗಿ ಚುನಾವಣಾ ಆಯೋಗ ಗುರುತಿಸಿದೆ. 2026 ಅಗಸ್ಟ್ 1ರವರೆಗೆ ಅವರೇ ಪಕ್ಷದ ಅಧ್ಯಕ್ಷರಾಗಿರುತ್ತಾರೆ ಎಂದು ಹೇಳಿದೆ. ಈ ಬಗ್ಗೆ ಪಕ್ಷದ ಸಂಸ್ಥಾಪಕ ಎಸ್​. ರಾಮದಾಸ್ ಆಕ್ರೋಶ ವ್ಯಕ್ತಪಡಿಸಿದ್ದು, ಮಗ ಚುನಾವಣೆ ಆಯೋಗವನ್ನೇ ಖರೀದಿಸಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು(ನ. 29) ಕಡಲೂರಿನಲ್ಲಿ ಮಾತನಾಡಿರುವ ಎಸ್​.ರಾಮದಾಸ್, ತಮ್ಮ ಮಗ ಪಕ್ಷದ ನಿಯಂತ್ರಣವನ್ನು ಉಳಿಸಿಕೊಳ್ಳಲು ಆಯೋಗಕ್ಕೆ ಲಂಚ ನೀಡಿದ್ದಾರೆ. ಎಂದು ಆರೋಪಿಸಿದ್ದು, ಈ ಪಿತೂರಿಯನ್ನು ದೆಹಲಿ ಹೈಕೋರ್ಟ್​ನಲ್ಲಿ ಪ್ರಶ್ನಿಸಲಾಗಿದೆ. ಅದು ಸೋಮವಾರ ವಿಚಾರಣೆಗೆ ಬರಲಿದೆ ಎಂದು ಹೇಳಿದ್ದಾರೆ.
ಮಗ ಚುನಾವಣೆ ಆಯೋಗದಿಂದ ಅಕ್ರಮ ಮಾರ್ಗಗಳ ಮೂಲಕ ತನ್ನ ಪರವಾಗಿ ಅನುಕೂಲಕರ ತೀರ್ಪು ಪಡೆದುಕೊಂಡಿದ್ದಾನೆ. ಹಿಂದೆ ಹಲವಾರು ಪಕ್ಷದ ಕಾರ್ಯಕರ್ತರನ್ನು ಖರೀದಿಸಿದ್ದ, ಈಗ ಚುನಾವಣೆ ಆಯೋಗವನ್ನೇ ಖರೀದಿಸಿದ್ದಾನೆ. ಹಣದಿಂದ ಏನು ಬೇಕಾದರೂ ಮಾಡಬಹುದು. ಇಲ್ಲಿ ಹಣ ಚುನಾವಣಾ ಆಯೋಗಕ್ಕೂ ತಲುಪಿದೆ. ನಾವು ಸತ್ಯ ಹೇಳಿದರೂ ಆಯೋಗಕ್ಕೆ ಅರ್ಥವಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಮಗ ಅನ್ಬುಮಣಿ ವಿರುದ್ಧ ಕೆಂಡಕಾರಿರುವ ಅವರು, ಕಳೆದ ತಿಂಗಳು ಹೃದಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಾದಾಗ ಪಿಎಂಕೆಯ ಹಿರಿಯ ನಾಯಕರು ಮತ್ತು ವಿವಿಧ ಪಕ್ಷಗಳ ಸದಸ್ಯರು ಸೇರಿದಂತೆ 81 ಜನರು ತಮ್ಮನ್ನು ಭೇಟಿ ಮಾಡಿದ್ದರು. ಆದರೆ ಅನ್ಬುಮಣಿ ಆಸ್ಪತ್ರೆಗೆ ಬಂದು ವೈದ್ಯರ ಬಳಿ ನನ್ನ ಆರೋಗ್ಯದ ಬಗ್ಗೆ ವಿಚಾರಿಸಿ ಅವರನ್ನು ಭೇಟಿಯಾಗದೆ ಹೊರಟು ಹೋಗಿದ್ದಾನೆ. ನನ್ನ ಮಗ ನನ್ನ ಜೀವವನ್ನು ಹೊರತುಪಡಿಸಿ ಎಲ್ಲವನ್ನೂ ತನ್ನಿಂದ ಕಸಿದುಕೊಂಡಿದ್ದಾನೆ. ಹಾಗಾಗಿ ಮಗಳು ಶ್ರೀಕಾಂತಿಯನ್ನ ನನ್ನ ಸಹಾಯಕ್ಕಾಗಿ ಪಕ್ಷದ ಕಾರ್ಯಾಧ್ಯಕ್ಷೆಯಾಗಿ ನೇಮಕ ಮಾಡಿದೆ. ಇನ್ನು ಅನ್ಬುಮಣಿ ರಾಜಕೀಯ ಮುಗಿದಿದೆ ಎಂದು ಕಿಡಿಕಾರಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net