ಗಂಡನಿಂದ 2ನೇ ಮದುವೆಗೆ ಸಿದ್ಧತೆ: ನ್ಯಾಯಕ್ಕಾಗಿ ಪ್ರಧಾನಿ ಮೋದಿ ಬಳಿ ಬೇಡಿಕೊಂಡ ಪಾಕ್​ ಮಹಿಳೆ! Pakistani Woman

ನ್ಯಾಯಕ್ಕಾಗಿ ಪ್ರಧಾನಿ ಮೋದಿ ಬಳಿ ಬೇಡಿಕೊಂಡ ಪಾಕ್​ ಮಹಿಳೆ ನಿಕಿತಾ
ನ್ಯಾಯಕ್ಕಾಗಿ ಪ್ರಧಾನಿ ಮೋದಿ ಬಳಿ ಬೇಡಿಕೊಂಡ ಪಾಕ್​ ಮಹಿಳೆ ನಿಕಿತಾ
Published on

ಪ್ರಮುಖ ಮುಖ್ಯಾಂಶಗಳು

  • ನನ್ನನ್ನು ಒಂಟಿಯಾಗಿ ಬಿಟ್ಟು ಗಂಡನಿಂದ ದೆಹಲಿಯಲ್ಲಿ ಎರಡನೇ ಮದುವೆಗೆ ಸಿದ್ಧತೆ ಎಂದು ಪಾಕ್​ ಮಹಿಳೆ ಆರೋಪ
  • ಪ್ರಧಾನಿ ಮೋದಿ ಬಳಿ ಸಹಾಯ ಕೋರಿ ವಿಡಿಯೋವೊಂದನ್ನು ಹರಿಬಿಟ್ಟ ಪಾಕಿಸ್ತಾನದ ನಿಕಿತಾ ನಾಗದೇವ್​
  • ನ್ಯಾಯ ಸಿಗದೇ ಹೋದರೆ ಮಹಿಳೆಯರು ನ್ಯಾಯದ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಾರೆಂದ ನಿಕಿತಾ
ನವದೆಹಲಿ: ನನ್ನನ್ನು ಒಂಟಿಯಾಗಿ ಕರಾಚಿಯಲ್ಲೇ ಬಿಟ್ಟು ನನ್ನ ಗಂಡ ಮತ್ತೊಂದು ಮದುವೆ ಮಾಡಿಕೊಳ್ಳಲು ದೆಹಲಿಯಲ್ಲಿ ರಹಸ್ಯವಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾನೆ ಎಂದು ಆರೋಪಿಸಿರುವ ಪಾಕಿಸ್ತಾನ ಮೂಲದ ಮಹಿಳೆಯೊಬ್ಬರು ( Pakistani Woman ) ಪ್ರಧಾನಿ ನರೇಂದ್ರ ಮೋದಿ ಬಳಿ ಸಹಾಯ ಕೋರಿದ್ದಾರೆ.
ಮಹಿಳೆಯನ್ನು ನಿಕಿತಾ ನಾಗದೇವ್​ ಎಂದು ಗುರುತಿಸಲಾಗಿದೆ. ಪ್ರಧಾನಿ ಮೋದಿ ಬಳಿ ಸಹಾಯ ಕೋರಿ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ಪ್ರಸ್ತುತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಕರಾಚಿ ನಿವಾಸಿಯಾಗಿರುವ ನಿಕಿತಾ, ದೀರ್ಘಾವಧಿಯ ವೀಸಾದ ಮೇಲೆ ಇಂದೋರ್‌ನಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಮೂಲದ ವ್ಯಕ್ತಿ ವಿಕ್ರಮ್ ನಾಗದೇವ್ ಅವರನ್ನು 2020, ಜನವರಿ 26ರಂದು ಕರಾಚಿಯಲ್ಲಿ ಹಿಂದು ಪದ್ಧತಿಗಳ ಪ್ರಕಾರ ವಿವಾಹವಾದರು. ಇದಾದ ಒಂದು ತಿಂಗಳ ನಂತರ ನಿಕಿತಾರನ್ನು ಫೆಬ್ರವರಿ 26 ರಂದು ವಿಕ್ರಮ್​ ಭಾರತಕ್ಕೆ ಕರೆತಂದರು. ಆದರೆ, ಕೆಲವೇ ತಿಂಗಳುಗಳಲ್ಲಿ ತನ್ನ ಜೀವನವೇ ತಲೆಕೆಳಗಾಯಿತು ಎಂದು ನಿಕಿತಾ ವಿಡಿಯೋದಲ್ಲಿ ಆರೋಪ ಮಾಡಿದ್ದಾರೆ.
ವೀಸಾದಲ್ಲಿ ಕಂಡುಬಂದ ದೋಷದಿಂದಾಗಿ 2020, ಜುಲೈ 9ರಂದು ನಿಕಿತಾರನ್ನು ಅಟ್ಟಾರಿ ಗಡಿಯಲ್ಲಿ ತಡೆಲಾಯಿತು ಮತ್ತು ಬಲವಂತವಾಗಿ ಆಕೆಯನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲಾಯಿತು. ಅಂದಿನಿಂದ, ಆಕೆಯನ್ನು ಮರಳಿ ಕರೆತರಲು ವಿಕ್ರಮ್​ ಒಮ್ಮೆಯೂ ಪ್ರಯತ್ನಿಸಿಲ್ಲ. ಭಾರತಕ್ಕೆ ಕರೆದುಕೊಂಡು ಹೋಗುವಂತೆ ನಾನು ವಿನಂತಿಸುತ್ತಲೇ ಇದ್ದೇನೆ ಆದರೆ, ಅವರು ಮಾತ್ರ ಪ್ರತಿ ಬಾರಿಯೂ ನಿರಾಕರಿಸುತ್ತಿದ್ದಾರೆ ಎಂದು ತಮ್ಮ ವಿಡಿಯೋದಲ್ಲಿ ನಿಕಿತಾ ಅಳಲು ತೋಡಿಕೊಂಡಿದ್ದಾರೆ.
ವಿಡಿಯೋವನ್ನು ಕರಾಚಿಯಿಂದ ರೆಕಾರ್ಡ್​ ಮಾಡಿ ಹರಿಬಿಡಲಾಗಿದೆ. ನನಗಿಂದು ನ್ಯಾಯ ಸಿಗದೇ ಹೋದರೆ, ಮಹಿಳೆಯರು ನ್ಯಾಯದ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಾರೆ. ಅನೇಕ ಹುಡುಗಿಯರು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಗಂಡನ ಮನೆಯಲ್ಲಿ ದೈಹಿಕ ಮತ್ತು ಮಾನಸಿಕ ಕಿರುಕುಳವನ್ನು ಎದುರಿಸುತ್ತಾರೆ ಅನ್ನೋದು ನಿಮಗೆ ಗೊತ್ತಿದೆ. ಹೀಗಿರುವಾಗ ಎಲ್ಲರು ನನ್ನೊಂದಿಗೆ ನಿಲ್ಲಬೇಕೆಂದು ನಾನು ವಿನಂತಿಸುತ್ತೇನೆ ಎಂದು ನಿಕಿತಾ ಮನವಿ ಮಾಡಿದ್ದಾರೆ. ಅಲ್ಲದೆ, ನ್ಯಾಯ ದೊರಕಿಸಿ ಕೊಡುವಂತೆ ಪ್ರಧಾನಿ ಮೋದಿ ಬಳಿಯು ಮನವಿ ಮಾಡಿದ್ದಾರೆ.
ಮದುವೆಯಾದ ತಕ್ಷಣ ತಾನು ಎದುರಿಸಿದ ಆಘಾತಕಾರಿ ಘಟನೆಯ ಬಗ್ಗೆಯೂ ನಿಕಿತಾ ವಿವರಿಸಿದ್ದಾರೆ. ನಾನು ಪಾಕಿಸ್ತಾನದಿಂದ ನನ್ನ ಅತ್ತೆಯ ಮನೆಗೆ ಹಿಂದಿರುಗಿದಾಗ, ಅವರ ನಡವಳಿಕೆ ಸಂಪೂರ್ಣವಾಗಿ ಬದಲಾಯಿತು. ಇದರ ನಡುವೆ ನನ್ನ ಗಂಡನಿಗೆ ನನ್ನ ಸಂಬಂಧಿಕರೊಬ್ಬರೊಂದಿಗೆ ಅನೈತಿಕ ಸಂಬಂಧವಿರುವುದು ನನಗೆ ತಿಳಿಯಿತು. ಈ ವಿಚಾರವನ್ನು ನನ್ನ ಮಾವನಿಗೆ ಹೇಳಿದಾಗ, ಹುಡುಗರಿಗೆ ಅಕ್ರಮ ಸಂಬಂಧವಿರುವುದು ಸಹಜ, ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ನಿರ್ಲಕ್ಷ್ಯದ ಮಾತುಗಳನ್ನಾಡಿದರು ಎಂದು ನಿಕಿತಾ ಬೇಸರ ಹೊರಹಾಕಿದ್ದಾರೆ.
ಇನ್ನು ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ, ವಿಕ್ರಮ್ ನನ್ನನ್ನು ಪಾಕಿಸ್ತಾನಕ್ಕೆ ಮರಳುವಂತೆ ಒತ್ತಾಯಿಸಿದನು ಮತ್ತು ಈಗ ಭಾರತಕ್ಕೆ ಕರೆತರಲು ನಿರಾಕರಿಸುತ್ತಿದ್ದಾನೆ ಎಂದು ನಿಕಿತಾ ದೂರಿದ್ದಾರೆ. ಕರಾಚಿಗೆ ಹಿಂತಿರುಗಿದ ನಂತರ, ವಿಕ್ರಮ್ ದೆಹಲಿಯಲ್ಲಿ ಎರಡನೇ ಮದುವೆಗೆ ತಯಾರಿ ನಡೆಸುತ್ತಿರುವುದು ನಿಕಿತಾಗೆ ಗೊತ್ತಾಗಿದೆ. ಕಾನೂನುಬದ್ಧವಾಗಿ ಮದುವೆಯಾಗಿರುವಾಗಲೇ ಬದಲಿಯಾಗಿ ಇನ್ನೊಂದು ಮದುವೆಯಾಗಲು ಮುಂದಾಗಿರುವುದರಿಂದ 2025, ಜನವರಿ 27 ರಂದೇ ನಿಕಿತಾ ಲಿಖಿತ ದೂರು ದಾಖಲಿಸಿದ್ದಾರೆ.
ಸದ್ಯ ಈ ಪ್ರಕರಣ, ಮಧ್ಯಪ್ರದೇಶ ಹೈಕೋರ್ಟ್‌ನಿಂದ ಮಾನ್ಯತೆ ಪಡೆದ ಸಿಂಧಿ ಪಂಚರ ಮಧ್ಯಸ್ಥಿಕೆ ಮತ್ತು ಕಾನೂನು ಸಲಹೆ ಕೇಂದ್ರದ ಮುಂದೆ ಬಂದಿದ್ದು, ವಿಕ್ರಮ್ ಮತ್ತು ಆತನ ನಿಶ್ಚಿತ ವಧುವಿಗೆ ನೋಟಿಸ್‌ಗಳನ್ನು ನೀಡಲಾಗಿದೆ ಮತ್ತು ವಿಚಾರಣೆಯನ್ನು ಸಹ ನಡೆಸಲಾಗಿದೆ. ಆದರೆ, ಮಧ್ಯಸ್ಥಿಕೆ ವಿಫಲವಾಗಿದೆ. ಸಲಹೆ ಕೇಂದ್ರ 2025, ಏಪ್ರಿಲ್ 30ರಂದು ನೀಡಿರುವ ವರದಿಯ ಪ್ರಕಾರ, ವಿಕ್ರಮ್​ ಮತ್ತು ನಿಕಿತಾ ಇಬ್ಬರೂ ಭಾರತೀಯ ನಾಗರಿಕರಲ್ಲದ ಕಾರಣ, ಈ ಪ್ರಕರಣವು ಪಾಕಿಸ್ತಾನದ ನ್ಯಾಯವ್ಯಾಪ್ತಿಗೆ ಬರುತ್ತದೆ ಮತ್ತು ವಿಕ್ರಮ್ ಅವರನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಲು ಸಲಹೆ ಕೇಂದ್ರ ಶಿಫಾರಸು ಮಾಡಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net