ನೋ ಚಾನ್ಸ್..!; ಕಾಂಗ್ರೆಸ್ ಜೊತೆ ಟಿಎಂಸಿ ವಿಲೀನ ವದಂತಿಗೆ ತೆರೆ ಎಳೆದ ರಿತಬ್ರತಾ ಬ್ಯಾನರ್ಜಿ | Ritabrata Banerjee

Ritabrata Banerjee | ಪಶ್ಚಿಮ ಬಂಗಾಳದ ಪ್ರತಿಪಕ್ಷ ನಾಯಕ ರಿತಬ್ರತಾ ಬ್ಯಾನರ್ಜಿ
Ritabrata Banerjee | ಪಶ್ಚಿಮ ಬಂಗಾಳದ ಪ್ರತಿಪಕ್ಷ ನಾಯಕ ರಿತಬ್ರತಾ ಬ್ಯಾನರ್ಜಿ
Published on
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷವು ಕಾಂಗ್ರೆಸ್‌ನೊಂದಿಗೆ ವಿಲೀನವಾಗಲಿದೆ ಎಂಬ ರಾಜಕೀಯ ವದಂತಿಗಳು ಹರಡುತ್ತಿರುವ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಬಂಗಾಳದ ಪ್ರತಿಪಕ್ಷ ನಾಯಕ ರಿತಬ್ರತಾ ಬ್ಯಾನರ್ಜಿ(Ritabrata Banerjee), ಈ ಎಲ್ಲಾ ಸಾಧ್ಯತೆಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಯಾವುದೇ ವಿಲೀನ ಪ್ರಕ್ರಿಯೆ ನಡೆಯುವ ಸಾಧ್ಯತೆಯೇ ಇಲ್ಲ ಎಂದು ಹೇಳಿದ್ದಾರೆ.
ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ನಡುವೆ ಇತ್ತೀಚೆಗೆ ನಡೆದ ಮಹತ್ವದ ಭೇಟಿಯ ಬಳಿಕ, ಪಶ್ಚಿಮ ಬಂಗಾಳ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಉಭಯ ಪಕ್ಷಗಳ ವಿಲೀನದ ಕುರಿತು ಭಾರಿ ಚರ್ಚೆಗಳು ಆರಂಭವಾಗಿದ್ದವು. ತೃಣಮೂಲ ಕಾಂಗ್ರೆಸ್ ಇತ್ತೀಚಿನ ವಿಧಾನಸಭಾ ಚುನಾವಣೆಯ ಹಿನ್ನಡೆಯ ನಂತರ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಜೊತೆ ಕೈಜೋಡಿಸಲಿದೆ ಎಂಬ ಮಾತುಗಳು ಕೇಳಿಬಂದಿದ್ದವು.
ಪಕ್ಷದ ಮೂಲಗಳ ಪ್ರಕಾರ, ಸದ್ಯಕ್ಕೆ ಉಭಯ ಪಕ್ಷಗಳ ವಿಲೀನಕ್ಕಿಂತಲೂ ವಿರೋಧ ಪಕ್ಷಗಳ ಮಹಾಮೈತ್ರಿಕೂಟದ ಒಗ್ಗಟ್ಟು ಹೆಚ್ಚು ಮುಖ್ಯವಾಗಿದೆ. ರಾಜ್ಯ ಮಟ್ಟದಲ್ಲಿ ಪಕ್ಷಗಳ ನಡುವೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ, ಕೇಂದ್ರದಲ್ಲಿ ಬಿಜೆಪಿ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಒಟ್ಟಾಗಿ ಕೆಲಸ ಮಾಡುವುದನ್ನು ಖಚಿತಪಡಿಸಿಕೊಳ್ಳುವತ್ತ ಮಾತ್ರವೇ ಈಗ ಗಮನ ಹರಿಸಲಾಗಿದೆ ಎಂದು ಟಿಎಂಸಿ ತಿಳಿಸಿದೆ.

ಬಿಕ್ಕಟ್ಟಿನ ನಡುವೆ ಬಂತು ಸ್ಪಷ್ಟೀಕರಣ

ಕಾಂಗ್ರೆಸ್ ಜೊತೆಗಿನ ವಿಲೀನದ ವದಂತಿಗಳನ್ನು ಟಿಎಂಸಿ ನಿರಾಕರಿಸಿರುವ ಈ ಬೆನ್ನಲ್ಲೇ, ಪಕ್ಷವು ಸಂಸತ್ತಿನಲ್ಲಿ ಭಾರಿ ಬಿಕ್ಕಟ್ಟನ್ನು ಎದುರಿಸುತ್ತಿರುವುದು ಬಹಿರಂಗವಾಗಿದೆ. ಕಳೆದ ಸೋಮವಾರವಷ್ಟೇ ಹಿರಿಯ ನಾಯಕ ಸುಖೇಂದು ಶೇಖರ್ ರಾಯ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದರ ಬೆನ್ನಲ್ಲೇ ಬುಧವಾರ, ಪಕ್ಷದ ಮತ್ತೊಬ್ಬ ಪ್ರಭಾವಿ ನಾಯಕಿ ಸುಶ್ಮಿತಾ ದೇವ್ ಅವರು ಕೂಡ ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ.
ಒಂದೆಡೆ ಪಕ್ಷದ ಸಂಸದರು ಸರಣಿ ರಾಜೀನಾಮೆ ನೀಡುತ್ತಾ ಬಂಡಾಯದ ಮುನ್ಸೂಚನೆ ನೀಡುತ್ತಿದ್ದರೆ, ಮತ್ತೊಂದೆಡೆ ಪಕ್ಷದ ಅಸ್ತಿತ್ವಕ್ಕಾಗಿ ಕಾಂಗ್ರೆಸ್ ಜೊತೆ ವಿಲೀನವಾಗುತ್ತಾರೆ ಎಂಬ ವದಂತಿಗಳು ಹರಡುತ್ತಿರುವುದು ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಆದಾಗ್ಯೂ, ವಿಲೀನದ ಸಾಧ್ಯತೆಯನ್ನು ಕಟುವಾಗಿ ನಿರಾಕರಿಸಿರುವ ಟಿಎಂಸಿ, ತನ್ನ ಆಂತರಿಕ ಬಿಕ್ಕಟ್ಟನ್ನು ಶಮನಗೊಳಿಸಲು ಮುಂದಾಗಿದೆ. ಮಮತಾ ಮತ್ತು ಸೋನಿಯಾ ಗಾಂಧಿ ಭೇಟಿಯು ಕೇವಲ ಸೌಜನ್ಯಯುತ ಮತ್ತು ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತಾದ ಚರ್ಚೆಯಷ್ಟೇ ಆಗಿತ್ತು. ಅದನ್ನು ವಿಲೀನದ ಕೋನದಲ್ಲಿ ನೋಡುವುದು ತಪ್ಪು ಎಂದು ರಾಜಕೀಯ ವಿಶ್ಲೇಷಕರು ಸಹ ಅಭಿಪ್ರಾಯಪಟ್ಟಿದ್ದಾರೆ. ರಿತಬ್ರತಾ ಬ್ಯಾನರ್ಜಿ ಹೇಳಿಕೆಯು ಸದ್ಯಕ್ಕೆ ಟಿಎಂಸಿ ಪಾಳಯದಲ್ಲಿ ಹರಡಿದ್ದ ಗೊಂದಲಗಳಿಗೆ ತೆರೆ ಎಳೆದಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net