ಇವರೇ ನೋಡಿ ಇಂದು ಪ್ರಮಾಣ ವಚನ ಸ್ವೀಕರಿಸಲಿರುವ ನೂತನ ಸಚಿವರು: ಖುದ್ದು ಕರೆ ಮಾಡಿ ಆಹ್ವಾನಿಸಿದ ಡಿಕೆಶಿ! DK Shivakumar

ಇವರೇ ನೋಡಿ ಇಂದು ಪ್ರಮಾಣ ವಚನ ಸ್ವೀಕರಿಸಲಿರುವ ನೂತನ ಸಚಿವರು: ಖುದ್ದು ಕರೆ ಮಾಡಿ ಆಹ್ವಾನಿಸಿದ ಡಿಕೆಶಿ! DK Shivakumar
ಇವರೇ ನೋಡಿ ಇಂದು ಪ್ರಮಾಣ ವಚನ ಸ್ವೀಕರಿಸಲಿರುವ ನೂತನ ಸಚಿವರು: ಖುದ್ದು ಕರೆ ಮಾಡಿ ಆಹ್ವಾನಿಸಿದ ಡಿಕೆಶಿ! DK Shivakumar
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್
  • ನೂತನ ಸಚಿವ ಸಂಪುಟ ಸೇರಲಿರುವ ಶಾಸಕರ ಪಟ್ಟಿಯೂ ಇದೀಗ ಅಂತಿಮಗೊಂಡಿದೆ
  • ನಿಯೋಜಿತ ಸಚಿವರಿಗೆ ದೂರವಾಣಿ ಕರೆ ಮಾಡಿ ಸಂಪುಟ ಸೇರಲು ಅಧಿಕೃತ ಆಹ್ವಾನ ನೀಡಿದ ಡಿಕೆಶಿ
ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದು ಸಂಜೆ ಡಿ.ಕೆ. ಶಿವಕುಮಾರ್ ( DK Shivakumar ) ಅವರು ಅಧಿಕಾರ ಸ್ವೀಕರಿಸುತ್ತಿರುವುದರ ಬೆನ್ನಲ್ಲೇ, ಅವರ ನೂತನ ಸಚಿವ ಸಂಪುಟ ಸೇರಲಿರುವ ಶಾಸಕರ ಪಟ್ಟಿಯೂ ಅಂತಿಮಗೊಂಡಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವ ಮುನ್ನ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಾವೇ ಖುದ್ದಾಗಿ ನಿಯೋಜಿತ ಸಚಿವರಿಗೆ ದೂರವಾಣಿ ಕರೆ ಮಾಡಿ ಸಂಪುಟ ಸೇರಲು ಅಧಿಕೃತ ಆಹ್ವಾನ ನೀಡಿದ್ದಾರೆ.
ಈ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಹಿರಿಯ ನಾಯಕರಾದ ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಕೆ.ಹೆಚ್. ಮುನಿಯಪ್ಪ, ಯು.ಟಿ. ಖಾದರ್ ಹಾಗೂ ಯತೀಂದ್ರ ಸಿದ್ದರಾಮಯ್ಯ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಇವರೊಂದಿಗೆ ಪ್ರಿಯಾಂಕ್ ಖರ್ಗೆ, ಎಂ.ಬಿ. ಪಾಟೀಲ್, ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್ ಮತ್ತು ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೂ ಸಚಿವ ಸ್ಥಾನ ಖಚಿತವಾಗಿದ್ದು, ಹೊಸ ಸರ್ಕಾರದಲ್ಲಿ ಅನುಭವ ಮತ್ತು ಯುವ ಜನ್ಮಪ್ರತಿನಿಧಿಗಳ ಸಮತೋಲಿತ ಸಂಪುಟ ರಚನೆಯಾಗುತ್ತಿರುವುದು ಸ್ಪಷ್ಟವಾಗಿದೆ.
ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಲಬುರಗಿ ಭಾಗದ ಪ್ರಭಾವಿ ನಾಯಕ ಡಾ. ಶರಣಪ್ರಕಾಶ ಆರ್. ಪಾಟೀಲ ಅವರಿಗೆ ದೂರವಾಣಿ ಕರೆ ಮಾಡಿ, ಸಂಪುಟ ಸೇರುವಂತೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ನಾಯಕನಿಂದ ಅಧಿಕೃತ ಕರೆ ಬರುತ್ತಿದ್ದಂತೆಯೇ ಬೆಂಗಳೂರಿನ ವಸಂತ ನಗರದಲ್ಲಿರುವ ಡಾ. ಶರಣಪ್ರಕಾಶ್ ಪಾಟೀಲ್ ಅವರ ಸ್ವಗೃಹದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಸಚಿವರ ನಿವಾಸದ ಸುತ್ತಮುತ್ತ ಬೆಂಬಲಿಗರು ಮತ್ತು ಕಾರ್ಯಕರ್ತರು ಜಮಾಯಿಸುತ್ತಿದ್ದು, ಸಂಭ್ರಮಾಚರಣೆಯ ದೃಶ್ಯಾವಳಿಗಳು ಮುನ್ನೆಲೆಗೆ ಬಂದಿವೆ.

ಪ್ರಮಾಣ ವಚನ ಸ್ವೀಕರಿಸುವವರ ಪಟ್ಟಿ

* ಡಿ.ಕೆ.ಶಿವಕುಮಾರ್ (ಮುಖ್ಯಮಂತ್ರಿ)
* ಡಾ. ಜಿ.ಪರಮೇಶ್ವರ್ (ಉಪ ಮುಖ್ಯಮಂತ್ರಿ)

ಕ್ಯಾಬಿನೆಟ್ ದರ್ಜೆ ಸಚಿವರು

* ಎಂ.ಬಿ.ಪಾಟೀಲ್
* ಕೆ.ಜೆ.ಜಾರ್ಜ್
* ಕೆ.ಎಚ್.ಮುನಿಯಪ್ಪ
* ರಾಮಲಿಂಗಾರೆಡ್ಡಿ
* ಸತೀಶ್ ಜಾರಕಿಹೊಳಿ‌
* ಯು.ಟಿ.ಖಾದರ್
* ಕೃಷ್ಣಬೈರೇಗೌಡ
* ಪ್ರಿಯಾಂಕ್ ಖರ್ಗೆ
* ಯತೀಂದ್ರ ಸಿದ್ದರಾಮಯ್ಯ
* ಶರಣಪ್ರಕಾಶ್ ಪಾಟೀಲ್
* ಬೈರತಿ ಸುರೇಶ್
* ಈಶ್ವರ್ ಖಂಡ್ರೆ
ಇಂದು ಸಂಜೆ 4.05ಕ್ಕೆ ಲೋಕಭವನದಲ್ಲಿ ನಡೆಯಲಿರುವ ಐತಿಹಾಸಿಕ ಸರ್ವಧರ್ಮ ಸೌಹಾರ್ದತೆಯ ಸಮಾರಂಭದಲ್ಲಿ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಈ ಎಲ್ಲಾ ಪ್ರಮುಖ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹೊಸ ಆಡಳಿತದ ಚುಕ್ಕಾಣಿ ಹಿಡಿಯಲಿರುವ ಈ ನೂತನ ಸಚಿವ ಸಂಪುಟದ ಮೇಲೆ ಇಡೀ ರಾಜ್ಯದ ಕಣ್ಣು ನೆಟ್ಟಿದ್ದು, ಸಚಿವರ ಮನೆಗಳಲ್ಲಿ ಧಾರ್ಮಿಕ ವಿಧಿವಿಧಾನ ಹಾಗೂ ಸಂಭ್ರಮದ ಸಿದ್ಧತೆಗಳು ಬಿರುಸಿನಿಂದ ಸಾಗಿವೆ.
ಅಂದಹಾಗೆ ಇಂದು ಸಂಜೆ 4.05 ಗಂಟೆಗೆ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಲೋಕಭವನ ಗ್ಲಾಸ್​ಹೌಸ್​ನಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ರಾಜ್ಯಪಾಲರು ನೂತನ ಮುಖ್ಯಮಂತಿಗೆ ಪದವಿ ಹಾಗೂ ಗೌಪ್ಯತಾ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ಜೊತೆಗೆ 14 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರ ರಾಜಕಾರಣದ ದಿಗ್ಗಜರು, ವಿವಿಧ ರಾಜ್ಯಗಳ ಮುಖಂಡರು ಹಾಗೂ ನಾಡಿನ ಸಾಂಸ್ಕೃತಿಕ, ಸಾಮಾಜಿಕ ವಲಯದ ಗಣ್ಯರು ಈ ಸಂದರ್ಭಕ್ಕೆ ಸಾಕ್ಷಿಯಾಗಲಿದ್ದಾರೆ.
ಪ್ರಮುಖವಾಗಿ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ವಾದ್ರಾ, ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ಕಾಂಗ್ರೆಸ್ ಸಿಎಂಗಳಾದ ವಿ.ಡಿ.ಸತೀಶನ್, ರೇವಂತ ರೆಡ್ಡಿ, ಸುಖವೀಂದರ್ ಸಿಂಗ್ ಸುಖು ಸೇರಿದಂತೆ ಎಐಸಿಸಿ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.

ಮಹತ್ವದ ಘೋಷಣೆ ನಿರೀಕ್ಷೆ

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಡಿ.ಕೆ.ಶಿವಕುಮಾರ್ ತಮ್ಮ ನೇತೃತ್ವದಲ್ಲಿ ನಡೆಯುವ ಪ್ರಥಮ ಸಚಿವ ಸಂಪುಟ ಸಭೆಯಲ್ಲಿ ಮೂರು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ. ಶಿಕ್ಷಣ, ನೀರಾವರಿ ಕ್ಷೇತ್ರ ಹಾಗೂ ಬೆಂಗಳೂರಿಗೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ. ಬಳಿಕ ಸುದ್ದಿಗೋಷ್ಠಿಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net