ಮೆಡಿಕಲ್ ಸೀಟು ವಿವಾದ; ಮುಸ್ಲಿಂ ವಿದ್ಯಾರ್ಥಿಗಳನ್ನು ಈ ರೀತಿ ನಡೆಸಿಕೊಳ್ಳಬೇಡಿ; ಸಿಎಂ ಓಮರ್ ಅಬ್ದುಲ್ಲಾ | CM Omar Abdullah

ಜಮ್ಮು-ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ
ಜಮ್ಮು-ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ
Published on
ಶ್ರೀನಗರ: ಜಮ್ಮು-ಕಾಶ್ಮೀರದ ಶ್ರೀಮಾತಾ ವೈಷ್ಣೋದೇವಿ ವೈದ್ಯಕೀಯ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಪ್ರವೇಶದ ಬಗ್ಗೆ ವಿವಾದ ಹುಟ್ಟಿಕೊಂಡಿದ್ದು, ಧಾರ್ಮಿಕ ಆಧಾರದ ಮೇಲೆ ಅರ್ಹ ಮುಸ್ಲಿಂ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ನಿರಾಕರಿಸುವುದು ಅವರನ್ನು ಮೂಲಭೂತವಾದದ ಕಡೆ ಕರೆದೊಯ್ಯುತ್ತದೆ. ಮುಸ್ಲಿಂ ವಿದ್ಯಾರ್ಥಿಗಳನ್ನು ಈ ರೀತಿ ನಡೆಸಿಕೊಳ್ಳಬೇಡಿ ಎಂದು ಮಂಗಳವಾರ(ನ. 25) ಸಿಎಂ ಓಮರ್ ಅಬ್ದುಲ್ಲಾ(CM Omar Abdullah) ಹೇಳಿದ್ದಾರೆ.
ಈ ವರ್ಷ ಶ್ರೀ ಮಾತಾ ವೈಷ್ಣೋದೇವಿ ಸಂಸ್ಥೆ ಮೆಡಿಕಲ್ ಕಾಲೇಜಿಗೆ 50 ಎಂಬಿಬಿಎಸ್ ಸೀಟುಗಳನ್ನು ಮಂಜೂರು ಮಾಡಲಾಗಿದೆ. ಅದರಲ್ಲಿ 2025-26 ಶೈಕ್ಷಣಿಕ ವರ್ಷದ ಮೊದಲ ಬ್ಯಾಚ್‌ನಲ್ಲಿ ಮುಸ್ಲಿಂ ಸಮುದಾಯದ 42 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಉಳಿದ 8 ಸೀಟುಗಳಲ್ಲಿ ಓರ್ವ ಸಿಖ್ ವಿದ್ಯಾರ್ಥಿ ಸೇರಿ 8 ಹಿಂದೂ ಯುವಕರಿದ್ದಾರೆ. ಇದು ಹಿಂದೂ ಸಂಘಟನೆಗಳನ್ನು ಕೆರಳಿಸಿದ್ದು, ಹೊಸದಾಗಿ ಸ್ಥಾಪಿಸಲಾದ ಸಂಸ್ಥೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಒತ್ತಾಯಿಸಿದ್ದು, ಸೀಟುಗಳನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಒತ್ತಾಯಿಸಿವೆ.
ಜೊತೆಗೆ ಜಮ್ಮು-ಕಾಶ್ಮೀರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುನಿಲ್ ಶರ್ಮಾ ನೇತೃತ್ವದ ಬಿಜೆಪಿ ಶಾಸಕರ ನಿಯೋಗ ಶನಿವಾರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿ ಮಾಡಿ, ಪ್ರವೇಶ ಪಟ್ಟಿಯನ್ನು ರದ್ದುಗೊಳಿಸುವಂತೆ ಮತ್ತು ಮಾತಾ ವೈಷ್ಣೋದೇವಿಯಲ್ಲಿ ನಂಬಿಕೆ ಇಟ್ಟಿರುವ ವಿದ್ಯಾರ್ಥಿಗಳಿಗೆ ಮಾತ್ರ ಸೀಟುಗಳನ್ನು ನೀಡುವಂತೆ ಒತ್ತಾಯಿಸಿದೆ.
ಇಂದು ನಗ್ರೋಟಾದಲ್ಲಿ ವಿಪಕ್ಷ ನಾಯಕರ ಮಾತಿನ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಎಂ ಓಮರ್ ಅಬ್ದುಲ್ಲಾ, ನಂಬಿಕೆಯ ಬಗ್ಗೆ ಅವರು ಹೇಳಿದ್ದು ಸರಿ. ಹಾಗಾದರೆ ವೈದ್ಯಕೀಯ ಕಾಲೇಜನ್ನು ನಿರ್ಮಿಸುವಾಗ ಅದಕ್ಕೆ ಅಲ್ಪಸಂಖ್ಯಾತ ಸಂಸ್ಥೆಯ ಸ್ಥಾನಮಾನವನ್ನು ನೀಡಬೇಕಿತ್ತು. ನೀವು ಅದನ್ನು ಯಾಕೆ ನೀಡಲಿಲ್ಲ? ಅದನ್ನು ನೀಡಬೇಕಾಗಿತ್ತು, ಆದರೆ ನೀಡಲಿಲ್ಲ. ವಿದ್ಯಾರ್ಥಿಗಳ ಪ್ರವೇಶವು ಧರ್ಮದಿಂದ ನಿರ್ಧರಿಸಿಲ್ಲ, ಅದು ನೀಟ್ ಪರೀಕ್ಷೆಯನ್ನು ಆಧರಿಸಿದೆ. ಈಗ ಮುಸ್ಲಿಮರು ಅದರಲ್ಲಿ ಅಧ್ಯಯನ ಮಾಡಬಾರದು ಎಂದು ನೀವು ಬಯಸಿದರೆ, ನೀವು ಅದನ್ನು ಅಲ್ಪಸಂಖ್ಯಾತ ಸಂಸ್ಥೆ ಎಂದು ಘೋಷಿಸಿ, ದಯವಿಟ್ಟು ಅದನ್ನು ಮಾಡಿ ಎಂದು ಹೇಳಿದ್ದಾರೆ.
ಮುಸ್ಲಿಂ ವಿದ್ಯಾರ್ಥಿಗಳಿಗೆ ಅರ್ಹತೆಯ ಮೇಲೆ ಪ್ರವೇಶ ಸಿಕ್ಕಿದೆ, ಬೇರೆಡೆ ಅವರು ಪ್ರವೇಶ ಪಡೆಯಬಹುದು. ಆದರೆ ನಾಳೆ ಏನಾದರೂ ಸಂಭವಿಸಿದಾಗ ನೀವು ಮುಸ್ಲಿಮರ ವಿರುದ್ಧ ಬೆರಳು ತೋರಿಸಬೇಡಿ. ಅವರು ಕೋಮುವಾದಿಗಳಾಗಿದ್ದಾರೆ, ಪಂಥೀಯರಾಗಿದ್ದಾರೆ, ಅವರು ಇತರರನ್ನು ಸಹಿಸುವುದಿಲ್ಲ ಎಂದು ನೀವು ಹೇಳುತ್ತೀರಿ. ಒಂದು ನೆನಪಿಡಿ ನೀವು ಅವರ ಮಕ್ಕಳನ್ನು ಸ್ವೀಕರಿಸದಿದ್ದಾಗ, ನಾಳೆ ಏನಾದರೂ ಸಂಭವಿಸಿದಾಗ ಇಡೀ ಸಮುದಾಯವನ್ನು ದೂಷಿಸಬೇಡಿ ಎಂದಿದ್ದಾರೆ.
ಮಕ್ಕಳು ಫರಿದಾಬಾದ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದಾಗ ಅವರು ಏನು ಹೇಳಿದ್ರು?, ಅವರು ಅಂತಹ ಸ್ಥಳಗಳಿಗೆ ಯಾಕೆ ಹೋಗುತ್ತಾರೆ? ಮೂಲಭೂತವಾದಕ್ಕೆ ಒಳಗಾಗುವ ಸ್ಥಳಗಳಿಗೆ ಯಾಕೆ ಹೋಗುತ್ತಾರೆ? ಎಂದು ಕೇಳ್ತಾರೆ. ಈಗ ಮಕ್ಕಳು ಮಾತಾ ವೈಷ್ಣೋ ದೇವಿಯಂತಹ ವೈದ್ಯಕೀಯ ಕಾಲೇಜಿಗೆ ಹೋಗಲು ಸಿದ್ಧರಿರುವಾಗ, ಅವರು ಮಾತಾ ವೈಷ್ಣೋ ದೇವಿ ಎಂಬ ಹೆಸರಿನ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅವರು ವೈದ್ಯರಾಗಲು ಬಯಸುತ್ತಾರೆ. ಈಗ ನೀವು ಅವರ ಧರ್ಮದ ಆಧಾರದ ಮೇಲೆ ಅವರಿಗೆ ಪ್ರವೇಶವನ್ನು ನಿರಾಕರಿಸುತ್ತಿದ್ದೀರಿ. ನಾಳೆ ಅವರು ಮೂಲಭೂತವಾದಕ್ಕೆ ಒಳಗಾಗುವ ಬೇರೆ ಯಾವುದಾದರೂ ಸಂಸ್ಥೆಗೆ ಹೋದರೆ ಸುನಿಲ್ ಶರ್ಮಾ ಇದು ನನ್ನ ತಪ್ಪು ಎಂದು ಹೇಳುತ್ತಾರೆಯೇ ಎಂದು ಕಿಡಿಕಾರಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net