ನೀನು ಡಾಕ್ಟರ್​ ಆಗ್ಬೇಕು ಎಂದ ಅಪ್ಪ, ಆಗಲ್ಲ ಅಂದ ಮಗ... ಇಬ್ಬರ ಜಗಳದಲ್ಲಿ ಹರಿಯಿತು ತಂದೆಯ ನೆತ್ತರು! Father

ಉತ್ತರ ಪ್ರದೇಶದಲ್ಲಿ ತಂದೆಯನ್ನೇ ( Father ) ಕೊಂದ ಮಗ
ಉತ್ತರ ಪ್ರದೇಶದಲ್ಲಿ ತಂದೆಯನ್ನೇ ( Father ) ಕೊಂದ ಮಗ
Published on

ಪ್ರಮುಖ ಮುಖ್ಯಾಂಶಗಳು

  • ಮಗನ ಭವಿಷ್ಯದ ವೃತ್ತಿ ಜೀವನದ ಬಗ್ಗೆ ಬಹಳ ಕನಸು ಕೊಟ್ಟಿಕೊಂಡಿದ್ದ ತಂದೆ ಮಗನಿಂದಲೇ ಹತ್ಯೆ
  • ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ನಡೆದ ಆಘಾತಕಾರಿ ಘಟನೆ
  • ಅಪ್ಪನನ್ನು ಕೊಲೆ ಮಾಡಿ, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದು ಬಂದ ಪುತ್ರ
ಲಖನೌ: ಮಗನ ಭವಿಷ್ಯದ ವೃತ್ತಿ ಜೀವನದ ಬಗ್ಗೆ ಬಹಳ ಕನಸು ಕೊಟ್ಟಿಕೊಂಡಿದ್ದ ತಂದೆಯೊಬ್ಬ ( Father ) ತನ್ನ ಮಗನಿಂದಲೇ ಬರ್ಬರವಾಗಿ ಕೊಲೆಯಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿ ನಡೆದಿದೆ. ಅಪ್ಪನನ್ನು ಕೊಲೆ ಮಾಡಿದ ಪುತ್ರ, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದು ಬಂದಿದ್ದ. ಕೊನೆಗೂ ಪೊಲೀಸ್​ ತನಿಖೆಯಲ್ಲಿ ಪಾಪಿ ಪುತ್ರ ಸಿಕ್ಕಿಬಿದ್ದಿದ್ದಾನೆ.
ಕೊಲೆಯಾದ ತಂದೆಯನ್ನು ಮನ್ವೇಂದ್ರ ಸಿಂಗ್​ (49) ಎಂದು ಗುರುತಿಸಲಾಗಿದೆ. ಸಿಂಗ್​ ಅವರು ಔಷಧಿ ಮತ್ತು ಮದ್ಯದ ಉದ್ಯಮವನ್ನು ನಡೆಸುತ್ತಿದ್ದರು. ಕಳೆದ ಶುಕ್ರವಾರದಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿ, ಪರಿಶೀಲನೆಗೆಂದು ಪೊಲೀಸರು ಮನೆಗೆ ಬಂದಾಗ ಅಸಲಿ ಸಂಗತಿ ಬಯಲಾಗಿದೆ.
ಪೊಲೀಸರು ಸಿಂಗ್​ ಅವರ ಮನೆಗೆ ಭೇಟಿ ನೀಡಿ, ಶೋಧ ಕಾರ್ಯ ನಡೆಸಿದಾಗ, ಬ್ಯಾರೆಲ್‌ನಲ್ಲಿ ದೇಹದ ಕೆಲವು ಭಾಗಗಳು ಪತ್ತೆಯಾದವು. ಬಳಿಕ ಅವರ ಮಗ ಅಕ್ಷತ್ ಪ್ರತಾಪ್ ಸಿಂಗ್​ನನ್ನು ತೀವ್ರ ವಿಚಾರಣೆ ಮಾಡಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ.
ಪೊಲೀಸರು ಹೇಳುವ ಪ್ರಕಾರ, ಮನ್ವೇಂದ್ರ ಸಿಂಗ್ ತನ್ನ ಮಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿ ವೈದ್ಯಕೀಯ ವೃತ್ತಿಯನ್ನು ಮುಂದುವರಿಸಬೇಕೆಂದು ಬಯಸಿದ್ದರು. ಆದರೆ, ಮಗನಿಗೆ ಅದು ಇಷ್ಟವಿರಲಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ತಂದೆಯ ಒತ್ತಡವನ್ನು ತಾಳಲಾರದೇ ಒಮ್ಮೆ ಅಕ್ಷತ್​ ಮನೆಯಿಂದಲೇ ಓಡಿಹೋಗಿದ್ದ.
ಈ ಬಾರಿ, ಶುಕ್ರವಾರ (ಫೆ.20) ಸಂಜೆ 4.30ರ ಸುಮಾರಿಗೆ ಮತ್ತೊಂದು ಸುತ್ತಿನ ಜಗಳ ನಡೆಯಿತು. ಈ ವೇಳೆ ಅಕ್ಷತ್, ತನ್ನ ತಂದೆಗೆ ರೈಫಲ್‌ನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಇದಾದ ನಂತರ ತಂದೆಯ ಶವವನ್ನು ಮೂರನೇ ಮಹಡಿಯಿಂದ ನೆಲ ಮಹಡಿಗೆ ಕೊಂಡೊಯ್ದು, ಖಾಲಿ ಕೋಣೆಯಲ್ಲಿ ತುಂಡು ತುಂಡು ಮಾಡಿದ್ದಾನೆ. ಇದನ್ನು ನೋಡಿದ ಸಹೋದರಿ ದಿಗ್ಭ್ರಾಂತಗೊಂಡಳು. ಈ ವೇಳೆ ಆಕೆಯನ್ನು ಹೆದರಿಸಿ, ಮೌನವಾಗಿಸಿದನು.
ಇದಾದ ನಂತರ, ಸಹೋದರಿಯ ಮುಂದೆಯೇ ದೇಹವನ್ನು ತುಂಡು ಮಾಡುವುದನ್ನು ಮುಂದುವರೆಸಿದನು ಮತ್ತು ದೇಹದ ಭಾಗಗಳನ್ನು ಪ್ಲಾಸ್ಟಿಕ್‌ನಲ್ಲಿ ಪ್ಯಾಕ್ ಮಾಡಿದನು. ಬಳಿಕ ದೇಹದ ಅವುಗಳನ್ನು ಒಂದೆಡೆ ವಿಲೇವಾರಿ ಮಾಡಿ, ಮುಂಡ ಸೇರಿದಂತೆ ಕೆಲವು ಭಾಗಗಳನ್ನು ಮನೆಯೊಳಗೆ ಇರಿಸಲಾಗಿದ್ದ ನೀಲಿ ಡ್ರಮ್‌ನಲ್ಲಿ ಹಾಕಿದನು.
ಅಕ್ಷತ್​, ತಪ್ಪೊಪ್ಪಿಗೆಯ ನಂತರ, ವಿಧಿವಿಜ್ಞಾನ ತಂಡವನ್ನು ಕರೆಸಲಾಗಿದ್ದು, ಮನೆಯಿಂದ ಸ್ಯಾಂಪಲ್​ಗಳನ್ನು ಸಂಗ್ರಹಿಸುತ್ತಿದ್ದಾರೆ. ದೇಹದ ಭಾಗಗಳನ್ನು ಪತ್ತೆಹಚ್ಚುವ ಪ್ರಯತ್ನಗಳು ಸಹ ನಡೆಯುತ್ತಿವೆ. ಇದರ ನಡುವೆ ಅಕ್ಷತ್‌ನನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ. ಪಡೆದ ಸಾಕ್ಷ್ಯಗಳ ಆಧಾರದ ಮೇಲೆ, ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಮತ್ತು ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಲಖನೌದ ಆಶಿಯಾನಾ ಪ್ರದೇಶದ ಹಿರಿಯ ಅಧಿಕಾರಿ ವಿಕ್ರಾಂತ್ ವೀರ್ ಹೇಳಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net