Gautam Gambhir | ಆಫ್ರಿಕಾ ವಿರುದ್ಧ ಸರಣಿ ಸೋಲು; ಕೋಚ್​ ಗಂಭೀರ್​ ಬದಲಾವಣೆಗೆ ಇದು ಸಕಾಲ ಎಂದ ಮಾಜಿ ಕ್ರಿಕೆಟಿಗ

Gautam Gambhir | ಭಾರತ ತಂಡದ ಮುಖ್ಯ ಕೋಚ್​ ಗೌತಮ್​ ಗಂಭೀರ್​
Gautam Gambhir | ಭಾರತ ತಂಡದ ಮುಖ್ಯ ಕೋಚ್​ ಗೌತಮ್​ ಗಂಭೀರ್​
Published on
ದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿನ ಸೋಲಿನ ಬಳಿಕ ಭಾರತ ತಂಡದ ಮುಖ್ಯ ಕೋಚ್​ ಗೌತಮ್​ ಗಂಭೀರ್​ ಬಗ್ಗೆ ಅನೇಕ ಹಿರಿಯ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದು, ಗಂಭೀರ್​ ಸಹ ಆಟಗಾರರಾಗಿದ್ದ ಮನೋಜ್​ ತಿವಾರಿ ಈ ಸಾಲಿಗೆ ಹೊಸ ಸೇರ್ಪಡೆ.
ಭಾರತ ತಂಡ ತವರಿನಲ್ಲಿ ಸರಣಿ ಸೋತಿರುವುದು ಗಂಭೀರ್ ಭವಿಷ್ಯದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದ್ದು, ಎರಡನೇ ಟೆಸ್ಟ್‌ ಪಂದ್ಯದಲ್ಲಿನ 408 ರನ್‌ಗಳ ಹೀನಾಯ ಸೋಲು ಕ್ರಿಕೆಟ್​ ಆಸಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಕ್ರಿಕೆಟಿಗ ಮನೋಜ್​ ತಿವಾರಿ ಫಲಿತಾಂಶದಲ್ಲಿ ಅಚ್ಚರಿ ಏನಿಲ್ಲ ಎಂದಿದ್ದಾರೆ.
ಸರಣಿ ಆರಂಭವಾಗುವ ಮೊದಲೇ ತಂಡದ ಪ್ರದರ್ಶನದ ಬಗ್ಗೆ ಸೂಚನೆ ಸಿಕ್ಕಿತ್ತು, ಇದೇ ಆಗುತ್ತದೆ ಎನ್ನುವುದು ಗೋಡೆಯ ಮೇಲೆ ಬರೆದಾಗಿತ್ತು, ತಂಡದ ವಿಷಯದಲ್ಲಿ ಯಾವುದೂ ಸರಿಯಾಗಿ ನಡೆಯುತ್ತಿಲ್ಲ ಎಂದು ನನಗೆ ತಿಳಿದಿತ್ತು. ಆಟಗಾರರನ್ನು ಪದೇ ಪದೇ ಬದಲಾಯಿಸುವುದರಿಂದ ಏನಾಗುತ್ತದೆ ಎಂದು ಸ್ಪಷ್ಟವಾಗಿತ್ತು. ಬಾರ್ಡರ್-ಗವಾಸ್ಕರ್ ಟ್ರೋಫಿ, ನ್ಯೂಜಿಲೆಂಡ್ ವಿರುದ್ಧದ ತವರಿನ ಸರಣಿ ಮತ್ತು ಈಗ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೋಲಿಗೆ ಆ ಪ್ರಯೋಗವೇ ಕಾರಣ ಎಂದು ಅಭಿಪ್ರಾಯಪಟ್ಟರು.
ಬಿಸಿಸಿಐ, ಗಂಭೀರ್ ಅವರನ್ನು ಕೋಚ್ ಸ್ಥಾನದಿಂದ ವಜಾಗೊಳಿಸಿ, ಭಾರತೀಯ ಟೆಸ್ಟ್ ಕ್ರಿಕೆಟ್ ಉಳಿಸಲು ಇದು ಸೂಕ್ತ ಸಮಯ ಎಂದಿರುವ ತಿವಾರಿ, ಟೆಸ್ಟ್​ ತಂಡಕ್ಕೆ ಪ್ರತ್ಯೇಕ ಇರಬೇಕೇ ಬೇಡವೇ ಎಂದು ನಿರ್ಧರಿಸಲು ಕಾಲ ಪಕ್ವವಾಗಿದೆ ಎಂದರು.

ಚಾಂಪಿಯನ್ಸ್ ಟ್ರೋಫಿ ಗೆಲುವಿಗೆ ಇವರು ಕಾರಣ..

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಗಂಭೀರ್, ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯಾ ಕಪ್ ಗೆದ್ದಿದ್ದೇನೆ ಮತ್ತು ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ಡ್ರಾ ಮಾಡಿಕೊಂಡಿದ್ದೇನೆ ಎಂದು ತಮ್ಮನ್ನು ತಾವೇ ಸಮರ್ಥಿಸಿಕೊಂಡಿದ್ದರು. ಈ ವಿಷಯವಾಗಿಯೂ ಪ್ರತಿಕ್ರಿಯೆ ನೀಡಿರುವ ತಿವಾರಿ, ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ನಿರ್ಮಿಸಿದ ಏಕದಿನ ತಂಡವನ್ನು ಗಂಭೀರ್​ ಮುನ್ನಡೆಸಿದ್ದಾರೆ. ಈ ಎರಡು ಪಂದ್ಯಾವಳಿಗಳಿಗೆ ಗಂಭೀರ್ ಟೀಮ್ ಇಂಡಿಯಾದ ತರಬೇತುದಾರರಾಗಿಲ್ಲದಿದ್ದರೂ ಭಾರತ ಗೆಲ್ಲುತ್ತಿತ್ತು ಎಂದರು.
ಸೀಮಿತ ಓವರ್​ಗಳ ಕೋಚ್​ ಆಗಿ ಯಶಸ್ಸು ಪಡೆದಿರುವ ವ್ಯಕ್ತಿಯನ್ನು ಭಾರತ ಕ್ರಿಕೆಟ್​ ತಂಡದ ಮುಖ್ಯ ಕೋಚ್ ಆಗಿ ನೋಡುವುದು ನಮ್ಮ ದುರದೃಷ್ಟಕರ, ನಿಮಗೆ ತಳಮಟ್ಟದಲ್ಲಿ ಅನುಭವವಿಲ್ಲದಿದ್ದರೆ, ಉನ್ನತ ಮಟ್ಟದಲ್ಲಿ ಫಲಿತಾಂಶಗಳನ್ನು ನೀಡಲು ನೀವು ಹೇಗೆ ನಿರೀಕ್ಷಿಸುತ್ತೀರಿ? ಅದು ಅಸಾಧ್ಯದ ಮಾತು ಎಂದು ತಿವಾರಿ ಹೇಳಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net