ಕೇತನ್​​ ಹತ್ಯೆ ಪ್ರಕರಣ: 'ಮಗಳು ತಪ್ಪಿತಸ್ಥಳಾದರೆ ಅದೇ ಕೋಟೆಯಿಂದ ತಳ್ಳಿಬಿಡಿ' ಎಂದ ಸಿಯಾ ತಂದೆ!

Ketan murder case
Ketan murder case
Published on

ಪುಣೆ:ಪುಣೆಯ ಲೋಹಗಢ ಕೋಟೆಯಲ್ಲಿ ನಿಶ್ಚಿತ ವರ ಕೇತನ್​​ ಅಗರ್ವಾಲ್ ಹತ್ಯೆ(Ketan murder case) ಪ್ರಕರಣದ ಪ್ರಮುಖ ಆರೋಪಿ ಸಿಯಾ ಗೋಯಲ್ ತಪ್ಪಿತಸ್ಥಳೆಂದು ನ್ಯಾಯಾಲಯದಲ್ಲಿ ಸಾಬೀತಾದರೆ ಆಕೆಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಸಿಯಾ ತಂದೆ ಪ್ರವೇಣ್ ಗೋಯಲ್ ಹೇಳಿದ್ದಾರೆ. ಅಗತ್ಯವಿದ್ದರೆ ಕೇತನನನ್ನು ತಳ್ಳಿದ ಅದೇ ಸ್ಥಳದಿಂದ ಮಗಳನ್ನೂ ತಳ್ಳಿಬಿಡಿ ಎಂದು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ, ತಮ್ಮ ಮಗಳು ಇಂತಹ ಕೃತ್ಯ ಎಸಗಿದ್ದಾಳೆ ಎಂಬ ಆರೋಪವನ್ನು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ ಎಂದೂ ತಿಳಿಸಿದ್ದಾರೆ.

'ನ್ಯಾಯಕ್ಕೆ ಅಡ್ಡಿಯಾಗುವುದಿಲ್ಲ'

ಇಂಡಿಯಾ ಟುಡೆ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರವೇಣ್ ಗೋಯಲ್, ಮಗಳ ಬಂಧನದಿಂದ ತಮಗೆ ತೀವ್ರ ಆಘಾತವಾಗಿದ್ದು, ತಾವು ಐಸಿಯುವಿನಲ್ಲೂ ಚಿಕಿತ್ಸೆ ಪಡೆದಿದ್ದಾಗಿ ಹೇಳಿದರು.

"ನನ್ನ ಮಗಳು ಇಂತಹ ಕೆಲಸ ಮಾಡಿದ್ದಾಳೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಅವಳು ಎಂದಿಗೂ ಸುಳ್ಳು ಹೇಳಿರಲಿಲ್ಲ. ಆದರೆ ನ್ಯಾಯದ ಮುಂದೆ ತಂದೆಯ ಭಾವನೆ ಅಡ್ಡಿಯಾಗಬಾರದು. ತಪ್ಪಿತಸ್ಥಳೆಂದು ಸಾಬೀತಾದರೆ ವಿಳಂಬ ಮಾಡದೇ ಕಾನೂನು ಪ್ರಕಾರ ಕಠಿಣ ಶಿಕ್ಷೆ ನೀಡಿ. ಬೇಕಾದರೆ ಗಲ್ಲು ಶಿಕ್ಷೆಯನ್ನೂ ವಿಧಿಸಬಹುದು," ಎಂದು ಹೇಳಿದರು.

'ಮದುವೆಗೆ ಸಂತೋಷದಿಂದ ಸಿದ್ಧತೆ ನಡೆದಿತ್ತು'

ಸಿಯಾ ತಾಯಿ ಪೂಜಾ ಗೋಯಲ್ ಕೂಡ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಸಿಯಾ ಮತ್ತು ಕೇತನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇದೆ ಎಂಬ ಅನುಮಾನ ಎಂದಿಗೂ ಬಂದಿರಲಿಲ್ಲ ಎಂದರು.

"ಇಬ್ಬರೂ ಆಗಾಗ ವಿಡಿಯೋ ಕಾಲ್ ಮಾಡುತ್ತಿದ್ದರು. ಭೇಟಿಯಾಗುತ್ತಿದ್ದರು. ಕೇತನ ನಮ್ಮ ಮನೆಗೂ ಊಟಕ್ಕೆ ಬಂದಿದ್ದ. ಮದುವೆಗೆ ಇಬ್ಬರೂ ಸಂತೋಷದಿಂದ ಸಿದ್ಧತೆ ನಡೆಸುತ್ತಿದ್ದರು. ಮದುವೆಗೂ ಮುನ್ನ ಬಲಿ ಪ್ರವಾಸಕ್ಕೆ ಹೋಗುವ ಯೋಜನೆ ಇತ್ತು. ಅದಕ್ಕಾಗಿ ಸುಮಾರು ₹50 ಸಾವಿರ ಮೌಲ್ಯದ ಖರೀದಿಯನ್ನೂ(ಪ್ರವಾಸಕ್ಕೆ ಹೋಗಲು ಬಟ್ಟೆ ಬರೆ) ಮಾಡಿದ್ದೆವು. ಸಿಯಾಗೆ ಈ ಮದುವೆ ಇಷ್ಟವಿಲ್ಲ ಎಂದು ಹೇಳಿದ್ದರೆ ಇಷ್ಟೆಲ್ಲಾ ಸಿದ್ಧತೆ ಮಾಡುತ್ತಿರಲಿಲ್ಲ," ಎಂದು ಹೇಳಿದರು. ಪ್ರವೇಣ್ ಗೋಯಲ್ ಕೂಡ, "ಕೇತನ ನನಗೆ ಮಗನಂತಿದ್ದ. ಈ ಘಟನೆ ಎರಡೂ ಕುಟುಂಬಗಳಿಗೆ ದೊಡ್ಡ ಆಘಾತ ತಂದಿದೆ. ಏನಾಗಿದೆ ಎಂಬುದನ್ನು ಇಂದಿಗೂ ನಂಬಲು ಸಾಧ್ಯವಾಗುತ್ತಿಲ್ಲ," ಎಂದು ಹೇಳಿದರು. ಇದೇ ವೇಳೆ, ತಮ್ಮ ಮಗಳ ಪ್ರೇಮ ಸಂಬಂಧ ಅಥವಾ ಸಂಬಂಧದಲ್ಲಿ ಯಾವುದೇ ಸಮಸ್ಯೆ ಇತ್ತು ಎಂಬ ಮಾಹಿತಿ ಕುಟುಂಬಕ್ಕೆ ತಿಳಿದಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪೊಲೀಸರ ಆರೋಪ ಏನು?

ಪುಣೆ ಪೊಲೀಸರ ಪ್ರಕಾರ, ಸಿಯಾ ಗೋಯಲ್ ಮತ್ತು ಆಕೆಯ ಆಪ್ತ ಸ್ನೇಹಿತ ಚೇತನ್ ಚೌಧರಿ ಸೇರಿ ಜೂನ್ 18ರಂದು ಪುಣೆಯ ಲೋಹಗಢ ಕೋಟೆಯಲ್ಲಿ ಕೇತನ ಅಗರ್ವಾಲ್ ಅವರನ್ನು ಕಣಿವೆಗೆ ತಳ್ಳುವ ಮೂಲಕ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ನಿಶ್ಚಿತಾರ್ಥ ಮುರಿದರೆ ಕುಟುಂಬಕ್ಕೆ ಅವಮಾನವಾಗಬಹುದು ಎಂಬ ಕಾರಣಕ್ಕೆ ಸಿಯಾ ಮದುವೆಯನ್ನು ರದ್ದುಗೊಳಿಸದೇ, ಕೇತನನನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದಳು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ಇದಕ್ಕೂ ಮುನ್ನವೂ ಕೊಲೆ ಮಾಡಲು ಹಲವು ಪ್ರಯತ್ನಗಳು ನಡೆದಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ನ್ಯಾಯಾಂಗ ಬಂಧನದಲ್ಲಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ,(ಏಜೆನ್ಸೀಸ್​​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net