Ketan Agarwal murder case: ಓಡಿಹೋದರೆ ಮರ್ಯಾದೆ ಹೋಗುತ್ತೆ ಎಂದು ಭಾವಿ ಪತಿಯನ್ನೇ ಕೊಂದ ಪ್ರೇಯಸಿ; ಪುಣೆ ಪೊಲೀಸರಿಂದ ರಹಸ್ಯ ಬಯಲು!

Ketan Agarwal murder case: ಓಡಿಹೋದರೆ ಮರ್ಯಾದೆ ಹೋಗುತ್ತೆ ಎಂದು ಭಾವಿ ಪತಿಯನ್ನೇ ಕೊಂದ ಪ್ರೇಯಸಿ; ಪುಣೆ ಪೊಲೀಸರಿಂದ ರಹಸ್ಯ ಬಯಲು!
Ketan Agarwal murder case: ಓಡಿಹೋದರೆ ಮರ್ಯಾದೆ ಹೋಗುತ್ತೆ ಎಂದು ಭಾವಿ ಪತಿಯನ್ನೇ ಕೊಂದ ಪ್ರೇಯಸಿ; ಪುಣೆ ಪೊಲೀಸರಿಂದ ರಹಸ್ಯ ಬಯಲು!
Published on
ಪುಣೆ: ಮಹಾರಾಷ್ಟ್ರದ ಪ್ರಸಿದ್ಧ ಲೋಹಗಢ ಕೋಟೆಯಲ್ಲಿ ನಡೆದ ಉದ್ಯಮಿ ಕೇತನ್ ಅಗರ್ವಾಲ್ ನಿಗೂಢ ಹತ್ಯೆ ಪ್ರಕರಣಕ್ಕೆ(Ketan Agarwal murder case) ಸಂಬಂಧಿಸಿದಂತೆ ಪುಣೆ ಪೊಲೀಸರು ಆಘಾತಕಾರಿ ಸತ್ಯವೊಂದನ್ನು ಬಹಿರಂಗಪಡಿಸಿದ್ದಾರೆ. ಕುಟುಂಬದ ಮರ್ಯಾದೆಗೆ ಅಂಜಿಯೇ ಪ್ರೇಯಸಿ ಸಿಯಾ ಗೋಯಲ್ ತನ್ನ ಪ್ರೇಮಿ ಚೇತನ್ ಚೌಧರಿ ಜೊತೆ ಓಡಿಹೋಗಲು ನಿರಾಕರಿಸಿದ್ದಳು. ಇದೇ ಕಾರಣಕ್ಕೆ ಇಬ್ಬರೂ ಸೇರಿ ಭಾವಿ ಪತಿ ಕೇತನ್‌ನನ್ನು ಕೊಲ್ಲಲು ಕ್ರೂರ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 18 ರಂದು ನಡೆದ ಈ ಘಟನೆ ಆರಂಭದಲ್ಲಿ ಕೇವಲ ಟ್ರೆಕ್ಕಿಂಗ್ ಅಪಘಾತ ಎಂದು ಬಿಂಬಿತವಾಗಿತ್ತು. ಆದರೆ ಪೊಲೀಸರ ಚುರುಕಾದ ತನಿಖೆಯಿಂದಾಗಿ ಇದು ಸುಪಾರಿ ಮಾದರಿಯ ಪೂರ್ವನಿಯೋಜಿತ ಕೊಲೆ ಎಂಬುದು ಸಾಬೀತಾಗಿದೆ.

ಓಡಿಹೋದರೆ ಮರ್ಯಾದೆ ಹೋಗುತ್ತೆ ಎಂದು ಕೊಲೆಗೆ ಸ್ಕೆಚ್!

ಪೊಲೀಸ್ ಕಸ್ಟಡಿಯಲ್ಲಿರುವ ಸಿಯಾ ಗೋಯಲ್ ಪ್ರೇಮಿ ಚೇತನ್ ಚೌಧರಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ ಇಡೀ ಕೊಲೆಯ ರಹಸ್ಯವನ್ನು ಬಾಯಿಬಿಟ್ಟಿದ್ದಾನೆ. ಚೇತನ್ ಪೊಲೀಸರಿಗೆ ನೀಡಿರುವ ಹೇಳಿಕೆಯ ಪ್ರಕಾರ, ನಾವಿಬ್ಬರೂ ಪ್ರೀತಿಸುತ್ತಿದ್ದೆವು. ಆದರೆ ಸಿಯಾಗೆ ಉದ್ಯಮಿ ಕೇತನ್ ಅಗರ್ವಾಲ್ ಜೊತೆ ನಿಶ್ಚಿತಾರ್ಥವಾಗಿತ್ತು. ನಾವಿಬ್ಬರೂ ಒಟ್ಟಿಗೆ ಓಡಿಹೋಗುವ ಬಗ್ಗೆ ಹಲವು ಬಾರಿ ಚರ್ಚಿಸಿದ್ದೆವು. ಆದರೆ, ನಿಶ್ಚಿತಾರ್ಥ ಮುರಿದು ಓಡಿಹೋದರೆ ಸಮಾಜದಲ್ಲಿ ತನ್ನ ಕುಟುಂಬದ ಮರ್ಯಾದೆ ಹರಾಜಾಗುತ್ತದೆ, ಹೆತ್ತವರಿಗೆ ಭಾರಿ ಅವಮಾನವಾಗುತ್ತದೆ ಎಂದು ಸಿಯಾ ಹೆದರಿದ್ದಳು.
ಓಡಿಹೋಗಿ ಮರ್ಯಾದೆ ಕಳೆದುಕೊಳ್ಳುವ ಬದಲು, ಕೇತನ್‌ನನ್ನು ನಮ್ಮ ಹಾದಿಯಿಂದಲೇ ಶಾಶ್ವತವಾಗಿ ಮುಳ್ಳು ತೆಗೆದಂತೆ ತೆಗೆದುಹಾಕಿದರೆ ಯಾರಿಗೂ ಅನುಮಾನ ಬರುವುದಿಲ್ಲ ಎಂದು ನಾವಿಬ್ಬರೂ ಸೇರಿ ಆತನ ಕೊಲೆಗೆ ಸ್ಕೆಚ್ ಹಾಕಿದ್ದೆವು ಎಂದು ಚೇತನ್ ಒಪ್ಪಿಕೊಂಡಿದ್ದಾನೆ ಎಂದು ಪಿಟಿಐ ವರದಿ ಮಾಡಿದೆ.

33 ಡಿಗ್ರಿ ಬಿಸಿಲಿನಲ್ಲಿ ಹುಡಿ ಧರಿಸಿದ್ದ ಹಂತಕ; ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ ಸುಳಿವು!

ಜೂನ್ 18 ರಂದು ಲೋಹಗಢ ಕೋಟೆಗೆ ಟ್ರೆಕ್ಕಿಂಗ್‌ಗೆ ಹೋಗಿದ್ದಾಗ ಕೇತನ್ ಆಳವಾದ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದ. ಆತ ಕಾಲು ಜಾರಿ ಬಿದ್ದಿದ್ದಾನೆ ಎಂದು ಸಿಯಾ ಎಲ್ಲರನ್ನೂ ನಂಬಿಸಿದ್ದಳು. ಆದರೆ ಕೋಟೆಯ ಟಿಕೆಟ್ ಕೌಂಟರ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪೊಲೀಸರಿಗೆ ಭಾರಿ ಅನುಮಾನ ಮೂಡಿತು.
ಕೇತನ್ ಮತ್ತು ಸಿಯಾ ಹೋಗುತ್ತಿದ್ದ ದಾರಿಯಲ್ಲೇ ಹುಡ್ ಧರಿಸಿದ ಅಪರಿಚಿತ ವ್ಯಕ್ತಿಯೊಬ್ಬ ಅವರನ್ನು ಹಿಂಬಾಲಿಸುತ್ತಿರುವುದು ಸಿಸಿಟಿವಿಯಲ್ಲಿ ಕಂಡುಬಂದಿತ್ತು. ಆತ ತನ್ನ ಮುಖ ಯಾರಿಗೂ ಕಾಣದಂತೆ ಹುಡಿಯನ್ನು ಪೂರ್ತಿ ಕೆಳಗೆ ಎಳೆದುಕೊಂಡಿದ್ದ ಹಾಗೂ ಕಿವಿಗೆ ಹೆಡ್‌ಸೆಟ್ ಹಾಕಿಕೊಂಡಿದ್ದ. ಅಂದು ಕೋಟೆಯ ಸುತ್ತಮುತ್ತ ಸುಮಾರು 33 ಡಿಗ್ರಿ ಸೆಲ್ಸಿಯಸ್‌ನಷ್ಟು ಭಾರಿ ಬಿಸಿಲಿತ್ತು. ಅಷ್ಟು ಸೆಕೆಯಲ್ಲಿ ವ್ಯಕ್ತಿಯೊಬ್ಬ ಹುಡಿ ಧರಿಸಿ ಓಡಾಡುತ್ತಿರುವುದು ಪೊಲೀಸರ ಅನುಮಾನವನ್ನು ದುಪ್ಪಟ್ಟು ಮಾಡಿತು.
ಮತ್ತೊಂದು ಸಿಸಿಟಿವಿ ಕ್ಲಿಪ್‌ನಲ್ಲಿ ಸಿಯಾ ದಿಢೀರನೆ ಹಿಂದಕ್ಕೆ ತಿರುಗಿದಾಗ, ಈತ ತಕ್ಷಣ ಕೆಳಗೆ ಕುಳಿತುಕೊಂಡು ಮುಖ ಮುಚ್ಚಿಕೊಳ್ಳುವ ದೃಶ್ಯ ಪತ್ತೆಯಾಯಿತು. ಈ ಅನುಮಾನಾಸ್ಪದ ನಡವಳಿಕೆಯ ಬೆನ್ನಟ್ಟಿದ ಪೊಲೀಸರು ತಾಂತ್ರಿಕ ತನಿಖೆಯ ಮೂಲಕ ಆ ವ್ಯಕ್ತಿ ಬೇರಾರೂ ಅಲ್ಲ, ಸಿಯಾಳ ಪ್ರೇಮಿ ಚೇತನ್ ಚೌಧರಿ ಎಂಬುದನ್ನು ಪತ್ತೆಹಚ್ಚಿ ಇಬ್ಬರನ್ನೂ ಬಂಧಿಸಿದ್ದಾರೆ.

ಜೂನ್ 29ರ ವರೆಗೆ ಪೊಲೀಸ್ ಕಸ್ಟಡಿಗೆ

ಸದ್ಯ ಕೊಲೆ ಹಾಗೂ ಪಿತೂರಿ ಆರೋಪದ ಮೇಲೆ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿಯನ್ನು ಪುಣೆ ಪೊಲೀಸರು ಬಂಧಿಸಿದ್ದು, ನ್ಯಾಯಾಲಯವು ಜೂನ್ 29 ರವರೆಗೆ ಇಬ್ಬರನ್ನೂ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಕೇವಲ ಸುಳ್ಳು ಮರ್ಯಾದೆ ಹಾಗೂ ಸಮಾಜದ ಭಯಕ್ಕಾಗಿ ನಿಶ್ಚಿತಾರ್ಥವಾಗಿದ್ದ ಯುವಕನನ್ನೇ ಪ್ರೇಮಿಯೊಂದಿಗೆ ಸೇರಿ ಕಂದಕಕ್ಕೆ ತಳ್ಳಿ ಕೊಂದ ಯುವತಿಯ ಕ್ರೂರ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಸದ್ಯ ಪ್ರಕರಣದ ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net