ರಾಜಸ್ವ ಸಂಗ್ರಹಣೆಗಿರುವ ಈ ನಿರ್ಬಂಧಗಳ ನಡುವೆಯೂ, ರಾಜ್ಯವು ಆರ್ಥಿಕ ಬೆಳವಣಿಗೆ, ಜನ ಕಲ್ಯಾಣ ಮತ್ತು ವಿತ್ತೀಯ ಶಿಸ್ತನ್ನು ಸಮತೋಲನದಲ್ಲಿ ಕಾಯ್ದುಕೊಳ್ಳಲು ವೆಚ್ಚ ನಿರ್ವಹಣೆಗೆ ಆದ್ಯತೆ ನೀಡಿದೆ. ರಾಜ್ಯವು ಸಮಾಜದ ಕಲ್ಯಾಣಕ್ಕೆ ನೀಡಿದ ಬದ್ಧತೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಜಾರಿಯಾದಾಗಿನಿಂದ, ಫೆಬ್ರವರಿ 2026ರವರೆಗೆ ಒಟ್ಟು 1,21,598 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ನಮ್ಮ ಸರ್ಕಾರವು ವಿತ್ತೀಯ ಶಿಸ್ತನ್ನು ಪಾಲಿಸುವುದರೊಂದಿಗೆ ಜನ ಸಾಮಾನ್ಯರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಿರುತ್ತದೆ. ಜಿ.ಎಸ್.ಟಿ ದರಗಳ ತರ್ಕಬದ್ಧಗೊಳಿಸುವಿಕೆ ಹಾಗೂ ಕೇಂದ್ರದಿಂದ ಸ್ವೀಕೃತವಾಗುವ ತೆರಿಗೆ ಪಾಲಿನ ಕಡಿತದ ಪರಿಣಾಮವಾಗಿ ರಾಜಸ್ವ ಸಂಗ್ರಹಣೆ ಕಡಿಮೆಯಾಗಿದ್ದು, ಇಂತಹ ಆರ್ಥಿಕ ಸವಾಲಿನ ಪರಿಸ್ಥಿತಿಯಲ್ಲಿಯೂ, ನಮ್ಮ ಸರ್ಕಾರವು ಕಳೆದ ಮೂರು ವರ್ಷಗಳಿಂದ ವಿತ್ತೀಯ ಶಿಸ್ತನ್ನು ಜವಾಬ್ದಾರಿಯುತವಾಗಿ ಮತ್ತು ದೃಢವಾಗಿ ಪಾಲಿಸಿಕೊಂಡು ಬಂದಿದೆ. ನಾಲ್ಕನೇ ವರ್ಷದಲ್ಲಿಯೂ ಸಹ, ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ನಿಯಮಾನುಸಾರ, ರಾಜ್ಯದ ವಿತ್ತೀಯ ಕೊರತೆಯನ್ನು ಜಿ.ಎಸ್.ಡಿ.ಪಿಯ ಶೇ.3 ರೊಳಗೆ ಹಾಗೂ ಒಟ್ಟು ಸಾರ್ವಜನಿಕ ಹೊಣೆಗಾರಿಕೆಗಳನ್ನು ಜಿ.ಎಸ್.ಡಿ.ಪಿಯ ಶೇ.25 ರೊಳಗೆ ನಿರ್ವಹಿಸಲಾಗಿದೆ. ಈ ಮೂಲಕ ವಿತ್ತೀಯ ಶಿಸ್ತಿನ ಪಾಲನೆಯೊಂದಿಗೆ ದೀರ್ಘಾವಧಿಯ ಹಣಕಾಸಿನ ಸುಸ್ಥಿರತೆಗೆ ರಾಜ್ಯದ ಬದ್ಧತೆಯನ್ನು ಮತ್ತೊಮ್ಮೆ ಪುನರುಚ್ಚರಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.