ಮೋದಿ ಸರ್​ ಹೆಚ್ಚು ಸಿಹಿ ತಿನ್ನದಂತೆ ನನ್ನ ತಂದೆಗೆ ಬುದ್ಧಿ ಹೇಳಿ ಎಂದ ಯುವಕ: ಪ್ರಧಾನಿ ಕೊಟ್ಟ ಉತ್ತರ ವೈರಲ್​! PM Modi

ಮೋದಿ ಸರ್​ ಹೆಚ್ಚು ಸಿಹಿ ತಿನ್ನದಂತೆ ನನ್ನ ತಂದೆಗೆ ಬುದ್ಧಿ ಹೇಳಿ ಎಂದ ನೆಟ್ಟಿಗ: ಪ್ರಧಾನಿ ಕೊಟ್ಟ ಉತ್ತರ ವೈರಲ್​! PM Modi
ಮೋದಿ ಸರ್​ ಹೆಚ್ಚು ಸಿಹಿ ತಿನ್ನದಂತೆ ನನ್ನ ತಂದೆಗೆ ಬುದ್ಧಿ ಹೇಳಿ ಎಂದ ನೆಟ್ಟಿಗ: ಪ್ರಧಾನಿ ಕೊಟ್ಟ ಉತ್ತರ ವೈರಲ್​! PM Modi
Published on

ಪ್ರಮುಖ ಮುಖ್ಯಾಂಶಗಳು

  • ನಿಮಗೆ ಗೊತ್ತಿದೆ ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುತ್ತಾರೆ
  • ಏನೇ ವಿಚಾರಗಳಿರಲಿ ಅದನ್ನು ಜಾಲತಾಣದ ಮೂಲಕವೇ ಜನರೊಂದಿಗೆ ಹಂಚಿಕೊಳ್ಳುತ್ತಾರೆ
  • ಜನರಿಗೆ ಏನಾದರೂ ಸಂದೇಶ ಕೊಡಬೇಕಿದ್ದರೂ ಜಾಲತಾಣ ಮೂಲಕವೇ ನೀಡುತ್ತಾರೆ
  • ಪ್ರಧಾನಿ ಮೋದಿ ಮತ್ತು ಜನರ ನಡುವೆ ಜಾಲತಾಣ ಸಂಪರ್ಕ ಸೇತುವೆಯಾಗಿದೆ
ನವದೆಹಲಿ: ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ( PM Modi ) ಅವರು ಸಾಮಾನ್ಯ ಜನರ ಕೂಗುಗಳನ್ನು ಆಲಿಸುತ್ತಾರಾ ಎಂದು ಪ್ರಶ್ನೆ ಮಾಡುವವರಿಗೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ಈ ಒಂದು ವಿಡಿಯೋ ಸೂಕ್ತ ಉತ್ತರವಾಗಿದೆ. ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ ಒಬ್ಬರ ಮನವಿಯನ್ನು ಆಲಿಸಿದ ಪ್ರಧಾನಿ ಮೋದಿ, ಆತನ ಬೇಡಿಕೆ ಈಡೇರಿಸುವ ಮೂಲಕ ಮತ್ತೊಮ್ಮೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 
ನಿಮಗೆ ಗೊತ್ತಿದೆ ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುತ್ತಾರೆ. ಏನೇ ವಿಚಾರಗಳಿರಲಿ ಅದನ್ನು ಜಾಲತಾಣದ ಮೂಲಕವೇ ಜನರೊಂದಿಗೆ ಹಂಚಿಕೊಳ್ಳುತ್ತಾರೆ. ಅದೇ ರೀತಿ ಜನರಿಗೆ ಏನಾದರೂ ಸಂದೇಶ ಕೊಡಬೇಕಿದ್ದರೂ ಜಾಲತಾಣ ಮೂಲಕವೇ ನೀಡುತ್ತಾರೆ. ಪ್ರಧಾನಿ ಮೋದಿ ಮತ್ತು ಜನರ ನಡುವೆ ಜಾಲತಾಣ ಸಂಪರ್ಕ ಸೇತುವೆಯಾಗಿದೆ. ಇದು ನಿಜ ಅನ್ನೋದನ್ನು ವೈರಲ್​ ವಿಡಿಯೋವೊಂದು ಇದೀಗ ಸಾಬೀತು ಮಾಡಿದೆ. 
ಕಂಟೆಂಟ್​ ಕ್ರಿಯೇಟರ್ ಯುವರಾಜ್​ ದುವಾ ಎಂಬುವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದರು. ಅದರಲ್ಲಿ ದುವಾ ಅವರು​ ಪ್ರಧಾನಿ ಮೋದಿ ಬಳಿ ಒಂದು ಮನವಿ ಮಾಡಿಕೊಂಡಿದ್ದಾರೆ. ನನ್ನ ತಂದೆ ಸಿಕ್ಕಾಪಟ್ಟೆ ಸಿಹಿ ತಿನ್ನುತ್ತಾರೆ. ಹೀಗಾಗಿ, ಸಕ್ಕರೆ ಅಂಶವನ್ನು ಕಡಿಮೆ ಮಾಡುವಂತೆ ನನ್ನ ತಂದೆಗೆ ಸಲಹೆ ನೀಡಿ. ನನ್ನ ತಂದೆ ನಿಮ್ಮ ದೊಡ್ಡ ಅಭಿಮಾನಿ ಆಗಿರುವುದರಿಂದ ನೀವು ಹೇಳಿದರೆ ಅವರು ಅತಿಯಾಗಿ ಸಿಹಿ ತಿನ್ನುವುದನ್ನು ಬಿಟ್ಟು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬಹುದು ಎಂದು ದುವಾ ಮನವಿ ಮಾಡಿಕೊಂಡಿದ್ದರು. ಈ ವಿಡಿಯೋವನ್ನು ಪ್ರಧಾನಿ ಮೋದಿಗೆ ಟ್ಯಾಗ್​ ಕೂಡ ಮಾಡಿದ್ದರು.
ಅಚ್ಚರಿಯ ಸಂಗತಿ ಏನೆಂದರೆ, ದುವಾ ಅವರ ಈ ವಿಡಿಯೋ ಪ್ರಧಾನಿ ಮೋದಿ ಅವರ ಗಮನಕ್ಕೆ ಬಂದಿದೆ. ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ದುವಾರ ಮನವಿ ವಿಡಿಯೋವನ್ನು ಶೇರ್​ ಮಾಡಿಕೊಂಡಿರುವ ಪ್ರಧಾನಿ ಮೋದಿ, ಯುವರಾಜ್ ಮನವಿಯಂತೆ, ಅವರ ತಂದೆ ಸಕ್ಕರೆ ಪದಾರ್ಥ ಅಥವಾ ಸಿಹಿ ತಿನಿಸುಗಳನ್ನು ತಿನ್ನುವುದನ್ನು ಕಡಿಮೆ ಮಾಡುವಂತೆ ನಾನು ಕೇಳಿಕೊಳ್ಳುತ್ತೇನೆ. ಆರೋಗ್ಯವಾಗಿರಿ ಮತ್ತು ಸಂತೋಷವಾಗಿರಿ ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ. 
ಮತ್ತೊಂದು ಸ್ಟೋರಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಆರೋಗ್ಯ ವಿಚಾರದಲ್ಲಿ ತುಂಬಾ ಕಾಳಜಿ ವಹಿಸುವಂತೆ ಅದರಲ್ಲೂ ವಿಶೇಷವಾಗಿ ಬೊಜ್ಜಿನ ಬಗ್ಗೆ ಎಚ್ಚರವಹಿಸಿ, ಆರೋಗ್ಯಕರ ಆಹಾರವನ್ನು ಸೇವಿಸುವ ಮೂಲಕ ನಾಗರಿಕರು ತಮ್ಮ ಯೋಗಕ್ಷೇಮದತ್ತ ಗಮನಹರಿಸಬೇಕೆಂದು ಒತ್ತಾಯಿಸಿದ್ದಾರೆ. ಅತಿಯಾದ ಸಕ್ಕರೆ ಸೇವನೆಯು ಅನೇಕ ರೋಗಗಳನ್ನು ಆಹ್ವಾನಿಸುತ್ತದೆ. ಅದರಲ್ಲೂ ಸ್ಥೂಲಕಾಯತೆ ಅಥವಾ ಬೊಜ್ಜು ಬರುವುದು ಖಚಿತ ಎಂದಿರುವ ಮೋದಿ, ಯೋಗವನ್ನು ನಿಮ್ಮ ಜೀವನದ ಒಂದು ಭಾಗವಾಗಿ ಮಾಡಿಕೊಳ್ಳಿ, ಇದು ನಿಮ್ಮನ್ನು ನೀವು ಫಿಟ್​ ಆಗಿರಲು ಮತ್ತು ಆ್ಯಕ್ಟಿವ್​ ಆಗಿ ಇರಿಸಿಕೊಳ್ಳಲು ಇರುವ ಒಂದು ಉತ್ತಮ ದಾರಿ ಎಂದು ನಮೋ ಸಲಹೆ ನೀಡಿದ್ದಾರೆ. 
ಪ್ರಧಾನಿ ಮೋದಿ ಅವರು ತಮ್ಮ ವಿಡಿಯೋಗೆ ಪ್ರತಿಕ್ರಿಯೆ ನೀಡುತ್ತಿದ್ದಂತೆ ಅಚ್ಚರಿ ವ್ಯಕ್ತಪಡಿಸಿರುವ ಯುವರಾಜ್​ ದುವಾ, ಈ ವಿಡಿಯೋ ಇಲ್ಲಿಯವರೆಗೆ ತಲುಪುತ್ತದೆ ಎಂದು ನಾನು ಎಂದಿಗೂ ನಿರೀಕ್ಷೆ ಮಾಡಿರಲಿಲ್ಲ. ಇದು ನಂಬಲು ಅಸಾಧ್ಯವಾಗಿದೆ. ಆದರೂ, ತುಂಬಾ ಖುಷಿಯಾಗಿದೆ ಎಂದು ದುವಾ ಹೇಳಿದ್ದಾರೆ. ಇತರೆ ನೆಟ್ಟಿಗರು ಕೂಡ ದುವಾರನ್ನು ಹೊಗಳುತ್ತಿದ್ದಾರೆ. ಮೋದಿಜಿಯ ಸ್ಟೋರಿ ನೋಡಿ ನಾನು ನಿಮ್ಮ ರೀಲ್‌ ನೋಡಲು ಬಂದಿದ್ದೇನೆ ಎಂದು ನೆಟ್ಟಿಗರೊಬ್ಬರು ಹೇಳಿದರೆ, ನಿಮ್ಮ ತಂದೆ ನಿಮ್ಮ ಬಗ್ಗೆ ತುಂಬಾ ಹೆಮ್ಮೆಪಡಬೇಕು ಏಕೆಂದರೆ, ಪ್ರಧಾನಿ ಮೋದಿ ಅವರು ನಿಮ್ಮ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. ಹೀಗೆ ಮುಂದುವರಿಸಿ ಎಂದು ಕಾಮೆಂಟ್​ ಮಾಡಿದ್ದಾರೆ. ನಿಮ್ಮ ರೀಲ್ ಸರ್ಕಾರದ ಅನುಮೋದನೆ ಪಡೆದಿದ್ದು, ಪ್ರಧಾನಿ ಮೋದಿ ಅದನ್ನು ತಮ್ಮ ಇನ್​ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಬ್ರೋ ನಿಮಗೆ ಅಭಿನಂದನೆಗಳು ಎಂದು ಹೇಳಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net