ಯಾವ ರಿಪೋರ್ಟೋ ಗೊತ್ತಿಲ್ಲ, ಮೆಮೊರಿ ರಿಫ್ರೆಶ್ ಮಾಡ್ಕೋಬೇಕು!: ಎಚ್‌ಡಿಕೆ ಬಿಡದಿ ಆರೋಪಕ್ಕೆ ಎಚ್ ಕೆ ಪಾಟೀಲ್ ಸ್ಪಷ್ಟನೆ | Bidadi Township

Bidadi Township | ಯಾವ ರಿಪೋರ್ಟೋ ಗೊತ್ತಿಲ್ಲ, ಮೆಮೊರಿ ರಿಫ್ರೆಶ್ ಮಾಡ್ಕೋಬೇಕು!: ಎಚ್‌ಡಿಕೆ ಬಿಡದಿ ಆರೋಪಕ್ಕೆ ಎಚ್ ಕೆ ಪಾಟೀಲ್ ಸ್ಪಷ್ಟನೆ
Bidadi Township | ಯಾವ ರಿಪೋರ್ಟೋ ಗೊತ್ತಿಲ್ಲ, ಮೆಮೊರಿ ರಿಫ್ರೆಶ್ ಮಾಡ್ಕೋಬೇಕು!: ಎಚ್‌ಡಿಕೆ ಬಿಡದಿ ಆರೋಪಕ್ಕೆ ಎಚ್ ಕೆ ಪಾಟೀಲ್ ಸ್ಪಷ್ಟನೆ
Published on
ಬೆಂಗಳೂರು: ಬಿಡದಿ ಟೌನ್‌ಶಿಪ್ (Bidadi Township) ವಿಚಾರವಾಗಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಮಾಜಿ ಸಚಿವ ಎಚ್ ಕೆ ಪಾಟೀಲ್ ಅವರು ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದು, ಕುಮಾರಸ್ವಾಮಿಯವರು ಯಾವ ಸತ್ಯ ಶೋಧನಾ ಸಮಿತಿ ವರದಿಯ ಬಗ್ಗೆ ಮಾತನಾಡುತ್ತಿದ್ದಾರೋ ನನಗೆ ಗೊತ್ತಿಲ್ಲ, ನನ್ನ ಮೆಮೊರಿಯನ್ನು ಒಮ್ಮೆ ರಿಫ್ರೆಶ್ ಮಾಡಿಕೊಳ್ಳಬೇಕಾಗಿದೆ ಎಂದರು.
ಡಿಸಿಎಂ ಡಾ ಜಿ. ಪರಮೇಶ್ವರ್ ಅವರ ಭೇಟಿಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಎಚ್​ ಕೆ ಪಾಟೀಲ್​ ಅವರು, ತಾವು ಹಿಂದೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಅಧ್ಯಕ್ಷರಾಗಿದ್ದಾಗ ಎಲ್ಲರನ್ನೂ ಕರೆದುಕೊಂಡು ಈಗಲ್ಟನ್ ಹಾಗೂ ಖೋಡೆಗೆ ಸೇರಿದ ಸುಮಾರು 750 ಎಕರೆ ಪ್ರದೇಶಗಳಿಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು. ಕುಮಾರಸ್ವಾಮಿಯವರು ಅದೇ ವರದಿಯನ್ನು ಪ್ರಸ್ತಾಪ ಮಾಡಿದ್ದಾರೋ ಏನೋ ತಿಳಿಯದು ಎಂದಿರುವ ಎಚ್​ಕೆಪಿ, ತಾವು ಮತ್ತೊಮ್ಮೆ ಆ ವರದಿಯನ್ನು ಪರಿಶೀಲಿಸಿ ತಮ್ಮ ನಿಖರ ಅಭಿಪ್ರಾಯವನ್ನು ತಿಳಿಸುವುದಾಗಿ ಸ್ಪಷ್ಟಪಡಿಸಿದರು.

ಡಿಸಿಎಂ ಜಿ. ಪರಮೇಶ್ವರ್ ಭೇಟಿಯ ಬಗ್ಗೆ ಹೇಳಿದ್ದೇನು..?

ಇದೇ ವೇಳೆ ಡಿಸಿಎಂ ಜಿ. ಪರಮೇಶ್ವರ್ ಅವರ ಭೇಟಿಯ ಕುರಿತು ಮಾತನಾಡಿದ ಎಚ್​​ ಕೆ ಪಾಟೀಲ್​, ಪರಮೇಶ್ವರ್ ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ತಾವೇ ಅವರನ್ನು ಭೇಟಿಯಾಗಲು ಬರುವುದಾಗಿ ಫೋನ್ ಮಾಡಿದ್ದಾಗಿ ತಿಳಿಸಿದರು. ಆದರೆ ಪರಮೇಶ್ವರ್ ಅವರೇ ಬೇಡ ಎಂದು ತಾವೇ ತಮ್ಮ ನಿವಾಸಕ್ಕೆ ಬಂದು ಭೇಟಿಯಾಗಿದ್ದಾರೆ ಎಂದು ತಿಳಿಸಿದರು. ತಮ್ಮ ಆತ್ಮೀಯ ಸ್ನೇಹಿತರೊಬ್ಬರು ಡಿಸಿಎಂ ಆಗಿರುವುದು ತಮಗೆ ತುಂಬ ಖುಷಿ ತಂದಿದೆ ಎಂದಿರುವ ಮಾಜಿ ಸಚಿವರು, ಇಬ್ಬರೂ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಲ್ಲದೆ, ಜೊತೆಯಾಗಿ ಚಹಾ ಕುಡಿದು ಉಪ್ಪಿಟ್ಟು ಸವಿದಿರುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದ ಕೆಲ ನಾಯಕರು ಡಿಸಿಎಂ ಅವರನ್ನು ಸನ್ಮಾನಿಸಿದರು ಎಂದು ತಿಳಿಸಿದರು.

ಸಚಿವ ಸ್ಥಾನ ಮಿಸ್​ ಆಗಿದ್ದೇಕೆ..?

ಇನ್ನು ತಮಗೆ ಸಚಿವ ಸ್ಥಾನ ಸಿಗದೇ ಇರುವ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಎಚ್​​ ಕೆ ಪಾಟೀಲ್​ ಅವರು, ತಮಗೆ ಮಂತ್ರಿ ಸ್ಥಾನ ಸಿಗಬೇಕೆಂದು ಅಭಿಮಾನಿಗಳು ಅಪೇಕ್ಷೆ ಪಡುವುದು ಸಹಜ, ಆದರೆ ಅಷ್ಟಕ್ಕೇ ಅಸಮಾಧಾನ ಮಾಡಿಕೊಂಡು ಕೂರಲು ಸಾಧ್ಯವಿಲ್ಲ ಎಂದು ಹೇಳಿದರು. ಸಚಿವ ಸ್ಥಾನ ತಪ್ಪಿರುವ ಬಗ್ಗೆ ಮಾಧ್ಯಮಗಳು ಮುಖ್ಯಮಂತ್ರಿಗಳನ್ನು ಅಥವಾ ಎಐಸಿಸಿ ಅಧ್ಯಕ್ಷರನ್ನು ಕೇಳಬಹುದು. ಎಐಸಿಸಿ ಅಧ್ಯಕ್ಷರು ತಮಗೆ ಅತ್ಯಂತ ಆತ್ಮೀಯರಾಗಿದ್ದು, ತಮ್ಮ ನಡುವಿನ ಸಂಬಂಧ ತಂದೆಯವರ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ವಿಧಾನಸಭೆಯ ವಿಪಕ್ಷ ನಾಯಕರಾಗಿದ್ದಾಗ ತಾವು ಮೇಲ್ಮನೆಯ ವಿಪಕ್ಷ ನಾಯಕರಾಗಿದ್ದು, ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ಅವರು ಗೃಹ ಸಚಿವರಾಗಿದ್ದರೆ, ತಾವು ಜಲಸಂಪನ್ಮೂಲ ಮತ್ತು ಲೋಕಪಯೋಗಿ ಸಚಿವರಾಗಿ ಕೆಲಸ ಮಾಡಿದ್ದನ್ನು ಸ್ಮರಿಸುತ್ತಾ, ನಮ್ಮ ನಡುವೆ ರಾಜಕೀಯ ಮಾತ್ರವಲ್ಲದೆ ಸಾಮಾಜಿಕ ಸಂಬಂಧಗಳೂ ಬಹಳ ಗಾಢವಾಗಿವೆ ಎಂದ ಎಚ್​​ ಕೆ ಪಾಟೀಲ್​, ಎಐಸಿಸಿ ಅಧ್ಯಕ್ಷರು ನಮ್ಮ ಹಿತೈಷಿಗಳಾಗಿರುವುದರಿಂದ ಅವರನ್ನು ಭೇಟಿಯಾಗಲು ತಮಗೆ ಯಾವುದೇ ಹಿಂಜರಿಕೆಯಿಲ್ಲ ಮತ್ತು ಮಂತ್ರಿಮಂಡಲ ರಚನೆ ಸಂದರ್ಭದಲ್ಲೂ ಅವರನ್ನು ಭೇಟಿಯಾಗಿ ಬೇರೆ ಬೇರೆ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿರುವುದಾಗಿ ಸ್ಪಷ್ಟಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net