ಹೋರ್ಮುಜ್ ದಿಗ್ಬಂಧನ! ಯುದ್ಧವಿಲ್ಲದೆ ಇರಾನ್ ಕತ್ತು ಹಿಸುಕಿತಾ ಅಮೆರಿಕ? ಟ್ರಂಪ್ ಪ್ಲ್ಯಾನ್‌ಗೆ ಇರಾನ್ ಅರ್ಥಿಕತೆ ಶೇಕ್! Iran Sanctions

ಹೋರ್ಮುಜ್ ದಿಗ್ಬಂಧನ! ಯುದ್ಧವಿಲ್ಲದೆ ಇರಾನ್ ಕತ್ತು ಹಿಸುಕಿತಾ ಅಮೆರಿಕ? ಟ್ರಂಪ್ ಪ್ಲ್ಯಾನ್‌ಗೆ ಇರಾನ್ ಅರ್ಥಿಕತೆ ಶೇಕ್!
ಹೋರ್ಮುಜ್ ದಿಗ್ಬಂಧನ! ಯುದ್ಧವಿಲ್ಲದೆ ಇರಾನ್ ಕತ್ತು ಹಿಸುಕಿತಾ ಅಮೆರಿಕ? ಟ್ರಂಪ್ ಪ್ಲ್ಯಾನ್‌ಗೆ ಇರಾನ್ ಅರ್ಥಿಕತೆ ಶೇಕ್!
Published on
ಟೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಈಗ ಕೇವಲ ಶಸ್ತ್ರಾಸ್ತ್ರಗಳಿಗೆ ಸೀಮಿತವಾಗಿಲ್ಲ, ಅದು ಭೀಕರ ಆರ್ಥಿಕ ಯುದ್ಧವಾಗಿ ರೂಪಾಂತರಗೊಂಡಿದೆ. ಹೋರ್ಮುಜ್ ಜಲಸಂಧಿಯಲ್ಲಿ ಅಮೆರಿಕ ವಿಧಿಸಿರುವ ಕಟ್ಟುನಿಟ್ಟಿನ ನೌಕಾ ದಿಗ್ಬಂಧನದಿಂದಾಗಿ ಇರಾನ್(Iran Sanctions) ಪ್ರತಿದಿನ ಬರೋಬ್ಬರಿ 435 ಮಿಲಿಯನ್ ಡಾಲರ್ (ಸುಮಾರು 4,081 ಕೋಟಿ ರೂಪಾಯಿ) ಆರ್ಥಿಕ ನಷ್ಟ ಅನುಭವಿಸಲಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರದಿಂದ ಜಾರಿಗೆ ತಂದಿರುವ ಈ ದಿಗ್ಬಂಧನವು ಇರಾನ್‌ನ ತೈಲ, ರಸಗೊಬ್ಬರ ಮತ್ತು ಆಹಾರ ಪದಾರ್ಥಗಳ ಸಾಗಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಗುರಿ ಹೊಂದಿದೆ. ಇದರಿಂದ ಇರಾನ್‌ನಲ್ಲಿ ಹಣದುಬ್ಬರ ಗಗನಕ್ಕೇರಲಿದ್ದು, ದೇಶದ ಆರ್ಥಿಕ ಬೆನ್ನೆಲುಬನ್ನೇ ಮುರಿಯುವ ಸಾಧ್ಯತೆ ದಟ್ಟವಾಗಿದೆ.

ನಷ್ಟದ ಲೆಕ್ಕಾಚಾರ: ತೈಲ ರಫ್ತಿಗೆ ಬಿದ್ದ ಬಲವಾದ ಏಟು

ಅಮೆರಿಕದ ಖಜಾನೆ ಇಲಾಖೆಯ ಮಾಜಿ ಅಧಿಕಾರಿ ಮಿಯಾದ್ ಮಾಲೆಕಿ ಪ್ರಕಾರ, ಇರಾನ್ ಅನುಭವಿಸಲಿರುವ 435 ಮಿಲಿಯನ್ ಡಾಲರ್ ನಷ್ಟದಲ್ಲಿ ಸುಮಾರು 276 ಮಿಲಿಯನ್ ಡಾಲರ್ ಕೇವಲ ಕಚ್ಚಾ ತೈಲ ಮತ್ತು ಪೆಟ್ರೋಕೆಮಿಕಲ್ಸ್ ರಫ್ತಿನಿಂದಲೇ ಬರಬೇಕಿತ್ತು. ಇರಾನ್‌ನ ಶೇ. 90 ರಷ್ಟು ತೈಲ ರಫ್ತು ಪರ್ಷಿಯನ್ ಕೊಲ್ಲಿಯ ಒಳಗಿರುವ ಖಾರ್ಗ್ ದ್ವೀಪದ ಮೂಲಕವೇ ನಡೆಯುತ್ತದೆ. ಅಮೆರಿಕ ಈಗ ಈ ಮಾರ್ಗವನ್ನು ಗುರಿಯಾಗಿಸಿಕೊಂಡಿರುವುದರಿಂದ ಇರಾನ್‌ನ ನಗದು ಹರಿವು ಸಂಪೂರ್ಣವಾಗಿ ನಿಂತುಹೋಗುವ ಭೀತಿ ಎದುರಾಗಿದೆ.
ಆದರೆ, ಇರಾನ್ ಬಳಿ ಈಗಾಗಲೇ ಸಮುದ್ರದಲ್ಲಿ 154 ಮಿಲಿಯನ್ ಬ್ಯಾರೆಲ್‌ಗಳಷ್ಟು ತೈಲ ಸಂಗ್ರಹವಿದೆ. ಇದು ಅಲ್ಪಾವಧಿಯ ನಷ್ಟವನ್ನು ಸರಿದೂಗಿಸಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಟ್ರಂಪ್ ಕಾರ್ಯತಂತ್ರ: ಯುದ್ಧವಿಲ್ಲದೆ ಇರಾನ್ ಶರಣಾಗತಿ?

ಶ್ವೇತಭವನದ ಮಾಜಿ ಅಧಿಕಾರಿಗಳ ಪ್ರಕಾರ, ಇರಾನ್‌ನ ಖಾರ್ಗ್ ದ್ವೀಪವನ್ನು ಸೇನೆಯ ಮೂಲಕ ವಶಪಡಿಸಿಕೊಳ್ಳುವ ಬದಲು, ಹೊರಗಿನಿಂದಲೇ ದಿಗ್ಬಂಧನ ಹೇರುವುದು ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಅಮೆರಿಕದ ಭೂಸೇನೆಯನ್ನು ಕಣಕ್ಕಿಳಿಸದೆಯೇ ಇರಾನ್‌ನ ಇಂಧನ ಆದಾಯವನ್ನು ಶೂನ್ಯಕ್ಕೆ ತರುವುದು ಟ್ರಂಪ್ ಮಾಸ್ಟರ್ ಪ್ಲ್ಯಾನ್ ಆಗಿದೆ.
ಇದರ ಜೊತೆಗೆ, ಈ ದಿಗ್ಬಂಧನದ ಮೂಲಕ ಅಮೆರಿಕವು ಚೀನಾಗೆ ಒಂದು ಪ್ರಬಲ ಸಂದೇಶ ರವಾನಿಸಿದೆ. ಚೀನಾ ತನ್ನ ಶೇ. 45-50 ರಷ್ಟು ಕಚ್ಚಾ ತೈಲ ಮತ್ತು ಶೇ. 30 ರಷ್ಟು ನೈಸರ್ಗಿಕ ಅನಿಲವನ್ನು ಈ ಜಲಸಂಧಿಯ ಮೂಲಕವೇ ಪಡೆಯುತ್ತದೆ. ಇರಾನ್‌ನ ಮೇಲಿನ ಈ ಒತ್ತಡಕ್ಕೆ ಚೀನಾ ಕೂಡ ಸಾಥ್ ನೀಡುವಂತೆ ಮಾಡುವಲ್ಲಿ ಟ್ರಂಪ್ ಯಶಸ್ವಿಯಾಗಬಹುದು ಎಂದು ಹೇಳಲಾಗುತ್ತಿದೆ.

ಕಾರ್ಯಾಚರಣೆಯ ಸವಾಲುಗಳು: ಸಮುದ್ರದಲ್ಲಿ ಹದ್ದಿನ ಕಣ್ಣು

ದಿಗ್ಬಂಧನವನ್ನು ಘೋಷಿಸುವುದು ಸುಲಭ, ಆದರೆ ಅದನ್ನು ಜಾರಿಗೆ ತರುವುದು ಅಮೆರಿಕ ನೌಕಾಪಡೆಗೆ (US Navy) ದೊಡ್ಡ ಸವಾಲಾಗಿದೆ. ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ಅಮೆರಿಕದ 16 ಯುದ್ಧನೌಕೆಗಳಿವೆ, ಆದರೆ ಪರ್ಷಿಯನ್ ಕೊಲ್ಲಿಯ ಒಳಗಡೆ ಸದ್ಯಕ್ಕೆ ಯಾವುದೇ ಪ್ರಮುಖ ಹಡಗುಗಳಿಲ್ಲ ಎಂದು ವರದಿಯಾಗಿದೆ.

ಎದುರಾಗಲಿರುವ ಪ್ರಮುಖ ಸವಾಲುಗಳು

ದಟ್ಟಣೆ: ಹೋರ್ಮುಜ್ ಜಲಸಂಧಿಯು ವಿಶ್ವದ ಅತ್ಯಂತ ಜನದಟ್ಟಣೆಯ ಹಡಗು ಮಾರ್ಗವಾಗಿದೆ. ಇಲ್ಲಿ ದಿನನಿತ್ಯ ನೂರಾರು ಹಡಗುಗಳು ಸಂಚರಿಸುತ್ತವೆ. ಅವುಗಳಲ್ಲಿ ಇರಾನ್‌ನ ಹಡಗುಗಳನ್ನು ಪ್ರತ್ಯೇಕಿಸಿ ತಡೆಯುವುದು ಸುಲಭವಲ್ಲ.
ಜಾಸ್ಕ್ ಟರ್ಮಿನಲ್: ಹೋರ್ಮುಜ್ ಜಲಸಂಧಿಯ ಹೊರಗಿರುವ ಜಾಸ್ಕ್ ಟರ್ಮಿನಲ್ ಮೂಲಕ ತೈಲ ರಫ್ತು ಮಾಡಲು ಇರಾನ್ ಪ್ರಯತ್ನಿಸಬಹುದು.
ಕಾನೂನು ಮತ್ತು ಭದ್ರತೆ: ನೌಕಾಪಡೆಯ ಕಾನೂನು ಇಲಾಖೆಯ ಸ್ಪಷ್ಟ ಮಾರ್ಗಸೂಚಿ ಇಲ್ಲದೆ ಹಡಗುಗಳನ್ನು ವಶಪಡಿಸಿಕೊಳ್ಳುವುದು ಅಂತಾರಾಷ್ಟ್ರೀಯ ಬಿಕ್ಕಟ್ಟಿಗೆ ಕಾರಣವಾಗಬಹುದು.
ನೌಕಾ ತಜ್ಞರ ಪ್ರಕಾರ, ಅಮೆರಿಕವು ಆರಂಭಿಕ ದಿನಗಳಲ್ಲಿ ಎಷ್ಟು ಹಡಗುಗಳನ್ನು ವಶಪಡಿಸಿಕೊಳ್ಳುತ್ತದೆ ಮತ್ತು ಇತರ ದೇಶಗಳ ಹಡಗುಗಳಿಗೆ ಎಷ್ಟು ಎಚ್ಚರಿಕೆ ನೀಡುತ್ತದೆ ಎಂಬುದರ ಮೇಲೆ ಈ ದಿಗ್ಬಂಧನದ ಯಶಸ್ಸು ನಿರ್ಧಾರವಾಗಲಿದೆ.

ಜಾಗತಿಕ ತಲ್ಲಣ ಮತ್ತು ಭಾರತದ ಮೇಲೆ ಪರಿಣಾಮ

ಯುದ್ಧದ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 87 ಡಾಲರ್ ದಾಟಿದ್ದು, ದಿಗ್ಬಂಧನ ಮುಂದುವರಿದರೆ ಇದು ನೂರು ಡಾಲರ್ ಗಡಿ ದಾಟುವುದು ನಿಶ್ಚಿತ. ಇದು ಕೇವಲ ಇರಾನ್ ಮಾತ್ರವಲ್ಲದೆ, ಇಂಧನಕ್ಕಾಗಿ ಅರಬ್ ರಾಷ್ಟ್ರಗಳ ಮೇಲೆ ಅವಲಂಬಿತವಾಗಿರುವ ಭಾರತ ಸೇರಿದಂತೆ ಏಷ್ಯಾದ ಅನೇಕ ದೇಶಗಳ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಲಿದೆ.
ಒಟ್ಟಾರೆಯಾಗಿ, ಅಮೆರಿಕದ ಈ ಆರ್ಥಿಕ ಕತ್ತು ಹಿಸುಕುವ ತಂತ್ರವು ಇರಾನ್ ಅನ್ನು ಮಾತುಕತೆಗೆ ಮರಳುವಂತೆ ಮಾಡುತ್ತದೆಯೇ ಅಥವಾ ಇರಾನ್ ಮತ್ತೊಂದು ಮಹಾಯುದ್ಧಕ್ಕೆ ನಾಂದಿ ಹಾಡುತ್ತದೆಯೇ ಎಂಬುದು ಈಗಿನ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net