ಭಾಷಣ ಮಾಡದೆಯೇ ಸದನದಿಂದ ಹೊರನಡೆದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್! Thawar Chand Gehlot

Thawar Chand Gehlot
Thawar Chand Gehlot
Published on
ಬೆಂಗಳೂರು: ವಿಧಾನಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ( Thawar Chand Gehlot ) ನಿರಾಕರಿಸಿ ಹೊರ ನಡೆದಿದ್ದಾರೆ. ಕರ್ನಾಟಕ ವಿಧಾನಮಂಡಲದ ಬಜೆಟ್ ಅಧಿವೇಶನದ ಮೊದಲ ದಿನವೇ ರಾಜಭವನ ಮತ್ತು ರಾಜ್ಯ ಸರ್ಕಾರದ ನಡುವಿನ ಶೀತಲ ಸಮರ ಬೀದಿಗೆ ಬಂದಿದೆ.
ಜಂಟಿ ಅಧಿವೇಶನದಲ್ಲಿ ಮಾತನಾಡಲು ರಾಜ್ಯ ಸರ್ಕಾರ ಸಿದ್ಧಪಡಿಸಿರುವ ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದ ಸಾಧನೆಗಳಿಗಿಂತ ಹೆಚ್ಚಾಗಿ, ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಹಾಗೂ ಆರೋಪಗಳಿಗೆ ಸೀಮಿತವಾಗಿದೆ ಎಂಬುದು ರಾಜಭವನದ ವಾದ. ಈ ಕಾರಣಕ್ಕೆ ಭಾಷಣ ಓದಲು ರಾಜ್ಯಪಾಲರು ನಿರಾಕರಿಸಿದ್ದರು. ಈ ಒಂದು ನಡೆ ಮತ್ತೊಮ್ಮೆ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ವಾಗ್ವಾದಕ್ಕೆ ನಿನ್ನೆ ಕಾರಣವಾಗಿತ್ತು. ಈ ಎಲ್ಲ ಚರ್ಚೆ ನಡುವೆ ಇಂದು ರಾಜ್ಯಪಾಲರು ವಿಧಾನಸೌಧಕ್ಕೆ ಆಗಮಿಸಿದ್ದರು.
ಭಾರೀ ಹೈಡ್ರಾಮಾ ಬಳಿಕ ಕೊನೆಗೂ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ವಿಧಾನಸೌಧಕ್ಕೆ ಆಗಮಿಸಿದ್ದಾರೆ. ವಿಧಾನ ಸೌಧಕ್ಕೆ ಬರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಹೆಚ್‌.ಕೆ ಪಾಟೀಲ್‌ ಸೇರಿದಂತೆ ಇತರ ಸಚಿವರು ಹೂಗುಚ್ಛ ನೀಡಿ ಸ್ವಾಗತಿಸಿದ್ದಾರೆ. ಬಳಿಕ ರೆಡ್ ಕಾರ್ಪೆಟ್ ಮೂಲಕ ವಿಧಾನಸೌಧದೊಳಗೆ ಕರೆದೊಯ್ದರು. ರಾಜ್ಯಪಾಲರು ಪೀಠದ ಬಳಿ ನಿಲ್ಲುತ್ತಿದ್ದಂತೆ, ರಾಷ್ಟ್ರಗೀತೆ ನುಡಿಸಲಾಯಿತು.
ಸಾಂಪ್ರದಾಯಿಕವಾಗಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಬೇಕಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಆರ್ಥಿಕ ಸ್ಥಿತಿಗತಿಗಳನ್ನು ನಿಭಾಯಿಸುವಲ್ಲಿ ನನ್ನ ಸರ್ಕಾರ ಬದ್ಧವಾಗಿದೆ ಎಂದು ಕೇವಲ ಒಂದೆರಡು ವಾಕ್ಯಗಳಲ್ಲಿ ಮಾತನಾಡಿ ಶುಭಾಶಯ ತಿಳಿಸಿದ್ದಾರೆ. ಸರ್ಕಾರ ಕೊಟ್ಟ ಭಾಷಣದ ಪ್ರತಿ ಓದದೆ ತೆರಳಿದರು. ಆಡಳಿತ ಪಕ್ಷದ ಶಾಸಕರು ವಿರೋಧ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು.
ಕೇವಲ ಒಂದು ನಿಮಿಷದಲ್ಲಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿ ಸದನದಿಂದ ಹೊರನಡೆದಿರುವುದು ಈಗ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ರಾಜ್ಯಪಾಲರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದಾ?
ರಾಜ್ಯಪಾಲರು ಭಾಷಣ ಓದಲು ನಿರಾಕರಿಸಿದರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ಸಂವಿಧಾನದ 361ನೇ ವಿಧಿ ಅಡ್ಡಿಯಾಗುತ್ತದೆ. ಈ ವಿಧಿಯ ಅಡಿಯಲ್ಲಿ ರಾಜ್ಯಪಾಲರಿಗೆ ಅಧಿಕಾರಾವಧಿಯಲ್ಲಿ ಕಾನೂನು ರಕ್ಷಣೆ ಇರುತ್ತದೆ. ರಾಜ್ಯಪಾಲರ ಈ ನಡೆ ಸಂವಿಧಾನಾತ್ಮಕ ಬಿಕ್ಕಟ್ಟಿಗೆ ಕಾರಣವಾಗುತ್ತದೆಯೇ ಹೊರತು ಶಿಕ್ಷಾರ್ಹ ಅಪರಾಧವಾಗುವುದಿಲ್ಲ.
ಇತ್ತೀಚಿನ ವರ್ಷಗಳಲ್ಲಿ ರಾಜ್ಯಪಾಲರು ಸರ್ಕಾರದ ಭಾಷಣದಲ್ಲಿರುವ ಕೆಲವು ಅಂಶಗಳು "ತಪ್ಪು ಮಾಹಿತಿಯಿಂದ ಕೂಡಿದೆ" ಅಥವಾ "ಸಂವಿಧಾನ ವಿರೋಧಿಯಾಗಿದೆ" ಎಂದು ಹೇಳಿ ಆ ಭಾಗಗಳನ್ನು ಬಿಟ್ಟು ಓದಿದ ಅಥವಾ ಭಾಷಣವನ್ನೇ ಓದದೆ ಹೊರನಡೆದ ಘಟನೆಗಳು ನಡೆದಿವೆ. ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕೇರಳ ಸರ್ಕಾರದಲ್ಲಿ ಇಂತಹ ಘಟನೆಗಳು ನಡೆದಿವೆ. ಈ ರೀತಿ ಆದಾಗ ಸರ್ಕಾರಗಳು ವಿಧಾನಸಭೆಯಲ್ಲಿ ರಾಜ್ಯಪಾಲರು ಬಿಟ್ಟುಬಿಟ್ಟ ಭಾಗಗಳನ್ನೂ ಸೇರಿಸಿ "ಮೂಲ ಭಾಷಣವನ್ನೇ" ಕಡತಕ್ಕೆ ಸೇರಿಸುವ ನಿರ್ಣಯವನ್ನು ಅಂಗೀಕರಿಸುತ್ತವೆ.
ಸಂವಿಧಾನದ 163ನೇ ವಿಧಿಯಂತೆ, ರಾಜ್ಯಪಾಲರು ಮಂತ್ರಿಮಂಡಲದ ಸಲಹೆ ಮತ್ತು ಸೂಚನೆಯ ಮೇರೆಗೆ ಕಾರ್ಯನಿರ್ವಹಿಸಬೇಕು. ಭಾರತವು ಬ್ರಿಟಿಷ್ ಸಂಸದೀಯ ವ್ಯವಸ್ಥೆಯನ್ನು ಅನುಸರಿಸುತ್ತಿರುವುದರಿಂದ, ಬ್ರಿಟಿಷ್ ರಾಜ/ರಾಣಿ ಹೇಗೆ ಸರ್ಕಾರ ನೀಡಿದ ಭಾಷಣವನ್ನೇ ಓದುತ್ತಾರೋ, ಅದೇ ರೀತಿ ರಾಜ್ಯಪಾಲರು ಕೂಡ ಸರ್ಕಾರದ ಭಾಷಣವನ್ನೇ ಓದಬೇಕು ಎಂಬುದು ನಿಯಮ ನಮ್ಮಲ್ಲಿ ಇದೆ.

ಹೈಕೋರ್ಟ್​ ತೀರ್ಪುಗಳೇನು?

ಇದೇ ರೀತಿಯ ವಿವಾದ ಹಿಂದೊಮ್ಮೆ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿತ್ತು. 1966ರಲ್ಲಿ ರಾಜ್ಯಪಾಲರ ವಿರುದ್ಧ ಪಶ್ವಿಮ ಬಂಗಾಳ ಸರ್ಕಾರ ಹೈಕೋರ್ಟ್​ ಮೆಟ್ಟಿಲೇರಿತ್ತು. ಈ ವೇಳೆ ವಿಚಾರಣೆ ನಡೆಸಿದ ಹೈಕೋರ್ಟ್​, ರಾಜ್ಯಪಾಲರು ಭಾಷಣ ಮಾಡಲು ನಿರಾಕರಿಸುವಂತಿಲ್ಲ, ಅದು ಅವರ ಸಂವಿಧಾನಾತ್ಮಕ ಕರ್ತವ್ಯ ಎಂದು ತೀರ್ಪಿನಲ್ಲಿ ಹೇಳಿತು. ಒಂದು ವೇಳೆ ರಾಜ್ಯಪಾಲರು ಭಾಷಣದ ಕೆಲವು ಭಾಗಗಳನ್ನು ಬಿಟ್ಟು ಓದಿದರೆ ಅಥವಾ ಓದದೆ ಹೊರನಡೆದರೆ, ಅದನ್ನು "ಕಾರ್ಯವಿಧಾನದ ಅನಿಯಮಿತತೆ" ಎಂದು ಪರಿಗಣಿಸಬಹುದೇ ಹೊರತು "ಅಕ್ರಮ" ಎಂದು ಕರೆಯಲಾಗದು ಎಂದು ನ್ಯಾಯಾಲಯ ಹೇಳಿದೆ. ಇದೇ ರೀತಿ, 1967ರಲ್ಲಿ ರಾಜಸ್ಥಾನ ಹೈಕೊರ್ಟ್​ ಕೂಡ ತೀರ್ಪು ನೀಡಿದೆ. ರಾಜ್ಯಪಾಲರು ಭಾಷಣದ ಕೆಲವು ಭಾಗಗಳನ್ನು ಓದಿದರೂ ಸಹ, ಇಡೀ ಭಾಷಣವನ್ನು ಓದಲಾಗಿದೆ ಎಂದು ಪರಿಗಣಿಸಬಹುದು ಎಂದು ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net