ಚಿನ್ನ-ಬೆಳ್ಳಿ ದರ ಇಳಿಮುಖ, ಆಭರಣ ಖರೀದಿಗೆ ಒಲವು-Gold

ಆಭರಣಗಳ ಖರೀದಿಗೆ ಹೆಚ್ಚಿನ ಜನರು ಒಲವು
ಆಭರಣಗಳ ಖರೀದಿಗೆ ಹೆಚ್ಚಿನ ಜನರು ಒಲವು
Published on
ಬೆಂಗಳೂರು: ಮಧ್ಯಪ್ರಾಚ್ಯ ಸಂಘರ್ಷ ಸೇರಿ ವಿವಿಧ ಕಾರಣಗಳಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಳೆದೊಂದು ವಾರದಿಂದ ಚಿನ್ನ ಹಾಗೂ ಬೆಳ್ಳಿ ಬೆಲೆ ಇಳಿಮುಖವಾಗುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಆಭರಣಗಳ ಖರೀದಿಗೆ ಹೆಚ್ಚಿನ ಜನರು ಒಲವು ತೋರುತ್ತಿದ್ದಾರೆ.
ದೇಶದಲ್ಲಿ ಶೇ.30 ಕಾರ್ಪೋರೇಟ್ ಅಥವಾ ಬೃಹತ್ ಆಭರಣ ಮಳಿಗೆಗಳು ಇದ್ದರೆ, ಶೇ.70 ಸಣ್ಣ ಮಳಿಗೆಗಳಿವೆ. ಚಿನ್ನ ಎಂಬುದು ಆಭರಣದ ವಸ್ತುವಲ್ಲ. ಅದೊಂದು ವಿನಿಮಯದ ಹಣವಾಗಿದೆ. ಹಾಗಾಗಿ, ಇರಾಕ್-ಇಸ್ರೇಲ್ ಯುದ್ಧದ ಪರಿಸ್ಥಿತಿಯನ್ನು ಸದ್ಬಳಕೆ ಮಾಡಿಕೊಳ್ಳುತ್ತಿರುವ ಹಲವರು, ವಜ್ರ, ಚಿನ್ನ ಮತ್ತು ಬೆಳ್ಳಿ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಶ್ರೀಮಂತರು ಭವಿಷ್ಯದ ಸುರಕ್ಷತೆಗೆ ಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡಲು ಗಮನಹರಿಸುತ್ತಿದ್ದಾರೆ.
ಇನ್ನೂ ಕೆಲ ಗ್ರಾಹಕರು ಆಭರಣಗಳ ಮಳಿಗೆಗಳಿಗೆ ಭೇಟಿ ನೀಡಿ ಬೆಲೆ ವಿಚಾರಿಸಿ, ‘ಇದೀಗ ಚಿನ್ನ ಖರೀದಿಸಿದರೆ ಎಷ್ಟು ಉಳಿತಾಯವಾಗಲಿದೆ, ಬರುವ ದಿನದಲ್ಲಿ ಇನ್ನಷ್ಟು ಬೆಲೆ ಕುಸಿತವಾಗಲಿದೆಯೇ ಅಥವಾ ಇಲ್ಲವೋ...’ ಎಂದು ಮಾಹಿತಿ ಪಡೆಯುತ್ತಿದ್ದಾರೆ. ಅಲ್ಲದೆ, ಪ್ರತಿ ಚಿನ್ನಾಭರಣ ಅಂಗಡಿಗಳಲ್ಲಿ ಶೇ.90 ಪರಿಚಯ ಇರುವ ಗ್ರಾಹಕರಿದ್ದು, ಸಂಪರ್ಕ ಇರುವವರು ಮುಂಗಡ ಹಣ ಪಾವತಿಸಿ ಹಾಗೂ ಪ್ರತಿ ತಿಂಗಳು ಕಂತಿನ ಮೂಲಕ ಚಿನ್ನಾಭರಣ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಇದೀಗ ಚಿನ್ನಾಭರಣ ಖರೀದಿಯ ವಹಿವಾಟು ತುಸು ಅಧಿಕವಾಗುತ್ತಿದೆ.
ಭಾರತದಲ್ಲೇ ಹೆಚ್ಚು ಗ್ರಾಹಕರು
ವಿಶ್ವದ ಇತರ ರಾಷ್ಟ್ರಗಳಿಗಿಂತ ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರು ಚಿನ್ನಾಭರಣ ಖರೀದಿಯಲ್ಲಿ ತೊಡಗಿದ್ದಾರೆ. ಉತ್ತರ ಭಾರತದಲ್ಲಿ ಶೇ.40 ಜನ ಚಿನ್ನಾಭರಣ ಖರೀದಿಸಿದರೆ, ದಕ್ಷಿಣ ಭಾರತದ ಶೇ.60 ಗ್ರಾಹಕರು ಜನ ಆಭರಣ ಖರೀದಿಸುತ್ತಿದ್ದಾರೆ. ದೇಶದಲ್ಲೇ ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಚಿನ್ನಾಭರಣ ವಹಿವಾಟು ಹೆಚ್ಚಾಗಿ ನಡೆಯುತ್ತಿದೆ.
3-4 ಸಾವಿರ ರೂ. ಇಳಿಕೆ
ಕಳೆದ ತಿಂಗಳು ಪ್ರತಿ ಗ್ರಾಂ ಅಪರಂಚಿ ಚಿನ್ನಕ್ಕೆ 17 ಸಾವಿರ ರೂ. ಇದ್ದರೆ, 22 ಕ್ಯಾರೆಟ್ ಚಿನ್ನಕ್ಕೆ 16 ಸಾವಿರ ರೂ. ಅಸುಪಾಸಿನಲ್ಲಿತ್ತು. ಇದೀಗ, ಯುದ್ಧ ಹಿನ್ನೆಲೆಯಲ್ಲಿ ಮಂಗಳವಾರ ಪ್ರತಿ ಗ್ರಾಂ ಅಪರಂಜಿ ಚಿನ್ನಕ್ಕೆ 13,840 ರೂ. ಇದ್ದರೆ, 22 ಕ್ಯಾರೆಟ್ 12,865 ರೂ. ಇದೆ. ಒಂದು ಕೆಜಿ ಬೆಳ್ಳಿ 2.22 ಲಕ್ಷ ರೂ. ಇದೆ. ಎರಡು ವಾರದ ಅವಧಿಯಲ್ಲಿ ಪ್ರತಿ ಗ್ರಾಂ ಚಿನ್ನಾಭರಣದ ಮೇಲೆ 3-4 ಸಾವಿರ ರೂ. ಇಳಿಮುಖವಾಗಿದೆ.
ಯುದ್ಧದಿಂದ ಆಭರಣ ದರ ಇಳಿಕೆಯಾಗಿದೆ. ಇದನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ 1 ಕೆಜಿ ಬೆಳ್ಳಿ 1.50 ಲಕ್ಷ ರೂ., ಪ್ರತಿ ಗ್ರಾಂ ಅಪರಂಜಿ ಚಿನ್ನ 12-13 ಸಾವಿರ ರೂ.ಗೆ ಬರುವ ಸಾಧ್ಯತೆ ಇದೆ. ಯುದ್ಧ ನಿಂತರೆ ಮತ್ತೆ ಚಿನ್ನದ ಬೆಲೆ ಜಾಸ್ತಿಯಾಗಲಿದೆ. ಹಾಗಾಗಿ, ಹಣ ಇದ್ದವರು ಸಾಮರ್ಥ್ಯಕ್ಕೆ ತಕ್ಕಂತೆ ಆಭರಣ ಖರೀದಿಸುವುದು ಉತ್ತಮ.
- ಡಾ.ಬಿ. ರಾಮಾಚಾರಿ. ರಾಜ್ಯ ಆಭರಣ ತಯಾರಕರ ಸಂಘದ ಅಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net