ಮದ್ವೆಯಾದ 24 ಗಂಟೆಯಲ್ಲಿ ಪತ್ನಿಯನ್ನು ಮನೆಯಿಂದ ಆಚೆ ಹಾಕಿದ ಪತಿ! ಕಾರಣ ಕೇಳಿದ್ರೆ ಕೋಪ ಬರದೇ ಇರದು...Wedding

ಮದ್ವೆಯಾದ 24 ಗಂಟೆಯಲ್ಲಿ ಪತ್ನಿಯನ್ನು ಮನೆಯಿಂದ ಆಚೆ ಹಾಕಿದ ಪತಿ
ಮದ್ವೆಯಾದ 24 ಗಂಟೆಯಲ್ಲಿ ಪತ್ನಿಯನ್ನು ಮನೆಯಿಂದ ಆಚೆ ಹಾಕಿದ ಪತಿ
Published on

ಪ್ರಮುಖ ಮುಖ್ಯಾಂಶಗಳು

  • ಕಾಲ ಎಷ್ಟೇ ಬದಲಾಗುತ್ತಿದ್ದರೂ ವರದಕ್ಷಿಣೆಗಾಗಿ ಕಿರುಕುಳ ನೀಡುವವರು ಮಾತ್ರ ಬದಲಾಗುತ್ತಿಲ್ಲ
  • ಪ್ರತಿದಿನ ಒಂದಲ್ಲ ಒಂದು ಕಡೆ ವರದಕ್ಷಿಣೆ ಕಿರುಕುಳಕ್ಕೆ ಹೆಣ್ಣುಮಗು ಬಲಿಯಾಗುತ್ತಿರುವುದು ವರದಿಯಾಗುತ್ತಿದೆ
  • ಹಣದಾಹಕ್ಕೆ ಮೃಗಗಳಂತೆ ವರ್ತಿಸುವ ಕಿಡಿಗೇಡಿಗಳಿಗೆ ಕಠಿಣವಾದ ಕಡಿವಾಣ ಹಾಕಲೇಬೇಕಿದೆ
ಲಖನೌ: ಕಾಲ ಎಷ್ಟೇ ಬದಲಾಗುತ್ತಿದ್ದರೂ ಮದುವೆಯಾಗಿ ( Wedding ) ವರದಕ್ಷಿಣೆಗಾಗಿ ಕಿರುಕುಳ ನೀಡುವವರು ಮಾತ್ರ ಬದಲಾಗುತ್ತಿಲ್ಲ. ಪ್ರತಿದಿನ ಒಂದಲ್ಲ ಒಂದು ಕಡೆ ವರದಕ್ಷಿಣೆ ಕಿರುಕುಳಕ್ಕೆ ಹೆಣ್ಣುಮಗು ಬಲಿಪಶು ಆಗುತ್ತಿರುವುದು ವರದಿಯಾಗುತ್ತಲೇ ಇದೆ. ಹಣದಾಹಕ್ಕೆ ಮೃಗಗಳಂತೆ ವರ್ತಿಸುವ ಕಿಡಿಗೇಡಿಗಳಿಗೆ ಕಠಿಣವಾದ ಕಡಿವಾಣ ಹಾಕಲೇಬೇಕಿದೆ. ಇಲ್ಲವಾದಲ್ಲಿ ವರದಕ್ಷಿಣೆ ಎಂಬ ಪೆಡಂಭೂತ ಅಮಾಯಕ ಹೆಣ್ಣುಮಕ್ಕಳನ್ನು ಬಲಿ ಪಡೆಯುತ್ತದೆ.
ತಾಜಾ ಘಟನೆಯೊಂದರಲ್ಲಿ ಪತಿ ಮಹಾಶಯನೊಬ್ಬ ಮದುವೆಯಾದ ಬೆನ್ನಲ್ಲೇ ವರದಕ್ಷಿಣೆ ವಿಚಾರವಾಗಿ ತನ್ನ ಪತ್ನಿಯನ್ನು ಮನೆಯಿಂದ ಆಚೆಗೆ ಹಾಕಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ವರದಕ್ಷಿಣೆಯಾಗಿ 2 ಲಕ್ಷ ರೂ. ಮೌಲ್ಯದ ಮೋಟರ್​ ಬೈಕ್​ ಅನ್ನು ಮನೆಯವರ ಬಳಿ ಕೇಳಲು ನಿರಾಕರಿಸಿದ್ದಕ್ಕೆ ಪಾಪಿ ಪತಿರಾಯ, ಪತ್ನಿಯನ್ನು ಮನೆಯಿಂದ ಆಚೆಗೆ ಹಾಕಿದ್ದಾನೆ. ಮದುವೆಯಾದ ಕೇವಲ 24 ಗಂಟೆಗಳಲ್ಲೇ ಸಂಬಂಧ ಕೊನೆಯಾಗಿದೆ. ವಧು, ತನ್ನ ಅತ್ತೆಯ ಮನೆಗೆ ಬಂದ ಕೂಡಲೇ ವರನ ಕುಟುಂಬವು ವರದಕ್ಷಿಣೆ ಬೇಡಿಕೆ ಇಟ್ಟಿತು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಪ್ರಕರಣ ವಿವರಣೆಗೆ ಬರುವುದಾದರೆ, ಲುಬ್ನಾ ಮತ್ತು ಮೊಹಮ್ಮದ್​ ಇಮ್ರಾನ್​ ಇಬ್ಬರು ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಜುಹಿ ಮೂಲದವರು. ನವೆಂಬರ್​ 29 ರಂದು ಇಬ್ಬರು ಮುಸ್ಲಿಂ ಸಂಪ್ರದಾಯದ ಪ್ರಕಾರ ಮದುವೆಯಾದರು. ಬಳಿಕ ಹೊಸ ಜೀವನ ಆರಂಭಿಸುವ ಕನಸಿನೊಂದಿಗೆ ಲುಬ್ನಾ ತಮ್ಮ ಅತ್ತೆಯ ಮನೆಗೆ ಬಂದಳು. ಮದುವೆಗೆ ಹಾಕಿದ್ದ ಗೋರಂಟಿ ಕೂಡ ಆಕೆಯ ಕೈಯಲ್ಲಿ ಇನ್ನೂ ಮಾಸಿರಲಿಲ್ಲ. ಮುಂದಿನ ಜೀವನದ ಭಾರಿ ಕನಸು ಕಂಡಿದ್ದ ಲುಬ್ನಾಗೆ ಒಂದು ದೊಡ್ಡ ಶಾಕ್​ ಕಾದಿತ್ತು.
ಲುಬ್ನಾ ಅತ್ತೆ ಮನೆಗೆ ಬರುತ್ತಿದ್ದಂತೆ ಆಕೆಯನ್ನು ಸುತ್ತುವರಿದ ಅತ್ತೆ ಮನೆಯವರು ಸ್ವಾಗತವನ್ನು ನೀಡದೇ ಮೋಟರ್​ ಬೈಕ್​ ಅನ್ನು ವರದಕ್ಷಿಣೆಯಾಗಿ ತರುವಂತೆ ಡಿಮ್ಯಾಂಡ್​ ಮಾಡಿದರು. ಎರಡು ಲಕ್ಷದ ಮೌಲ್ಯದ ರಾಯಲ್​ ಎನ್​ಫೀಲ್ಸ್​ ಬುಲೆಟ್​ ಬೇಕೆಂದು ಪಟ್ಟು ಹಿಡಿದರು. ಅಲ್ಲದೆ, ತನ್ನ ಪತಿ ಇಮ್ರಾನ್​ಗಾಗಿ ಲುಬ್ನಾ ಏನನ್ನೂ ಪಡೆದಿಲ್ಲ ಎಂದು ಅತ್ತೆ ಮನೆಯವರು ಕೂಗಾಡಿದರು.
ಈ ಬಗ್ಗೆ ಮಾತನಾಡಿರುವ ಲುಬ್ನಾ, ನಾನು ಅತ್ತೆ ಮನೆಗೆ ಬಂದ ಕೂಡಲೇ ಜಗಳ ಆರಂಭವಾಯಿತು. ನೀನು ಬುಲೆಟ್ ಬೈಕ್ ತರದ ಕಾರಣ ಮನೆಗೆ ಹೋಗಿ 2 ಲಕ್ಷ ರೂಪಾಯಿ ತೆಗೆದುಕೊಂಡು ಬರುವಂತೆ ಹೇಳಿದರು. ಇದಿಷ್ಟೇ ಅಲ್ಲದೆ, ನಾನು ಮದುವೆಯಲ್ಲಿ ಧರಿಸಿದ್ದ ಆಭರಣಗಳನ್ನು ಮತ್ತು ನನ್ನ ಕುಟುಂಬದವರು ನೀಡಿದ್ದ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಇದು ಅಷ್ಟಕ್ಕೆ ನಿಲ್ಲಲಿಲ್ಲ, ಅವರೆಲ್ಲ ನನ್ನ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದರು ಮತ್ತು ಮನೆಯಿಂದ ಹೊರಗೆ ಓಡಿಸಿದರು. ಹಣ ತರದೇ ಮನೆಗೆ ಬಾರದಂತೆ ಬೆದರಿಕೆ ಹಾಕಿದರು ಎಂದು ಲುಬ್ನಾ ಆರೋಪಿಸಿದ್ದಾರೆ.
ಇನ್ನು ಮಗಳ ಬಗ್ಗೆ ಮಾತನಾಡಿದ ಲುಬ್ನಾ ತಾಯಿ ಮೆಹ್ತಾಬ್, ಸಂಜೆ 7.30 ರ ಸುಮಾರಿಗೆ ಲುಬ್ನಾ ನಮ್ಮ ಮನೆಯ ಬಾಗಿಲಿಗೆ ಬಂದಳು. ನಾನು ಅನಿರೀಕ್ಷಿತ ಭೇಟಿಯ ಬಗ್ಗೆ ವಿಚಾರಿಸಿದಾಗ, ಆಕೆ ಇದ್ದಕ್ಕಿದ್ದಂತೆ ಅಳಲು ಪ್ರಾರಂಭಿಸಿದಳು ಮತ್ತು ಅತ್ತೆ ಮನೆಯವರು ಕೊಟ್ಟ ಕಿರುಕುಳವನ್ನು ವಿವರಿಸಿದಳು. ನಮ್ಮ ಮಗಳ ಮದುವೆಗೆ ನಾವು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ಸೋಫಾ ಸೆಟ್, ಟೆಲಿವಿಷನ್, ವಾಷಿಂಗ್ ಮೆಷಿನ್, ಡ್ರೆಸ್ಸಿಂಗ್ ಟೇಬಲ್, ವಾಟರ್ ಕೂಲ್, ಡಿನ್ನರ್ ಸೆಟ್, ಬಟ್ಟೆ, ಸ್ಟೀಲ್ ಮತ್ತು ಹಿತ್ತಾಳೆ ಎರಡರಿಂದಲೂ ತಯಾರಿಸಿದ ಅಡುಗೆ ಸಾಮಾನುಗಳು ಸೇರಿದಂತೆ ಅನೇಕ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದೇವೆ ಎಂದು ಮೆಹ್ತಾಬ್​ ಹೇಳಿದರು.
ಮದುವೆಗೂ ಮುಂಚೆಯೇ ಅವರು ಬೈಕ್ ಕೇಳಿರಲಿಲ್ಲ. ಅವರು ಈ ಬೇಡಿಕೆಯನ್ನು ಮೊದಲೇ ಮಾಡಿದ್ದರೆ, ನಾವು ಈ ಮದುವೆಗೆ ಒಪ್ಪಿಕೊಳ್ಳುತ್ತಿರಲಿಲ್ಲ ಎಂದು ಲುಬ್ನಾಳ ತಾಯಿ ಮೆಹ್ತಾಬ್ ಹೇಳಿದರು. ಅಲ್ಲದೆ, ನಮಗೆ ನ್ಯಾಯ ಬೇಕಿದೆ. ಮದುವೆಗೆ ಖರ್ಚು ಮಾಡಿದ ಹಣವನ್ನು ಹಿಂಪಡೆಯಲು ಪ್ರಯತ್ನಿಸುತ್ತಿರುವುದಾಗಿ ಮೆಹ್ತಾಬ್​ ಹೇಳಿದ್ದಾರೆ. ಸದ್ಯ ಇಮ್ರಾನ್ ಮತ್ತು ಅವರ ಕುಟುಂಬದ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net