ಮದುವೆಯ ದಿನ ನಾಪತ್ತೆಯಾಗಿದ್ದ ವರ 3 ದಿನಗಳ ಬಳಿಕ ಪತ್ತೆ: ಆತ ಹೇಳಿದ್ದನ್ನು ಕೇಳಿ ದಂಗಾದ ಪಾಲಕರು! Wedding

ನಾಪತ್ತೆಯಾಗಿದ್ದ ಮೊಹ್ಸಿನ್ ಅಲಿಯಾಸ್ ಮೋನು ಪತ್ತೆ
ನಾಪತ್ತೆಯಾಗಿದ್ದ ಮೊಹ್ಸಿನ್ ಅಲಿಯಾಸ್ ಮೋನು ಪತ್ತೆ
Published on

ಪ್ರಮುಖ ಮುಖ್ಯಾಂಶಗಳು

  • ತೀವ್ರ ಮಾನಸಿಕ ಒತ್ತಡದಿಂದಾಗಿ ಮದುವೆಯ ದಿನ ನಾಪತ್ತೆಯಾಗಿದ್ದ ವರ
  • ಮೂರು ದಿನಗಳ ನಂತರ ಹರಿದ್ವಾರದಲ್ಲಿ ಪತ್ತೆಯಾದ ಮೋಹ್ಸಿನ್​
  • ಪೊಲೀಸರ ವಿಚಾರಣೆಯಲ್ಲಿ ನಾಪತ್ತೆಯಾಗಿದ್ದಕ್ಕೆ ಕಾರಣ ತಿಳಿಸಿದ ವರ ಮೋಹ್ಸಿನ್
ಲಖನೌ: ತೀವ್ರ ಮಾನಸಿಕ ಒತ್ತಡದಿಂದಾಗಿ ಮದುವೆಯ ( Wedding ) ದಿನ ರಾತ್ರಿ ಮನೆಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ 26 ವರ್ಷದ ವರ, ಮೂರು ದಿನಗಳ ನಂತರ ಹರಿದ್ವಾರದಲ್ಲಿ ಪತ್ತೆಯಾಗಿದ್ದಾನೆ.
ಉತ್ತರ ಪ್ರದೇಶದ ಮೀರತ್​ ನಗರದ ಶಾರಧಾನ ಪಟ್ಟಣದ ನಿವಾಸಿ ಮೊಹ್ಸಿನ್ ಅಲಿಯಾಸ್ ಮೋನು ನವೆಂಬರ್ 27ರ ರಾತ್ರಿ ನಾಪತ್ತೆಯಾಗಿದ್ದ. ಅಂದು ಬಲ್ಬ್ ಖರೀದಿಸುವುದಕ್ಕಾಗಿ ಮನೆಯಿಂದ ಹೊರ ಹೋಗಿದ್ದ ಮೊಹ್ಸಿನ್ ಮತ್ತೆ ಹಿಂತಿರುಗಲೇ ಇಲ್ಲ. ಸಾಕಷ್ಟು ಹುಡುಕಾಡಿದ ಬಳಿಕ ಆತನ ಸುಳಿವು ಸಿಗದೇ ಇದ್ದಾಗ, ಕುಟುಂಬ ಸದಸ್ಯರು ಸಮೀಪದ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆತ ರಾತ್ರಿ ಗಂಗಾ ಕಾಲುವೆಯ ಬಳಿ ಅಲೆದಾಡುತ್ತಿರುವುದು ಕಂಡುಬಂದಿತು. ಇದರಿಂದ ಪೊಲೀಸರು ಮತ್ತು ಆತನ ಕುಟುಂಬ ಸದಸ್ಯರು ಆತ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರಬಹುದೆಂದು ಆತಂಕ ವ್ಯಕ್ತಪಡಿಸಿದರು. ಎರಡು ದಿನಗಳ ತೀವ್ರ ಹುಡುಕಾಟದ ಹೊರತಾಗಿಯೂ, ಆತನ ಸುಳಿವು ಮಾತ್ರ ಸಿಗಲಿಲ್ಲ.
ಹೀಗಿರುವಾಗ ಮೊಹ್ಸಿನ್, ಸೋಮವಾರ ಹರಿದ್ವಾರದಿಂದ ದಾರಿಹೋಕರ ಫೋನ್ ಬಳಸಿ ತನ್ನ ತಂದೆಗೆ ಕರೆ ಮಾಡಿ, ತಾನು ಸುರಕ್ಷಿತವಾಗಿದ್ದೇನೆ ಮತ್ತು ಮನೆಗೆ ಮರಳಲು ಬಯಸುತ್ತೇನೆಂದು ಹೇಳಿದ್ದಾನೆ. ಇದಾದ ಬಳಿಕ ಮೀರತ್ ಪೊಲೀಸರ ತಂಡವು ವರನ ತಂದೆ ಮತ್ತು ಸಂಬಂಧಿಕರೊಂದಿಗೆ ಹರಿದ್ವಾರಕ್ಕೆ ಹೋಗಿ ಮೊಹ್ಸಿನ್ ನನ್ನು ರೈಲ್ವೆ ನಿಲ್ದಾಣದ ಬಳಿ ಪತ್ತೆ ಮಾಡಿತು.
ಮದುವೆಯ ರಾತ್ರಿ ನಾನು ತುಂಬಾ ಭಯಭೀತನಾಗಿದ್ದೆ. ಹೀಗಾಗಿ, ತಕ್ಷಣ ಹರಿದ್ವಾರಕ್ಕೆ ಬಸ್ ಹತ್ತಿದೆ. ಅಲ್ಲಿನ ನಿಲ್ದಾಣ ಪ್ರದೇಶದಲ್ಲಿ ಮೂರು ರಾತ್ರಿಗಳನ್ನು ಅಲೆದಾಡುತ್ತಾ ಕಳೆದಿದ್ದೇನೆ ಎಂದು ಮೋಹ್ಸಿನ್​ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ. ಸದ್ಯ ಪೊಲೀಸರು ಮೊಹ್ಸಿನ್‌ನನ್ನು ಅವನ ಕುಟುಂಬ ಸದಸ್ಯರಿಗೆ ಸುರಕ್ಷಿತವಾಗಿ ಒಪ್ಪಿಸಿದ್ದಾರೆ. ತಮ್ಮ ಮಗ ಸುರಕ್ಷಿತವಾಗಿ ಹಿಂತಿರುಗಿದ್ದನ್ನು ಕಂಡು ಕುಟುಂಬ ಸದಸ್ಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net