ಜಗತ್ತಿನ 36 ರಾಷ್ಟ್ರಗಳಲ್ಲಿ ಭಾರತದ ಕ್ರೇಜ್ ಹೇಗಿದೆ...? ಪ್ಯೂ ರಿಸರ್ಚ್ ವರದಿಯ ಅಂಕಿ-ಅಂಶಗಳು ಇಲ್ಲಿವೆ! | Pew Survey Report

Pew Survey Report |  ಪ್ಯೂ ರಿಸರ್ಚ್ ವರದಿಯ ಅಂಕಿ-ಅಂಶಗಳು ಇಲ್ಲಿವೆ!
Pew Survey Report | ಪ್ಯೂ ರಿಸರ್ಚ್ ವರದಿಯ ಅಂಕಿ-ಅಂಶಗಳು ಇಲ್ಲಿವೆ!
Published on

ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಪ್ಯೂ ರಿಸರ್ಚ್ ಸೆಂಟರ್ 36 ದೇಶಗಳಲ್ಲಿ ನಡೆಸಿದ ನೂತನ ಸಮೀಕ್ಷೆಯು ಭಾರತದ ಜಾಗತಿಕ ವರ್ಚಸ್ಸಿನ ಕುರಿತು ತೀಕ್ಷ್ಣ ಹಾಗೂ ವೈವಿಧ್ಯಮಯ ಚಿತ್ರಣವನ್ನು ಹೊರಹಾಕಿದೆ. ಜಗತ್ತಿನಾದ್ಯಂತ ಭಾರತವನ್ನು ಪ್ರೀತಿಸುವ ದೇಶಗಳ ಪಟ್ಟಿಯಲ್ಲಿ ಶ್ರೀಲಂಕಾ ಮೊದಲ ಸ್ಥಾನದಲ್ಲಿದ್ದರೆ, ತೀರಾ ವಿರುದ್ಧವಾದ ಅತಿ ಹೆಚ್ಚು ನಕಾರಾತ್ಮಕ ಅಭಿಪ್ರಾಯ ಹೊಂದಿರುವ ದೇಶವಾಗಿ ಪಾಕಿಸ್ತಾನ ಹೊರಹೊಮ್ಮಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಅದೇ ಸಮಯದಲ್ಲಿ, ಅಮೆರಿಕದಲ್ಲಿ ಭಾರತದ ಕುರಿತಾದ ಸಾರ್ವಜನಿಕ ಅಭಿಪ್ರಾಯವು ಬಹುತೇಕ ಸಮಾನವಾಗಿ ವಿಭಜನೆಯಾಗಿದೆ.

ಈ ವರ್ಷದ ಫೆಬ್ರವರಿ ಮತ್ತು ಮೇ ತಿಂಗಳ ನಡುವೆ 42,000 ಕ್ಕೂ ಹೆಚ್ಚು ಜನರನ್ನು ಒಳಗೊಂಡು ನಡೆಸಲಾದ ಈ ಒಟ್ಟಾರೆ ಸಮೀಕ್ಷೆಯ ಪ್ರಕಾರ, 36 ದೇಶಗಳ ಜನರು ಭಾರತವನ್ನು ನಕಾರಾತ್ಮಕವಾಗಿ ನೋಡುವುದಕ್ಕಿಂತ ಹೆಚ್ಚು ಧನಾತ್ಮಕವಾಗಿ ನೋಡುತ್ತಾರೆ. ಈ ದೇಶಗಳಲ್ಲಿ ಸರಾಸರಿ ಶೇಕಡಾ 45 ರಷ್ಟು ಜನರು ಭಾರತದ ಬಗ್ಗೆ ಅನುಕೂಲಕರ ನಿಲುವು ಹೊಂದಿದ್ದರೆ, ಶೇಕಡಾ 41 ರಷ್ಟು ಜನರು ನಕಾರಾತ್ಮಕ ಅಭಿಪ್ರಾಯ ಹೊಂದಿದ್ದಾರೆ.
ಸಮೀಕ್ಷೆಗೆ ಒಳಪಟ್ಟ ಎಲ್ಲಾ ದೇಶಗಳ ಪೈಕಿ ಶ್ರೀಲಂಕಾದಲ್ಲಿ ಭಾರತದ ಬಗ್ಗೆ ಅತ್ಯಂತ ಹೆಚ್ಚಿನ ಅಂದರೆ ಶೇಕಡಾ 79 ರಷ್ಟು ಧನಾತ್ಮಕ ಅಭಿಪ್ರಾಯ ವ್ಯಕ್ತವಾಗಿದೆ. ಶ್ರೀಲಂಕಾದ ಶೇಕಡಾ 63 ರಷ್ಟು ಜನರು ಭಾರತವನ್ನು ತಮ್ಮ ದೇಶದ ಪ್ರಮುಖ ಮಿತ್ರರಾಷ್ಟ್ರ ಎಂದು ಗುರುತಿಸಿದ್ದರೆ, ಕೇವಲ ಶೇಕಡಾ 11 ರಷ್ಟು ಜನರು ಮಾತ್ರ ನಕಾರಾತ್ಮಕವಾಗಿ ನೋಡುತ್ತಾರೆ. ಇದು 2024 ರ ಸಮೀಕ್ಷೆಗೆ ಹೋಲಿಸಿದರೆ ಗಮನಾರ್ಹ ಏರಿಕೆಯಾಗಿದ್ದು, ಅಂದು ಶೇಕಡಾ 65 ರಷ್ಟು ಜನರು ಧನಾತ್ಮಕ ಅಭಿಪ್ರಾಯ ಹೊಂದಿದ್ದರು.
ದೆಹಲಿ ಮತ್ತು ಕೊಲಂಬೊ ನಡುವಿನ ರಾಜತಾಂತ್ರಿಕ ಬಾಂಧವ್ಯ ಮರುಸ್ಥಾಪನೆಯಾದ ಹಿನ್ನೆಲೆಯಲ್ಲಿ ಈ ಧನಾತ್ಮಕ ಬದಲಾವಣೆ ಕಂಡುಬಂದಿದೆ. 2022 ರಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾದಲ್ಲಿ ಉಂಟಾಗಿದ್ದ ಅಸ್ಥಿರತೆಯ ನಂತರ, ಭಾರತವು 7.5 ಬಿಲಿಯನ್ ಅಮೆರಿಕನ್ ಡಾಲರ್‌ಗೂ ಹೆಚ್ಚಿನ ಸಾಲದ ಸೌಲಭ್ಯ ಮತ್ತು ಆರ್ಥಿಕ ನೆರವು ನೀಡುವ ಮೂಲಕ ದ್ವೀಪ ರಾಷ್ಟ್ರದ ಪುನರ್ನಿರ್ಮಾಣಕ್ಕೆ ನೆರವಾಗಿದೆ. ಇದರ ಹೊರತಾಗಿ ಕೀನ್ಯಾ (ಶೇ. 71), ಯುಕೆ (ಶೇ. 71), ಜರ್ಮನಿ (ಶೇ. 63), ಇಸ್ರೇಲ್ (ಶೇ. 60), ಸ್ವೀಡನ್ (ಶೇ. 55) ಮತ್ತು ಇಟಲಿ (ಶೇ. 56) ದೇಶಗಳಲ್ಲೂ ಭಾರತವು ಅತ್ಯಂತ ಉತ್ತಮ ಧನಾತ್ಮಕ ಅಭಿಪ್ರಾಯವನ್ನು ಹೊಂದಿದೆ.
ನೇಪಾಳ ಮತ್ತು ಬಾಂಗ್ಲಾದೇಶದಂತಹ ಹಲವು ದೇಶಗಳು ತೀವ್ರ ಅಸ್ಥಿರತೆ ಹಾಗೂ ದಂಗೆಗಳನ್ನು ಎದುರಿಸಿರುವ ಭಾರತದ ನೆರೆಹೊರೆಯಲ್ಲಿ ಸಾರ್ವಜನಿಕ ಅಭಿಪ್ರಾಯವು ಮಿಶ್ರಪ್ರತಿಕ್ರಿಯೆಯಿಂದ ಕೂಡಿದೆ. ಬಾಂಗ್ಲಾದೇಶದಲ್ಲಿ ಶೇಕಡಾ 42 ರಷ್ಟು ಜನರು ಭಾರತವನ್ನು ಧನಾತ್ಮಕವಾಗಿ ನೋಡಿದರೆ, ಶೇಕಡಾ 51 ರಷ್ಟು ಜನರು ನಕಾರಾತ್ಮಕ ನಿಲುವು ಹೊಂದಿದ್ದಾರೆ. 500 ಕ್ಕೂ ಹೆಚ್ಚು ಜನರ ಸಾವು ಉಂಟುಮಾಡಿದ 2024 ರ ವಿದ್ಯಾರ್ಥಿ ದಂಗೆಯ ನಂತರ ದೇಶ ಬಿಟ್ಟು ಓಡಿಬಂದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಭಾರತ ಆಶ್ರಯ ನೀಡಿದ ನಂತರ ನೆರೆಹೊರೆಯವರ ನಡುವಿನ ಬಾಂಧವ್ಯದಲ್ಲಿ ಬಿರುಕು ಮೂಡಿದೆ. 2024 ರಲ್ಲಿ ಇಂಡಿಯಾ ಔಟ್ ಅಭಿಯಾನವನ್ನು ಕಂಡಿದ್ದ ಮಲೇಷ್ಯಾದಲ್ಲಿ ಶೇಕಡಾ 58 ರಷ್ಟು ಜನರು ಭಾರತದ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಹೊಂದಿದ್ದಾರೆ.
ಆದಾಗ್ಯೂ, ಏಷ್ಯಾದ ಇತರ ಹಲವು ದೇಶಗಳಲ್ಲಿ ಭಾರತಕ್ಕೆ ಸಾಪೇಕ್ಷವಾಗಿ ಉತ್ತಮ ಮೌಲ್ಯಮಾಪನ ಸಿಕ್ಕಿದೆ. ಜಪಾನ್‌ನ ಶೇಕಡಾ 55, ಸಿಂಗಾಪುರದ ಶೇಕಡಾ 51 ಮತ್ತು ಇಂಡೋನೇಷ್ಯಾದ ಶೇಕಡಾ 50 ರಷ್ಟು ಜನರು ಭಾರತವನ್ನು ಧನಾತ್ಮಕವಾಗಿ ನೋಡುತ್ತಾರೆ. ಅಲ್ಲದೆ ಥೈಲ್ಯಾಂಡ್ (ಶೇ. 55) ಮತ್ತು ಫಿಲಿಪೈನ್ಸ್‌ನಲ್ಲಿ (ಶೇ. 49) ಭಾರತಕ್ಕೆ ಬಲವಾದ ರೇಟಿಂಗ್‌ಗಳು ದೊರೆತಿವೆ.

ಪಾಕ್​ ಜನರ ಅಭಿಪ್ರಾಯವೇನು..?

ನಿರೀಕ್ಷೆಯಂತೆಯೇ, ಪಾಕಿಸ್ತಾನದಲ್ಲಿ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇಕಡಾ 91 ರಷ್ಟು ಜನರು ಭಾರತದ ಬಗ್ಗೆ ನಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಭಿನ್ನಾಭಿಪ್ರಾಯಗಳನ್ನು ಸಂಪೂರ್ಣವಾಗಿ ಹತೋಟಿಯಲ್ಲಿಡುವ ತನ್ನ ಸಿವಿಲ್-ಮಿಲಿಟರಿ ಆಡಳಿತ ವ್ಯವಸ್ಥೆಗೆ ಹೆಸರಾಗಿರುವ ಪಾಕಿಸ್ತಾನದಲ್ಲೂ ಶೇಕಡಾ 7 ರಷ್ಟು ಜನರು ಭಾರತದ ಬಗ್ಗೆ ಧನಾತ್ಮಕ ಅಭಿಪ್ರಾಯ ಹೊಂದಿರುವುದು ನಿಜಕ್ಕೂ ಕುತೂಹಲಕಾರಿಯಾಗಿದೆ.
ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಈ ಇಬ್ಬರು ನೆರೆಹೊರೆಯವರ ನಡುವೆ ದೀರ್ಘಕಾಲದಿಂದ ನಡೆಯುತ್ತಿರುವ ಉದ್ವಿಗ್ನತೆಯನ್ನು ನೋಡಿದರೆ, ಈ ರೀತಿಯ ಫಲಿತಾಂಶ ಬರುವುದು ಆಶ್ಚರ್ಯವೇನಲ್ಲ. ಮೇ 2025 ರಲ್ಲಿ ನಡೆದ ಸಂಘರ್ಷಗಳು ಹಾಗೂ ಸಿಂಧೂ ನದಿ ನೀರು ಒಪ್ಪಂದವನ್ನು ಭಾರತ ಅಮಾನತುಗೊಳಿಸಿದ್ದರಿಂದ ಉಂಟಾದ ರಾಜತಾಂತ್ರಿಕ ಜಟಾಪಟಿಯ ನಂತರ ಎರಡೂ ದೇಶಗಳ ನಡುವಿನ ಬಾಂಧವ್ಯ ತೀರಾ ಕೆಳಮಟ್ಟಕ್ಕೆ ಕುಸಿದಿತ್ತು. ಅದಕ್ಕೂ ಮೊದಲು, ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತವು ಕಳೆದ ವರ್ಷ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಭಾರತವು ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸಿದ್ದಲ್ಲದೆ, ಪಾಕ್​ ವಾಯುನೆಲೆಗಳ ಮೇಲೆಯೂ ದಾಳಿ ನಡೆಸಿತ್ತು.
ಪಾಕಿಸ್ತಾನದ ನಂತರ ಟರ್ಕಿ (ಶೇ. 15 ಧನಾತ್ಮಕ) ಹಾಗೂ ವೆಸ್ಟ್ ಬ್ಯಾಂಕ್ ಮತ್ತು ಪೂರ್ವ ಜೆರುಸಲೇಂನಲ್ಲಿ (ಶೇ. 18) ರೇಟಿಂಗ್‌ಗಳು ಅತ್ಯಂತ ಕಡಿಮೆಯಿವೆ. ಇತ್ತೀಚೆಗೆ ವಲಸೆ ವಿರೋಧಿ ಪ್ರತಿಭಟನೆಗಳನ್ನು ಕಂಡ ಆಸ್ಟ್ರೇಲಿಯಾದಲ್ಲಿ ಶೇಕಡಾ 55 ರಷ್ಟು ಜನರು ಭಾರತದ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಹೊಂದಿದ್ದಾರೆ.

ಅಮೆರಿಕಾದವರ ಕಥೆ ಇದು!...

ಇನ್ನು ಅಮೆರಿಕದ ವಿಚಾರಕ್ಕೆ ಬಂದರೆ, ಅಲ್ಲಿನ ಜನರು ಭಾರತದ ಕುರಿತು ಎರಡು ರೀತಿಯ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಅಮೆರಿಕದಲ್ಲಿ ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಅರ್ಧದಷ್ಟು, ಅಂದರೆ ಶೇಕಡಾ 50 ರಷ್ಟು ಜನರು ಭಾರತದ ಬಗ್ಗೆ ನಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಶೇಕಡಾ 45 ರಷ್ಟು ಜನರು ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ಇದು 2008 ರ ನಂತರ ಭಾರತಕ್ಕೆ ಸಿಕ್ಕ ಅತ್ಯಂತ ಕಡಿಮೆ ರೇಟಿಂಗ್‌ಗಳಲ್ಲಿ ಒಂದಾಗಿದೆ ಎಂದು ಪ್ಯೂ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ. ವಾಸ್ತವವಾಗಿ, ಭಾರತದ ಬಗ್ಗೆ ಧನಾತ್ಮಕ ಅಭಿಪ್ರಾಯ ಹೊಂದಿದ್ದ ಅಮೆರಿಕನ್ನರ ಸಂಖ್ಯೆ 2023 ರಲ್ಲಿ ಶೇಕಡಾ 51 ರಷ್ಟಿತ್ತು. ಆದರೆ 2026 ರ ವೇಳೆಗೆ ಈ ಪ್ರಮಾಣ ಶೇಕಡಾ 45 ಕ್ಕೆ ಕುಸಿದಿದೆ.
ಆದಾಗ್ಯೂ, ಅಮೆರಿಕನ್ನರು ಭಾರತವನ್ನು ನೋಡುವ ರೀತಿಯಲ್ಲಿ ಪಕ್ಷಪಾತದ ವಿಭಜನೆಯೂ ಇದೆ. ಡೆಮಾಕ್ರಟ್‌ಗಳಲ್ಲಿ ಸುಮಾರು ಶೇಕಡಾ 50 ರಷ್ಟು ಜನರು ಭಾರತದ ಬಗ್ಗೆ ಧನಾತ್ಮಕ ಅಭಿಪ್ರಾಯ ಹೊಂದಿದ್ದರೆ, ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ಶೇಕಡಾ 42 ರಷ್ಟು ಜನರು ಮಾತ್ರ ಧನಾತ್ಮಕ ನಿಲುವು ಹೊಂದಿದ್ದಾರೆ. ಜಗತ್ತಿನಲ್ಲಿ ಭಾರತದ ಪ್ರಭಾವದ ಬಗ್ಗೆಯೂ ಪ್ಯೂ ಸಂಸ್ಥೆ ಅಮೆರಿಕನ್ನರನ್ನು ಪ್ರಶ್ನಿಸಿತ್ತು. ಅದರಲ್ಲಿ ಶೇಕಡಾ 30 ರಷ್ಟು ಜನರು ಭಾರತದ ಪ್ರಭಾವ ಬಲಗೊಳ್ಳುತ್ತಿದೆ ಎಂದು ಹೇಳಿದರೆ, ಶೇಕಡಾ 54 ಕ್ಕೂ ಹೆಚ್ಚು ಜನರು ಇತ್ತೀಚಿನ ವರ್ಷಗಳಲ್ಲಿ ಅದರ ಪ್ರಭಾವ ಒಂದೇ ರೀತಿ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನಿತರ ಶೇಕಡಾ 13 ರಷ್ಟು ಜನರು ಭಾರತದ ಪ್ರಭಾವ ಕ್ಷೀಣಿಸುತ್ತಿದೆ ಎಂದು ತಿಳಿಸಿದ್ದಾರೆ.
ಟ್ರಂಪ್ ಆಡಳಿತದಲ್ಲಿ ಸುಂಕಗಳು ಮತ್ತು ಮುಂಬರುವ ವ್ಯಾಪಾರ ಒಪ್ಪಂದದ ವಿಚಾರದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯವು ಏರಿಳಿತಗಳಿಂದ ಕೂಡಿದೆ. ಜೊತೆಗೆ ಟ್ರಂಪ್ ಅವರ ಅಹಂ ತೃಪ್ತಿಪಡಿಸಲು ಯಾವುದೇ ಅವಕಾಶವನ್ನೂ ಬಿಡದ ಪಾಕಿಸ್ತಾನದತ್ತ ಟ್ರಂಪ್ ಒಲವು ತೋರುತ್ತಿರುವುದು ಸಹ ಉಭಯ ದೇಶಗಳ ಬಾಂಧವ್ಯದಲ್ಲಿ ಮುಜುಗರಕ್ಕೆ ಕಾರಣವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ಸಮೀಕ್ಷೆಯು ಪ್ರಾಂತ್ಯವಾರು ಸ್ಪಷ್ಟ ವ್ಯತ್ಯಾಸವನ್ನು ಎತ್ತಿ ತೋರಿಸುತ್ತದೆ. ಏಷ್ಯಾ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಭಾರತವು ಉತ್ತಮ ಧನಾತ್ಮಕ ಬೆಂಬಲವನ್ನು ಪಡೆಯುತ್ತಿದ್ದರೆ, ಯುರೋಪ್ ಮತ್ತು ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಜನರ ಅಭಿಪ್ರಾಯಗಳು ಮಿಶ್ರಪ್ರತಿಕ್ರಿಯೆಯಿಂದ ಕೂಡಿವೆ. ಇನ್ನು ಅಮೆರಿಕದ ವಿಷಯದಲ್ಲಂತೂ ಸಾರ್ವಜನಿಕ ಅಭಿಪ್ರಾಯ ಸಂಪೂರ್ಣವಾಗಿ ಎರಡಾಗಿ ವಿಭಜನೆಯಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net