ಇಂದು ಮಾಜಿ ಪ್ರಧಾನಿ ಖಲೀದಾ ಜಿಯಾ ಅಂತ್ಯಕ್ರಿಯೆ; ಭಾರತದ ಪರವಾಗಿ ವಿದೇಶಾಂಗ ಸಚಿವ ಜೈಶಂಕರ್ ಭಾಗಿ | Jaishankar

ಕೇಂದ್ರ ವಿದೇಶಾಂಗ ಸಚಿವ ಎಸ್​. ಜೈಶಂಕರ್
ಕೇಂದ್ರ ವಿದೇಶಾಂಗ ಸಚಿವ ಎಸ್​. ಜೈಶಂಕರ್
Published on
ನವದೆಹಲಿ: ಭಾರತ ಮತ್ತು ಬಾಂಗ್ಲಾ ದೇಶದ ನಡುವಿನ ಹದಗೆಟ್ಟ ಸಂಬಂಧದ ಮಧ್ಯೆಯೂ ಇಂದು ನಡೆಯುವ ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ ಅವರ ಅಂತ್ಯಕ್ರಿಯೆಯಲ್ಲಿ ಭಾರತದ ಪರವಾಗಿ ಕೇಂದ್ರ ವಿದೇಶಾಂಗ ಸಚಿವ ಎಸ್​. ಜೈಶಂಕರ್(Jaishankar) ಭಾಗವಹಿಸಲಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ವಿದೇಶಾಂಗ ಸಚಿವಾಲಯ, ಬಾಂಗ್ಲಾದ ಮೊದಲ ಮಹಿಳಾ ಪ್ರಧಾನಿ ಹಾಗೂ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (BNP) ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಅವರ ಅಂತ್ಯಕ್ರಿಯೆಯಲ್ಲಿ ಭಾರತದ ಪರವಾಗಿ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದೆ.
ಬಾಂಗ್ಲಾದೇಶದಲ್ಲಿ ಫೆಬ್ರವರಿ 2026ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮತ್ತು ಪ್ರಸ್ತುತ ಭಾರತ-ಬಾಂಗ್ಲಾ ಸಂಬಂಧದಲ್ಲಿ ಸವಾಲುಗಳಿರುವ ಸಮಯದಲ್ಲಿ ಜೈಶಂಕರ್​ ಅವರ ಈ ಭೇಟಿ ರಾಜಕೀಯವಾಗಿ ಅತ್ಯಂತ ಮಹತ್ವದ್ದಾಗಿದೆ ಎನ್ನಲಾಗಿದೆ.

ಖಲೀದಾ ಜಿಯಾ ಅಂತ್ಯಕ್ರಿಯೆ ವಿವರ

ಖಲೀದಾ ಜಿಯಾ ಅವರ 'ನಮಾಜ್-ಎ-ಜನಾಜಾ' (ಅಂತ್ಯಕ್ರಿಯೆಯ ಪ್ರಾರ್ಥನೆ) ಇಂದು ಮಧ್ಯಾಹ್ನ 2 ಗಂಟೆಗೆ ಢಾಕಾದ ಸಂಸತ್ತಿನ ದಕ್ಷಿಣ ಪ್ಲಾಜಾ ಮತ್ತು ಮಣಿಕ್ ಮಿಯಾ ಅವೆನ್ಯೂದಲ್ಲಿ ನಡೆಯಲಿದೆ. ಬಳಿಕ ಮಧ್ಯಾಹ್ನ 3.30ರ ಸುಮಾರಿಗೆ ಅವರ ಪತಿ, ಮಾಜಿ ಅಧ್ಯಕ್ಷ ಜಿಯಾವುರ್ ರೆಹಮಾನ್ ಅವರ ಸಮಾಧಿಯ ಪಕ್ಕದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ಇನ್ನೂ ಖಲೀದಾ ಜಿಯಾ ಅವರ ನಿಧನ ಹಿನ್ನೆಲೆ ಬಾಂಗ್ಲಾದ ಮಧ್ಯಂತರ ಸರ್ಕಾರ, ದೇಶಾದ್ಯಂತ ಮೂರು ದಿನಗಳ ಕಾಲ ಶೋಕಾಚರಣೆ ಮತ್ತು ಇಂದು(ಡಿ. 31) ಸಾರ್ವತ್ರಿಕ ರಜೆ ಘೋಷಣೆ ಮಾಡಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net