ಮಗನಿಂದ ಸನಾತನ ವಿರೋಧ, ತಾಯಿಯಿಂದ ದೈವಾರಾಧನೆ! ಚಾಮುಂಡಿ ಬೆಟ್ಟದಲ್ಲಿ ಸ್ಟಾಲಿನ್ ಪತ್ನಿ ವಿಶೇಷ ಪೂಜೆ | Chamundeshwari

Chamundeshwari
Chamundeshwari
Published on
ಮೈಸೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಧರ್ಮಪತ್ನಿ ದುರ್ಗಾ ಸ್ಟಾಲಿನ್ ಅವರು ಸೋಮವಾರ ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಚಾಮುಂಡಿ(Chamundeshwari) ಬೆಟ್ಟಕ್ಕೆ ಭೇಟಿ ನೀಡಿ, ನಾಡದೇವತೆ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು.
ಸೋಮವಾರ ಸಂಜೆ ಕಟ್ಟುನಿಟ್ಟಿನ ಪೊಲೀಸ್ ಭದ್ರತೆಯೊಂದಿಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ದುರ್ಗಾ ಸ್ಟಾಲಿನ್ ಅವರಿಗೆ ದೇವಾಲಯದ ಆಡಳಿತ ಮಂಡಳಿ ಹಾಗೂ ಅರ್ಚಕರು ಸಾಂಪ್ರದಾಯಿಕವಾಗಿ ಪೂರ್ಣಕುಂಭ ಸ್ವಾಗತ ಕೋರಿದರು. ಬಳಿಕ ಗರ್ಭಗುಡಿಯಲ್ಲಿ ನೆಲೆಸಿರುವ ತಾಯಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಅರ್ಚನೆ, ಮಹಾಮಂಗಳಾರತಿ ನೆರವೇರಿಸಲಾಯಿತು.

ಮಗನ ಹೇಳಿಕೆ ಮತ್ತು ತಾಯಿಯ ನಡೆ

ಸ್ಟಾಲಿನ್ ಅವರ ಪುತ್ರ, ತಮಿಳುನಾಡಿನ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಇತ್ತೀಚೆಗೆ ವಿಧಾನಸಭೆ ಕಲಾಪದಲ್ಲೇ "ಸನಾತನ ಧರ್ಮವನ್ನು ನಾಶ ಮಾಡಬೇಕು" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮಗ ಸನಾತನ ಧರ್ಮದ ವಿರುದ್ಧ ಕಟು ನಿಲುವು ತಳೆದಿದ್ದರೆ, ಇತ್ತ ತಾಯಿ ದುರ್ಗಾ ಸ್ಟಾಲಿನ್ ಅವರು ದೈವಾರಾಧಕಿಯಾಗಿದ್ದು, ಮೈಸೂರಿನ ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿರುವುದು ಈಗ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ

ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ದೇವಸ್ಥಾನದಲ್ಲಿ ತಂಗಿದ್ದ ದುರ್ಗಾ ಸ್ಟಾಲಿನ್ ಅವರು ತಾಯಿಯ ದರ್ಶನ ಪಡೆದು ಭಾವುಕರಾದರು. ದೇವಸ್ಥಾನದ ಪ್ರಧಾನ ಅರ್ಚಕರು ಅವರಿಗೆ ದೇವಿಯ ಶೇಷವಸ್ತ್ರ, ಪ್ರಸಾದ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ಸಮೃದ್ಧಿ, ಶಾಂತಿ ಹಾಗೂ ದೇಶದ ಜನರ ಒಳಿತಿಗಾಗಿ ತಾಯಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿರುವುದಾಗಿ ಅವರ ಆಪ್ತ ಮೂಲಗಳು ತಿಳಿಸಿವೆ.

ಖಾಸಗಿ ಭೇಟಿ

ದುರ್ಗಾ ಸ್ಟಾಲಿನ್ ಅವರ ಈ ಭೇಟಿಯು ಸಂಪೂರ್ಣವಾಗಿ ಖಾಸಗಿಯಾಗಿದ್ದು, ಯಾವುದೇ ರಾಜಕೀಯ ಉದ್ದೇಶ ಹೊಂದಿರಲಿಲ್ಲ ಎಂದು ತಿಳಿದುಬಂದಿದೆ. ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸೂಕ್ತ ವ್ಯವಸ್ಥೆ ಮಾಡಿದ್ದರು. ಅಲ್ಲದೆ, ಬಳಿಕ ಮಂಡ್ಯದ ಶಕ್ತಿದೇವತೆ ಶ್ರೀನಿಮಿಷಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಪಟ್ಟಣ ಸಮೀಪದ ಗಂಜಾಂನಲ್ಲಿರುವ ದೇವಾಲಯಕ್ಕೆ ಸೋಮವಾರ ಬೆಳಗ್ಗೆ ಅವರ ಕುಟುಂಬ ಕೆಲವೇ ಕೆಲವು ಸದಸ್ಯರು,ಆಪ್ತರು ಹಾಗೂ ಮೈಸೂರು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರ ಪುತ್ರಿ ಮತ್ತು ಅಳಿಯ ಅವರೊಂದಿಗೆ ಯಾರಿಗೂ ಯಾವ ಮಾಹಿತಿ ನೀಡದೆ ಎರಡು ಕಾರುಗಳಲ್ಲಿ ಇದೇ ಮೊದಲ ಭಾರಿಗೆ ಆಗಮಿಸಿದ ಅವರು ಹುಣ್ಣಿಮೆಯ ಹಿನ್ನಲೆ ಶಕ್ತಿದೇವಿಗೆ ರೇಷ್ಮೆ ಸೀರೆ, ಗಾಜಿನ ಬಳೆಗಳು, ಹೂವು, ಹಣ್ಣು-ಕಾಯಿ ಅರ್ಪಿಸಿ ದೇವಿಯ ಮಡಿಲು ತುಂಬುವ ಮೂಲಕ ಉಡಿ ಸೇವೆ ಸಲ್ಲಿಸಿ ಪತಿ ಎಂ.ಕೆ.ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಹಾಗೂ ಸಂಪೂರ್ಣ ಕುಟುಂಬಸ್ಥರ ಹೆಸರಿನಲ್ಲಿ ಅರ್ಚನೆ ನಡೆಸಿ ಒಳಿತಿಗಾಗಿ ಸುಮಾರು 30 ನಿಮಿಷಗಳ ಕಾಲ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ದುರ್ಗಾ ಸ್ಟಾಲಿನ್ ಅವರು ದೇವಾಲಯಗಳಿಗೆ ಆಗಾಗ್ಗೆ ಭೇಟಿ ನೀಡುವ ಭಕ್ತೆಯಾಗಿ ಪರಿಚಿತರಾಗಿದ್ದು, ಈ ಹಿಂದೆ Tirumala Venkateswara Temple ಹಾಗೂ Kollur Mookambika Temple ಸೇರಿದಂತೆ ಹಲವು ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿದ್ದರು,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net