ಈ ಆರೋಪಿಗಳು ಎಸಗಿರುವ ಅಪರಾಧಗಳು ರಾಜ್ಯವನ್ನು ಅಸ್ಥಿರಗೊಳಿಸುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಹೊರತು, ಇದನ್ನು ಸ್ವಯಂಪ್ರೇರಿತ ಪ್ರತಿಭಟನೆಗಳು ಎಂದು ಹೇಳಲಾಗುವುದಿಲ್ಲ. ಈ ಆರೋಪಿಗಳು ಗಲಭೆಯ ಮೂಲಕ "ಆಡಳಿತ ಬದಲಾವಣೆ" ಮತ್ತು "ಆರ್ಥಿಕತೆಯ ಕತ್ತು ಹಿಸುಕುವ" ಗುರಿ ಹೊಂದಿದ್ದರು ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಕಳೆದ ವರ್ಷ ನವೆಂಬರ್ 20ರಂದು ದೆಹಲಿ ಪೊಲೀಸರು ಸುಪ್ರೀಂಕೋರ್ಟ್ ಮುಂದೆ ಕಳವಳವೊಂದನ್ನು ವ್ಯಕ್ತಪಡಿಸಿತ್ತು. ಇತ್ತೀಚೆಗೆ ದೆಹಲಿಯ ಕೆಂಪು ಕೋಟೆ ಸಮೀಪ ನಡೆದ ಕಾರು ಸ್ಫೋಟ ಮತ್ತು ವೈಟ್ ಕಾಲರ್ ಭಯೋತ್ಪಾದನಾ ಮಾಡ್ಯೂಲ್ ಭೇದಿಸಿದ ಪ್ರಕರಣವನ್ನು ಉಲ್ಲೇಖಿಸಿ, ಬುದ್ಧಿಜೀವಿಗಳೇ ಭಯೋತ್ಪಾದಕರಾದಾಗ, ಅವರು ಇತರರಿಗಿಂತ ಹೆಚ್ಚು ಅಪಾಯಕಾರಿಯಾಗುತ್ತಾರೆ. ಹೀಗಾಗಿ, ದೆಹಲಿ ಗಲಭೆಯ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ದೆಹಲಿ ಪೊಲೀಸರ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು, ಅವರು ಉನ್ನತ ನ್ಯಾಯಾಲಯದ ಬಳಿ ಮನವಿ ಮಾಡಿಕೊಂಡಿದ್ದರು.