ಕಾಂಗ್ರೆಸ್ ಒಂದು ಕಾಲದಲ್ಲಿ ಪ್ರಬುದ್ಧ ನಾಯಕರಿಂದ ತುಂಬಿತ್ತು; ಇಂದು ರಾಹುಲ್ ಗಾಂಧಿ ಸುತ್ತ ಸುತ್ತುತ್ತಿದೆ: ಕಿರಣ್ ರಿಜಿಜು ಕಿಡಿ | Kiren Rijiju

ಕೇಂದ್ರ ಸಚಿವ ಕಿರಣ್ ರಿಜಿಜು
ಕೇಂದ್ರ ಸಚಿವ ಕಿರಣ್ ರಿಜಿಜು
Published on
ನವದೆಹಲಿ: ನಾನು ಗಾಂಧಿವಾದಿ, ನೆಹರೂವಾದಿ, ರಾಜೀವವಾದಿ, ಆದರೆ ರಾಹುಲ್​ವಾದಿ ಅಲ್ಲ ಎಂಬ ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಹೇಳಿಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಕಿರಣ್ ರಿಜಿಜು(Kiren Rijiju), ಕಾಂಗ್ರೆಸ್ ಒಂದು ಕಾಲದಲ್ಲಿ ಪ್ರಬುದ್ಧ ನಾಯಕರಿಂದ ತುಂಬಿತ್ತು, ಇಂದು ರಾಹುಲ್ ಗಾಂಧಿ ಸುತ್ತ ಸುತ್ತುತ್ತಿದೆ ಎಂದು ಕಿಡಿಕಾರಿದ್ದಾರೆ.
ಸುದ್ದಿಸಂಸ್ಥೆ ಎಎನ್​ಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ರಾಹುಲ್ ಗಾಂಧಿ ನೇತೃತ್ವದಲ್ಲಿ ಪಕ್ಷವು ನಿರಂತರವಾಗಿ ಕುಸಿಯುತ್ತಿದೆ. ಕಾಂಗ್ರೆಸ್ ಪಕ್ಷವು ಹಿಂದೆ ಪ್ರಬಲ ನಾಯಕರನ್ನು ಹೊಂದಿತ್ತು. ಅವರು ತಮ್ಮ ಮಾತು ಮತ್ತು ಕೆಲಸದಲ್ಲಿ ಪ್ರಬುದ್ಧತೆಯನ್ನು ಹೊಂದಿದ್ದರು. ಆದರೆ, ನಿಧಾನವಾಗಿ ಕಾಂಗ್ರೆಸ್ ರಾಹುಲ್ ಗಾಂಧಿಯಂತೆ ಮಾರ್ಪಟ್ಟಿದೆ. ಮತ್ತು ಅವರ ಸುತ್ತ ಸುತ್ತುವವರು ಸಹ ಅವರಂತೆಯೇ ಆಗಿದ್ದಾರೆ ಎಂದಿದ್ದಾರೆ.
ಮುಂದುವರೆದು, ಕಾಂಗ್ರೆಸ್ ಈ ರೀತಿ ಆಗುತ್ತದೆ ಎಂದು ನಾವು ಊಹಿಸಲೂ ಸಾಧ್ಯವಿಲ್ಲ. ಮೂರು ಸತತ ಸೋಲುಗಳ ನಂತರವೂ ರಾಹುಲ್ ಗಾಂಧಿಯನ್ನೇ ನಾಯಕನನ್ನಾಗಿ ಪಕ್ಷ ಉಳಿಸಿಕೊಂಡಿದೆ. ಅದೇ ಬಿಜೆಪಿಯಲ್ಲಿ ಮೂರು ಬಾರಿ ಸೋತ ನಂತರವೂ ನಾಯಕನೊಬ್ಬ ನಾಯಕನಾಗಿ ಉಳಿಯುವುದಿಲ್ಲ ಎಂದು ತಿಳಿಸಿದ್ದಾರೆ.

ಮಣಿಶಂಕರ್ ಅಯ್ಯರ್ ಹೇಳಿದ್ದೇನು?

ಕಳೆದ ಭಾನುವಾರ ಕೇರಳ ಸರ್ಕಾರದ ಪಂಚಾಯತ್ ಇಲಾಖೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಣಿಶಂಕರ್ ಅಯ್ಯರ್, ಒಬ್ಬ ಕಾಂಗ್ರೆಸ್ಸಿಗನಾಗಿ, ಯುಡಿಎಫ್ ಅಧಿಕಾರಕ್ಕೆ ಬರಬೇಕೆಂದು ನಾನು ಬಯಸುತ್ತೇನೆ. ಗಾಂಧಿವಾದಿಯಾಗಿ, ಪಿಣರಾಯಿ ಸರ್ಕಾರದ ಅದ್ಭುತ ಸಾಧನೆಗಳನ್ನು ನೋಡಿದ ಬಳಿಕ ಯುಡಿಎಫ್​ ಅಧಿಕಾರಕ್ಕೆ ಬರುವುದು ಖಚಿತ ಎಂದು ಹೇಳಿದ್ದರು.
ಅಯ್ಯರ್ ಅವರ ಹೇಳಿಕೆ ಕೇರಳ ಮತ್ತು ಕಾಂಗ್ರೆಸ್​ನಲ್ಲಿ ಸಂಚಲನ ಉಂಟು ಮಾಡಿದೆ. ಕಾಂಗ್ರೆಸ್ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದು, ಅವರು ಸದ್ಯ ಕಾಂಗ್ರೆಸ್​​ನಲ್ಲಿ ಇಲ್ಲ. ಅದು ಅವರ ವೈಯಕ್ತಿಕ ಹೇಳಿಕೆ ಎಂದು ಹೇಳಿತ್ತು.
ಕಾಂಗ್ರೆಸ್​ನ ಈ ಸ್ಷಷ್ಟನೆಗೆ ಪ್ರತಿಕ್ರಿಯಿಸಿದ್ದ ಅವರು, ರಾಹುಲ್ ಗಾಂಧಿ ನಾನು ಪಕ್ಷದ ಸದಸ್ಯ ಎಂಬುದನ್ನು ಮರೆತಿದ್ದಾರೆ. ಆದ್ದರಿಂದ, ನಾನು ಗಾಂಧಿವಾದಿ. ನಾನು ನೆಹರೂವಾದಿ. ನಾನು ರಾಜೀವವಾದಿ, ಆದರೆ ನಾನು ರಾಹುಲ್​ವಾದಿ ಅಲ್ಲ ಎಂದು ವಾಗ್ದಾಳಿ ನಡೆಸಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net