ಡೊನಾಲ್ಡ್ ಟ್ರಂಪ್ ಪೀಸ್ ಬೋರ್ಡ್ ಪ್ರಸ್ತಾಪಕ್ಕೆ ಚೀನಾ ರೆಡ್ ಸಿಗ್ನಲ್: ವಿಶ್ವಸಂಸ್ಥೆಗೇ ಮೊದಲ ಆದ್ಯತೆ ಎಂದ ಬೀಜಿಂಗ್ | China

ಡೊನಾಲ್ಡ್ ಟ್ರಂಪ್ ಪೀಸ್ ಬೋರ್ಡ್ ಪ್ರಸ್ತಾಪಕ್ಕೆ ಚೀನಾ ರೆಡ್ ಸಿಗ್ನಲ್: ವಿಶ್ವಸಂಸ್ಥೆಗೇ ಮೊದಲ ಆದ್ಯತೆ ಎಂದ ಬೀಜಿಂಗ್
ಡೊನಾಲ್ಡ್ ಟ್ರಂಪ್ ಪೀಸ್ ಬೋರ್ಡ್ ಪ್ರಸ್ತಾಪಕ್ಕೆ ಚೀನಾ ರೆಡ್ ಸಿಗ್ನಲ್: ವಿಶ್ವಸಂಸ್ಥೆಗೇ ಮೊದಲ ಆದ್ಯತೆ ಎಂದ ಬೀಜಿಂಗ್
Published on
ಬೀಜಿಂಗ್: ಗಾಜಾದಲ್ಲಿ ಶಾಂತಿ ಸ್ಥಾಪನೆಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿರುವ ಹೊಸ ಬೋರ್ಡ್ ಆಫ್ ಪೀಸ್ ಸೇರಲು ಚೀನಾ(China) ಬುಧವಾರ (ಜ.21) ಸ್ಪಷ್ಟವಾಗಿ ನಿರಾಕರಿಸಿದೆ.
ಈ ನಿರ್ಧಾರವು ವಿಶ್ವಸಂಸ್ಥೆಯನ್ನು (UN) ಬದಿಗೆ ಸರಿಸಿ ಟ್ರಂಪ್ ರಚಿಸಲು ಉದ್ದೇಶಿಸಿರುವ ಈ ಪರ್ಯಾಯ ಮಂಡಳಿಯು ಜಾಗತಿಕ ರಾಜತಾಂತ್ರಿಕತೆಯಲ್ಲಿ ಹೊಸ ಸಂಘರ್ಷಕ್ಕೆ ನಾಂದಿ ಹಾಡಿದೆ.

ಚೀನಾದ ಖಡಕ್ ಪ್ರತಿಕ್ರಿಯೆ

ಈ ಬಗ್ಗೆ ಬೀಜಿಂಗ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್, ಟ್ರಂಪ್ ನಡೆಯನ್ನು ಪರೋಕ್ಷವಾಗಿ ಟೀಕಿಸಿದ್ಧಾರೆ.
ಚೀನಾ ಯಾವಾಗಲೂ ನೈಜ ಬಹುಪಕ್ಷೀಯತೆಯನ್ನು ಬೆಂಬಲಿಸುತ್ತದೆ. ವಿಶ್ವಸಂಸ್ಥೆಯು ಜಾಗತಿಕ ವ್ಯವಸ್ಥೆಯ ಕೇಂದ್ರಬಿಂದುವಾಗಿದೆ. ವಿಶ್ವಸಂಸ್ಥೆಯ ಆಶ್ರಯದಲ್ಲಿ ನಡೆಯದ ಯಾವುದೇ ಶಾಂತಿ ಮಾತುಕತೆ ಅಥವಾ ಮಂಡಳಿಯನ್ನು ನಾವು ಒಪ್ಪಲು ಸಾಧ್ಯವಿಲ್ಲ ಎಂದು ಜಿಯಾಕುನ್ ತಿಳಿಸಿದ್ದಾರೆ.
ಅಮೆರಿಕವು ವಿಶ್ವಸಂಸ್ಥೆಯ ಅಧಿಪತ್ಯವನ್ನು ಕುಗ್ಗಿಸಿ ತನ್ನದೇ ಆದ ಪ್ಯಾರಲಲ್ ವರ್ಲ್ಡ್ ಆರ್ಡರ್ ನಿರ್ಮಿಸಲು ಪ್ರಯತ್ನಿಸುತ್ತಿದೆ ಎಂಬುದು ಚೀನಾದ ಪ್ರಮುಖ ಆಕ್ಷೇಪವಾಗಿದೆ.

ಟ್ರಂಪ್ ಪ್ರಸ್ತಾಪವೇನು?

ಇತ್ತೀಚಿನ ಹೇಳಿಕೆಯೊಂದರಲ್ಲಿ ಡೊನಾಲ್ಡ್ ಟ್ರಂಪ್, ವಿಶ್ವಸಂಸ್ಥೆಯು ಅಸ್ತಿತ್ವದಲ್ಲಿರಬಹುದು. ಆದರೆ ಗಾಜಾದಂತಹ ಗಂಭೀರ ಸಂಘರ್ಷಗಳನ್ನು ಬಗೆಹರಿಸಲು ನಾನು ಪ್ರಸ್ತಾಪಿಸಿರುವ ಬೋರ್ಡ್ ಆಫ್ ಪೀಸ್ ವಿಶ್ವಸಂಸ್ಥೆಯ ಸ್ಥಾನವನ್ನು ಆಕ್ರಮಿಸಬಹುದು ಎಂಬ ಸುಳಿವು ನೀಡಿದ್ದರು. ಅಲ್ಲದೆ, ವಿಶ್ವಸಂಸ್ಥೆಯು ನಿಷ್ಕ್ರಿಯವಾಗಿದೆ ಎಂದು ಪದೇಪದೆ ಟೀಕಿಸುತ್ತಿರುವ ಟ್ರಂಪ್, ಅಮೆರಿಕದ ನೇತೃತ್ವದ ಈ ಹೊಸ ಮಂಡಳಿಯ ಮೂಲಕ ಜಾಗತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಇರಾದೆ ಹೊಂದಿದ್ದಾರೆ.

ಜಾಗತಿಕ ರಾಜತಾಂತ್ರಿಕ ಸಂಘರ್ಷ

ಟ್ರಂಪ್ ಅವರ ಈ ಪ್ರಸ್ತಾಪವು ಕೇವಲ ಚೀನಾವನ್ನು ಮಾತ್ರವಲ್ಲದೆ, ಯುರೋಪಿಯನ್ ಒಕ್ಕೂಟದ ಹಲವು ರಾಷ್ಟ್ರಗಳನ್ನೂ ಚಿಂತೆಗೀಡು ಮಾಡಿದೆ. ವಿಶ್ವಸಂಸ್ಥೆಯನ್ನು ದುರ್ಬಲಗೊಳಿಸುವುದು ಅಪಾಯಕಾರಿ ಎಂಬುದು ಅಂತಾರಾಷ್ಟ್ರೀಯ ತಜ್ಞರ ಅಭಿಪ್ರಾಯವಾಗಿದೆ.

ಟ್ರಂಪ್ ನಿಲುವು

ವಿಶ್ವಸಂಸ್ಥೆಯು ಭ್ರಷ್ಟಗೊಂಡಿದೆ ಮತ್ತು ಅಮೆರಿಕದ ಹಣದಲ್ಲಿ ಚೀನಾಕ್ಕೆ ಅನುಕೂಲ ಮಾಡಿಕೊಡುತ್ತಿದೆ.

ಚೀನಾ ನಿಲುವು

ಅಮೆರಿಕವು ತನ್ನ ಹಿತಾಸಕ್ತಿಗಾಗಿ ಅಂತರಾಷ್ಟ್ರೀಯ ನಿಯಮಗಳನ್ನು ಗಾಳಿಗೆ ತರುತ್ತಿದೆ.
ಗಾಜಾ ಬಿಕ್ಕಟ್ಟು ಮತ್ತು ಅಧಿಕಾರ ಸಮರ
ಗಾಜಾ ಸಮಸ್ಯೆಯನ್ನು ನೆಪವಾಗಿಟ್ಟುಕೊಂಡು ಅಮೆರಿಕವು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಹಿಡಿತವನ್ನು ಸಾಧಿಸಲು ಹೊರಟಿದೆ ಎಂಬುದು ಚೀನಾದ ವಾದವಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಮೀರಿ ಟ್ರಂಪ್ ಅವರ ಪೀಸ್ ಬೋರ್ಡ್ ಕೆಲಸ ಮಾಡಲು ಆರಂಭಿಸಿದರೆ, ಅದು ರಷ್ಯಾ ಮತ್ತು ಚೀನಾದ ವಿಟೋ’ ಅಧಿಕಾರವನ್ನು ಶೂನ್ಯಗೊಳಿಸಲಿದೆ. ಈ ಹಿನ್ನೆಲೆಯಲ್ಲಿ ಚೀನಾದ ಈ ವಿರೋಧವು ಅತ್ಯಂತ ಮಹತ್ವದ ರಾಜಕೀಯ ನಡೆಯಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net