80ರ ದಶಕದ ಫೋಟೋ ಕ್ರೇಜ್ ಹಿಂದೆದೆಯಾ ಇಷ್ಟೊಂದು ಪರಿಸರ ಹಾನಿ? ಭಾರಿ ಪ್ರಮಾಣದ ವಿದ್ಯುತ್​, ಕುಡಿಯುವ ನೀರು ಗುಳುಂ! ChatGPT AI Photo Trend

80ರ ದಶಕದ ಫೋಟೋ ಕ್ರೇಜ್ ಹಿಂದೆದೆಯಾ ಇಷ್ಟೊಂದು ಪರಿಸರ ಹಾನಿ? ಭಾರಿ ಪ್ರಮಾಣದ ವಿದ್ಯುತ್​, ಕುಡಿಯುವ ನೀರು ಗುಳುಂ! ChatGPT AI Photo Trend
80ರ ದಶಕದ ಫೋಟೋ ಕ್ರೇಜ್ ಹಿಂದೆದೆಯಾ ಇಷ್ಟೊಂದು ಪರಿಸರ ಹಾನಿ? ಭಾರಿ ಪ್ರಮಾಣದ ವಿದ್ಯುತ್​, ಕುಡಿಯುವ ನೀರು ಗುಳುಂ! ChatGPT AI Photo Trend
Published on: 

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಸದ್ದು ಮಾಡುತ್ತಿರುವ 80ರ ದಶಕದ ರೆಟ್ರೋ ಫೋಟೋ ಟ್ರೆಂಡ್
  • ಎಐ ಮೂಲಕ ಕೇವಲ ಒಂದೇ ಕ್ಲಿಕ್‌ನಲ್ಲಿ ಫೋಟೋಗಳನ್ನು ವಿಂಟೇಜ್ ಲುಕ್‍ಗೆ ಬದಲಿಸುತ್ತಿರುವ ಯುವಜನರು
  • ವರ್ಣರಂಜಿತ ಡಿಜಿಟಲ್ ಚಿತ್ರಗಳ ಹಿಂದೆ ಅಡಗಿರುವ ಅಪಾರ ಪ್ರಮಾಣದ ಇಂಧನ ಹಾಗೂ ನೀರಿನ ಬಳಕೆ
  • ಡೇಟಾ ಸೆಂಟರ್‌ಗಳ ಅತಿಹೆಚ್ಚು ವಿದ್ಯುತ್ ಬಳಕೆಯಿಂದ ಪರಿಸರದ ಮೇಲೆ ಉಂಟಾಗುತ್ತಿರುವ ಭಾರಿ ಹೊರೆ
  • ಕುರುಡಾಗಿ ಟ್ರೆಂಡ್‌ಗಳನ್ನು ಅನುಸರಿಸುವ ಬದಲು ತಂತ್ರಜ್ಞಾನದ ಜವಾಬ್ದಾರಿಯುತ ಬಳಕೆಗೆ ತಜ್ಞರ ಕರೆ
ChatGPT AI Photo Trend : ಇತ್ತೀಚಿನ ದಿನಗಳಲ್ಲಿ ಫೇಸ್​ಬುಕ್​, ಇನ್​ಸ್ಟಾಗ್ರಾಂ ಹಾಗೂ ಎಕ್ಸ್ ಸೇರಿದಂತೆ ಯಾವುದೇ​ ಸಾಮಾಜಿಕ ಜಾಲತಾಣ ವೇದಿಕೆಯನ್ನು ಓಪನ್​ ಮಾಡಿದರೆ ಸಾಕು, ಎಲ್ಲೆಲ್ಲೂ 80ರ ದಶಕದ ಹಳೆಯ ಚಲನಚಿತ್ರಗಳು ಅಥವಾ ಮ್ಯಾಗ್​ಜಿನ್​ ಶೈಲಿಯನ್ನು ನೆನಪಿಸುವ ರೆಟ್ರೋ ಚಿತ್ರಗಳದ್ದೇ ಹವಾ. ಚಾಟ್‌ಜಿಪಿಟಿ ಸೇರಿದಂತೆ ವಿವಿಧ AI ಟೂಲ್‌ಗಳನ್ನು ಬಳಸಿ ಕೇವಲ ಒಂದೇ ಒಂದು ಕ್ಲಿಕ್‌ನಲ್ಲಿ ತಮ್ಮ ಫೋಟೋವನ್ನು ಇಂತಹ ವಿಂಟೇಜ್ ಲುಕ್‌ಗೆ ಬದಲಾಯಿಸಿಕೊಳ್ಳುವುದರಲ್ಲಿ ಕೋಟ್ಯಂತರ ಯುವಜನರು ಮಗ್ನರಾಗಿದ್ದಾರೆ ಎಂದರೆ ತಪ್ಪಾಗಲ್ಲ. ತಮ್ಮ ವೈಯಕ್ತಿಕ ಹಾಗೂ ಕುಟುಂಬದ ಫೋಟೋವನ್ನು ಅಪ್​​ಲೋಡ್​ ಮಾಡಿ 1980ರಲ್ಲಿ ನಾವಿದಿದ್ದರೆ ಹೇಗೆ ಕಾಣುತ್ತಿದ್ದೆವು ಎಂದು ಕುತೂಹಲದಿಂದ ನೋಡಿಕೊಳ್ಳುತ್ತಿದ್ದಾರೆ. ಅಲ್ಲದೆ, ತಮ್ಮ ಇನ್​ಸ್ಟಾ ಸ್ಟೋರಿ, ವಾಟ್ಸ್​ಆ್ಯಪ್​ ಸ್ಟೇಟಸ್​ ಹಾಗೂ ಫೇಸ್​ಬುಕ್​ ಸ್ಟೋರಿಗಳಲ್ಲಿ ಅಪ್​ಲೋಡ್​ ಮಾಡಿ ಖುಷಿ ಪಡುತ್ತಿದ್ದಾರೆ. ಆದರೆ, ಅದರ ಹಿಂದಿರುವ ಕರಾಳ ಸತ್ಯವೊಂದು ಯಾರಿಗೂ ಕಾಣುತ್ತಿಲ್ಲ.
ಹೌದು, ಬಹಳ ಸರಳ ಮತ್ತು ಉಚಿತವಾಗಿ ನಮ್ಮ ಮೊಬೈಲ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವ ಈ ವರ್ಣರಂಜಿತ ಡಿಜಿಟಲ್ ಚಿತ್ರಗಳ ಹಿಂದೆ ಅಪಾರ ಪ್ರಮಾಣದ ಇಂಧನ, ನೀರು ಹಾಗೂ ಸಂಪನ್ಮೂಲಗಳನ್ನು ನುಂಗಿಹಾಕುವ ದೈತ್ಯ ಡೇಟಾ ಸೆಂಟರ್‌ಗಳ ಜಾಲವೇ ಕೆಲಸ ಮಾಡುತ್ತಿದೆ. ಡಿಜಿಟಲ್ ಪರದೆಯ ಹಿಂದೆ ಕಾಣದ ಈ ಪ್ರಕ್ರಿಯೆಯು ನಮ್ಮ ಪರಿಸರಕ್ಕೆ ದೊಡ್ಡ ಮಟ್ಟದ ಹೊರೆಯಾಗುತ್ತಿದ್ದು, ಇದರ ಬಗ್ಗೆ ಹೆಚ್ಚಿನ ಬಳಕೆದಾರರಿಗೆ ಅರಿವಿಲ್ಲದಿರುವುದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ.

ಹಳಿತಪ್ಪಿದ್ದ ಸರ್ವರ್​ಗಳು

ಕಳೆದ ವರ್ಷ ಇಂಟರ್ನೆಟ್‌ನಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಿದ್ದ 'ಘಿಬ್ಲಿ ಸ್ಟುಡಿಯೋ ಟ್ರೆಂಡ್' ಸಮಯದಲ್ಲಿ ಲಕ್ಷಾಂತರ ಜನರು ತಮ್ಮ ವಿಭಿನ್ನ ಫೋಟೋಗಳಿಗಾಗಿ ಮುಗಿಬಿದ್ದಾಗ ಜಾಗತಿಕ ಮಟ್ಟದಲ್ಲಿ ಸರ್ವರ್‌ಗಳು ಸ್ಥಿತಿಗತಿ ಹಳಿ ತಪ್ಪಿದ್ದವು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಸ್ವತಃ ಓಪನ್ ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ಅವರು ಬಳಕೆದಾರರಿಗೆ ಸ್ವಲ್ಪ ಸಂಯಮ ಕಾಯ್ದುಕೊಳ್ಳುವಂತೆ ಸಾರ್ವಜನಿಕವಾಗಿಯೇ ಮನವಿ ಮಾಡಿಕೊಳ್ಳಬೇಕಾಯಿತು. ಈ ರೀತಿಯ ಟ್ರೆಂಡ್‌ಗಳು ತಾಂತ್ರಿಕ ವ್ಯವಸ್ಥೆಯ ಮೇಲೆ ಬೀರುವ ಒತ್ತಡಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ.

ಭಾರಿ ವಿದ್ಯುತ್ ಬೇಡುವ ಟ್ರೆಂಡ್​​

ಒಂದು ಸಾಮಾನ್ಯ ಎಐ ಚಿತ್ರವನ್ನು ಜನರೇಟ್​ ಮಾಡಲು ಪ್ರತಿ ಗಂಟೆಗೆ 0.01 ರಿಂದ 0.29 ಕಿಲೋವ್ಯಾಟ್‌ನಷ್ಟು ವಿದ್ಯುತ್ ಬೇಕಾಗುತ್ತದೆ. ಒಂದು ಚಿತ್ರಕ್ಕೆ ಇದು ಅತ್ಯಲ್ಪ ಎನಿಸಿದರೂ, ಕೋಟ್ಯಂತರ ಜನರು ಒಂದೇ ಸಮಯದಲ್ಲಿ ಇಂತಹ ಟ್ರೆಂಡ್‌ಗಳಲ್ಲಿ ಪಾಲ್ಗೊಂಡು ಒಂದೇ ಸೆಲ್ಫಿಯ ಹಲವು ವರ್ಷನ್‌ಗಳನ್ನು ಸೃಷ್ಟಿಸಿದಾಗ ಒಟ್ಟು ವಿದ್ಯುತ್ ಬಳಕೆ ವಿಪರೀತ ಹೆಚ್ಚಾಗುತ್ತದೆ. ಇಂಟರ್ನ್ಯಾಷನಲ್​ ಎನರ್ಜಿ ಏಜೆನ್ಸಿಯ ವರದಿಯ ಪ್ರಕಾರ, 2030ರ ವೇಳೆಗೆ ಜಾಗತಿಕವಾಗಿ ಡೇಟಾ ಸೆಂಟರ್‌ಗಳ ವಿದ್ಯುತ್ ಬಳಕೆ ದುಪ್ಪಟ್ಟಿಗಿಂತ ಅಧಿಕವಾಗಲಿದೆ. ಉತ್ತರ ಅಮೆರಿಕ ಒಂದರಲ್ಲೇ ಡೇಟಾ ಸೆಂಟರ್‌ಗಳ ವಿದ್ಯುತ್ ಬೇಡಿಕೆಯು ಕೆಲವೇ ವರ್ಷಗಳಲ್ಲಿ ಎರಡು ಪಟ್ಟು ಹೆಚ್ಚಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ.

ತೀರದ ನೀರಿನ ದಾಹ

ವಿದ್ಯುತ್ ಬಳಕೆಯಷ್ಟೇ ಆತಂಕಕಾರಿ ಸಂಗತಿಯೆಂದರೆ ಡೇಟಾ ಸೆಂಟರ್‌ಗಳನ್ನು ತಂಪಾಗಿಸಲು (Cooling) ಬಳಕೆಯಾಗುವ ಶುದ್ಧ ಕುಡಿಯುವ ನೀರು. ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ಸಂಶೋಧನೆಯ ಪ್ರಕಾರ, ಕೇವಲ ಜಿಪಿಟಿ-3 ತರಬೇತಿಗಾಗಿ ಅಂದಾಜು 7 ಲಕ್ಷ ಲೀಟರ್ ಶುದ್ಧ ನೀರನ್ನು ಬಳಸಲಾಗಿದೆ. ಚಾಟ್‌ಜಿಪಿಟಿ ಜತೆ ಪ್ರತಿ 20 ರಿಂದ 50 ಪ್ರಶ್ನೆಗಳು ಅಥವಾ ಉತ್ತರಗಳ ವಿನಿಮಯಕ್ಕೆ ಅಂದಾಜು 500 ಮಿಲಿ ಲೀಟರ್ ನೀರು ಖರ್ಚಾಗುತ್ತದೆ. ಇವೆಲ್ಲವೂ ಕಣ್ಣಿಗೆ ಕಾಣದಂತೆ ಭೂಮಿಯ ಅಂತರ್ಜಲವನ್ನು ನಿರಂತರವಾಗಿ ಬತ್ತಿಸುತ್ತಿವೆ. ಎಐ ದಾಹದಿಂದ ಮುಂದೊಂದು ದಿನ ಕುಡಿಯುವ ನೀರಿಗೂ ಹಾಹಾಕಾರ ಬಂದರೆ ಅತಿಶಯೋಕ್ತಿಯಲ್ಲ.

ಹೇಗೆ ಸೃಷ್ಟಿಯಾಗುತ್ತೆ ಫೋಟೋ?

ಯಾವುದೇ ಬಳಕೆದಾರರು 'ನನ್ನ ಫೋಟೋವನ್ನು 80ರ ದಶಕದ ಶೈಲಿಗೆ ಬದಲಾಯಿಸಿ' ಎಂದು ಪ್ರಾಂಪ್ಟ್​ ನೀಡಿದಾಗ, ಎಐ ತಂತ್ರಜ್ಞಾನವು ಮೊದಲು ಟಿವಿಯಲ್ಲಿ ಕಾಣುವಂತೆ ಹಳೆಯ ಗ್ರೇನ್‌ಗಳನ್ನು ಸೃಷ್ಟಿಸುತ್ತದೆ. ಬಳಿಕ ಕಂಪ್ಯೂಟಿಂಗ್ ವಿಶ್ಲೇಷಣೆ ಮತ್ತು ಮೌಲ್ಯಮಾಪನದ ಮೂಲಕ ಚಿತ್ರದ ವಿವಿಧ ಭಾಗಗಳಿಗೆ ದೃಶ್ಯಗಳನ್ನು ಸೇರಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಬಿಲಿಯನ್‌ಗಟ್ಟಲೆ ಗಣನೆಗಳನ್ನು ಮಾಡಲು ಗ್ರಾಫಿಕ್ ಪ್ರೊಸೆಸಿಂಗ್ ಯೂನಿಟ್‌ಗಳು (GPUs) ಮತ್ತು AI ಆಕ್ಸಿಲರೇಟರ್‌ಗಳು ನಿರಂತರವಾಗಿ ಕೆಲಸ ಮಾಡುತ್ತವೆ, ಇದುವೇ ಅತ್ಯಧಿಕ ವಿದ್ಯುತ್ ಬಳಕೆಗೆ ಕಾರಣವಾಗುತ್ತದೆ.
ಈ ಪರಿಸರ ಹಾನಿಯು ಕೇವಲ ಚಿತ್ರ ಸಿದ್ಧವಾಗುವಾಗ ಮಾತ್ರವಲ್ಲ, ಅದಕ್ಕೂ ಮೊದಲೇ ಅಂದರೆ ಹಾರ್ಡ್‌ವೇರ್ ತಯಾರಿಕೆಯ ಹಂತದಲ್ಲೇ ಆರಂಭವಾಗುತ್ತದೆ. ಎಐ ವ್ಯವಸ್ಥೆಗಳನ್ನು ನಡೆಸಲು ಅಗತ್ಯವಿರುವ ಸರ್ವರ್‌ಗಳು, ಹೈ-ಪರ್ಫಾರ್ಮೆನ್ಸ್ ಜಿಪಿಯುಗಳು ಮತ್ತು ಸೆಮಿಕಂಡಕ್ಟರ್ ಘಟಕಗಳನ್ನು ತಯಾರಿಸಲು ಅಪರೂಪದ ಖನಿಜಗಳ ಗಣಿಗಾರಿಕೆ ಹಾಗೂ ಸಂಕೀರ್ಣ ಪೂರೈಕೆ ಸರಪಳಿಗಳು ಬೇಕಾಗುತ್ತವೆ.
ಕೇವಲ 2 ಕೆಜಿ ತೂಕದ ಒಂದು ಸಾಮಾನ್ಯ ಕಂಪ್ಯೂಟರ್ ತಯಾರಿಸಲು ನೂರಾರು ಕೆಜಿ ಕಚ್ಚಾ ವಸ್ತುಗಳನ್ನು ಪ್ರಕೃತಿಯಿಂದ ಹೊರತೆಗೆಯಲಾಗುತ್ತದೆ ಎಂದು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ಈಗಾಗಲೇ ಎಚ್ಚರಿಸಿದೆ. ಚಿಪ್ ತಯಾರಿಕೆ, ಸಾರಿಗೆ, ಡೇಟಾ ಸೆಂಟರ್ ನಿರ್ಮಾಣ ಮತ್ತು ಬಳಿಕ ಅವು ಹಾಳಾದಾಗ ಉಂಟಾಗುವ ಎಲೆಕ್ಟ್ರಾನಿಕ್ ತ್ಯಾಜ್ಯದ (E-waste) ವೆಚ್ಚವನ್ನು ಸೇರಿಸಿದರೆ ಎಐನ ಪರಿಸರ ಮೇಲಿನ ಪರಿಣಾಮವು ಭಾರಿ ಪ್ರಮಾಣದಲ್ಲಿದೆ.
ಸಾಮಾಜಿಕ ಜಾಲತಾಣಗಳಲ್ಲಿ 80ರ ದಶಕದ ಫೋಟೋ ಹಂಚಿಕೊಳ್ಳುವುದರಿಂದ ನಾಳೆಯೇ ದೊಡ್ಡ ಪರಿಸರ ವಿಪತ್ತು ಸಂಭವಿಸುವುದಿಲ್ಲ ನಿಜ, ಆದರೆ ನಮ್ಮ ಈ ಕುರುಡು ಅಭ್ಯಾಸ ಹಾಗೂ ಅತಿಯಾದ ಬಳಕೆ ಜಾಗತಿಕ ಮಟ್ಟದಲ್ಲಿ ದೊಡ್ಡಮಟ್ಟದ ಕಂಪ್ಯೂಟಿಂಗ್ ಭಾರವನ್ನು ಸೃಷ್ಟಿಸುತ್ತಿದೆ. ಆದ್ದರಿಂದ, ಕೇವಲ 'ಮತ್ತೊಬ್ಬರು ಮಾಡುತ್ತಿದ್ದಾರೆ' ಎಂಬ ಕಾರಣಕ್ಕೆ ಒಂದೇ ಫೋಟೋದ ಹಲವು ಆವೃತ್ತಿಗಳನ್ನು ಕುರುಡಾಗಿ ಸೃಷ್ಟಿಸುವ ಬದಲು, ತಂತ್ರಜ್ಞಾನದ ಜವಾಬ್ದಾರಿಯುತ ಬಳಕೆಯ ಬಗ್ಗೆ ನಾವೆಲ್ಲರೂ ಒಮ್ಮೆ ಗಂಭೀರವಾಗಿ ಯೋಚಿಸಬೇಕಿದೆ, (ಏಜೆನ್ಸೀಸ್​).