ಬಿಡದಿ ಪಾದಯಾತ್ರೆಗೆ ಬಿಜೆಪಿ ನೈತಿಕ ಬೆಂಬಲ: ಮೈತ್ರಿಪಕ್ಷಗಳ ಸಭೆಯ ನಂತರ ಕೇಂದ್ರ ಸಚಿವ ಎಚ್​​ಡಿಕೆ ಹೇಳಿಕೆ | HD Kumaraswamy

HD Kumaraswamy | ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ
HD Kumaraswamy | ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ
Published on

ಜಾತ್ಯತೀತ ಜನತಾದಳದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಲಿರುವ ಬಿಡದಿ ಬೃಹತ್ ಪಾದಯಾತ್ರೆಗೆ ಮಿತ್ರಪಕ್ಷ ಬಿಜೆಪಿ ನೈತಿಕ ಬೆಂಬಲ ವ್ಯಕ್ತಪಡಿಸಿದೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ನಡೆದ ಜೆಡಿಎಸ್ ಮತ್ತು ಬಿಜೆಪಿ ಹಿರಿಯ ನಾಯಕರ ಜಂಟಿ ಸಭೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವರು, ಬಿಡದಿ ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ಈ ಪಾದಯಾತ್ರೆ ನಡೆಯಲಿದೆ. ಪಾದಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿಯ ಅನೇಕ ಹಿರಿಯ ನಾಯಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಪ್ರಮುಖವಾಗಿ ಬಿಡದಿ ಟೌನ್‌ಶಿಪ್ ಯೋಜನೆಯ ಸುತ್ತಲಿನ ವಿವಾದ ಹಾಗೂ ನೈಸ್ ಯೋಜನೆಯಲ್ಲಾಗಿದೆ ಎನ್ನಲಾದ ಅಕ್ರಮಗಳ ಕುರಿತು ಗಂಭೀರ ಸಮಾಲೋಚನೆ ನಡೆಸಲಾಯಿತು. ಬಿಡದಿ ವಿಷಯದಲ್ಲಿ ಸದನದಲ್ಲಿ ಕಡ್ಡಾಯವಾಗಿ ಚರ್ಚೆ ನಡೆಯಲೇಬೇಕು ಎಂದು ಪ್ರತಿಪಾದಿಸಿದ ಸಚಿವರು, ಅಲ್ಲಿನ ರೈತರು ಹಾಗೂ ಮಹಿಳೆಯರು ನಡೆಸುತ್ತಿರುವ ಹೋರಾಟವನ್ನು ಇಡೀ ರಾಜ್ಯವೇ ಗಮನಿಸುತ್ತಿದೆ ಎಂದರು. ರೈತರು ತಮ್ಮ ಭೂಮಿ ಕೊಡಲು ಯಾವುದೇ ಕಾರಣಕ್ಕೂ ಸಿದ್ಧರಿಲ್ಲದಿದ್ದರೂ, ಕೇವಲ ಅವರ ಜಮೀನನ್ನು ಲೂಟಿ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಬಿಜೆಪಿ ನಾಯಕರೊಂದಿಗೆ ವಿಸ್ತೃತವಾಗಿ ಚರ್ಚಿಸಿದ್ದು, ಮುಂಬರುವ ವಿಧಾನಮಂಡಲ ಕಲಾಪದಲ್ಲಿ ಒಮ್ಮತದಿಂದ ಹೋರಾಡಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ

ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಕಟುವಾಗಿ ಟೀಕಿಸಿದ ಎಚ್​​ಡಿಕೆ, ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆಯಲ್ಲಿನ ವಿಳಂಬವು ಕಾಂಗ್ರೆಸ್‌ನ ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ ಎಂದರು. ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದರೂ ಜನರಿಗೆ ನೆರವಾಗುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ಇದಲ್ಲದೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಬೆಂಗಳೂರಿನ ಕಸ ವಿಲೇವಾರಿ ಸಮಸ್ಯೆ, ಕೆಪಿಎಸ್‌ಸಿ ಮತ್ತು ಪೊಲೀಸ್ ನೇಮಕಾತಿ ಅಕ್ರಮಗಳು ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ದುರ್ಬಳಕೆ ವಿಷಯಗಳ ಕುರಿತು ಬಿಜೆಪಿ-ಜೆಡಿಎಸ್ ಜಂಟಿಯಾಗಿ ಹೋರಾಟ ನಡೆಸಲಿವೆ ಎಂದು ತಿಳಿಸಿದರು.
ಈ ಮಹತ್ವದ ಸಭೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಯಾವುದೇ ಸಮನ್ವಯ ಕೊರತೆ ಉಂಟಾಗದಂತೆ ಕಾರ್ಯತಂತ್ರ ರೂಪಿಸಲಾಯಿತು. ಸಭೆಯಲ್ಲಿ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ, ರವಿಕುಮಾರ್, ಸಂಸದ ಎಂ. ಮಲ್ಲೇಶ್ ಬಾಬು ಹಾಗೂ ಮಾಜಿ ಸಚಿವ ಸಿ.ಸಿ. ಪಾಟೀಲ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net