AIನಿಂದ ಉದ್ಯೋಗ ಕಡಿತ, ಮಾನಸಿಕ ಖಿನ್ನತೆ; ಇದು ಬೆಂಗಳೂರಿನಲ್ಲಿ ಟೆಕ್ಕಿ ಆತ್ಮಹತ್ಯೆ ಹಿಂದಿನ ದಾರುಣ ಕತೆ..Bengaluru Techie Suicide
Bengaluru Techie Suicide
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬೆಂಗಳೂರಿನಲ್ಲಿ ಟೆಕ್ಕಿ ಆತ್ಮಹತ್ಯೆ ಬೆನ್ನಲ್ಲೇ 18ನೇ ಮಹಡಿಯಿಂದ ಜಿಗಿದು ಪತ್ನಿ ಸಾವು
ಮಾನಸಿಕ ಖಿನ್ನತೆ, ಉದ್ಯೋಗ ಕಡಿತದಿಂದ ನೊಂದಿದ್ದ ಟೆಕ್ಕಿ ಭಾನುಚಂದರ್
ಕುಟುಂಬಸ್ಥರಿಗೆ ತಿಳಿಸದೇ ಅಂತರ್ಧರ್ಮೀಯ ಮದುವೆಯಾಗಿದ್ದ ಶಾಜಿಯಾ ಮತ್ತು ಭಾನುಚಂದರ್
ಬೆಂಗಳೂರು: ಸುಂದರವಾಗಿ ಸಾಗುತ್ತಿದ್ದ ಬದುಕಲ್ಲಿ ಎಐ ಎನ್ನುವ ಬಿರುಗಾಳಿ ಎದ್ದು ಇನ್ನೂ ಐವತ್ತರ ಪ್ರಾಯವೂ ದಾಟದ ಟೆಕ್ಕಿ ಭಾನು ಚಂದರ್ ರೆಡ್ಡಿ ಸೂಸೈಡ್ ಮಾಡಿಕೊಂಡಿದ್ದರು. ಅವರ ಅಗಲಿಕೆಯ ಅಘಾತದಲ್ಲಿ ಆತನ ಪತ್ನಿ 31 ವರ್ಷದ ಬೀಬಿ ಶಾಜಿಯಾ ಸಿರಾಜ್ ಸಹ 20 ನಿಮಿಷದ ಬಳಿಕ ಅಪಾರ್ಟ್ಮೆಂಟ್ನ 18ನೇ ಮಹಡಿಯಿಂದ ಬಿದ್ದು ಪ್ರಾಣ (Bengaluru Techie Suicide)ಕಳೆದುಕೊಂಡಿದ್ದರು. ಘಟನಾ ಸ್ಥಳದಲ್ಲಿ ಪೊಲೀಸರಿಗೆ ಸಿಕ್ಕ ಡೆತ್ನೋಟ್ನಿಂದ ಪ್ರಕರಣಕ್ಕೆ ಕಾರಣವೂ ತಿಳಿದುಬಂದಿದೆ.
ಟೆಕ್ಕಿ ಆತ್ಮಹತ್ಯೆ ಹಿಂದಿದೆ ಈ ಕಾರಣ
ಹಲವು ವರ್ಷಗಳಿಂದ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ತೆಲಂಗಾಣ ಮೂಲದ ಭಾನುಚಂದರ್ ರೆಡ್ಡಿ, ವಾರ್ಷಿಕವಾಗಿ 80 ಲಕ್ಷ ಆದಾಯ ಗಳಿಸುತ್ತಿದ್ದರು. ಅಲ್ಲಿ ಒಂದು ಸಣ್ಣ ಮನೆ ಮಾಡಿದ್ದ ಅವರು, ತೆಲಂಗಾಣದಲ್ಲಿಯೂ ಹೊಸದಾಗಿ ಮನೆಕಟ್ಟಿದ್ದರು ಎಂದು ಹೇಳಲಾಗಿದೆ.
ಸುಖವಾಗಿದ್ದ ಜೀವನದಲ್ಲಿ ಯಮನಂತೆ ಬಂದಿದ್ದು ಎಐ ಅಳವಡಿಕೆ ಮತ್ತು ಉದ್ಯೋಗ ಕಡಿತ(Lay Off). ಕಳೆದ ವರ್ಷ ಕೆಲಸ ಕಳೆದುಕೊಂಡಿದ್ದ ದಂಪತಿ ಅಲ್ಲಿಂದ ಹೈದರಾಬಾದ್ಗೆ ಬಂದಿದ್ದರು. ಶಾಜಿಯಾ ಅವರಿಗೆ ಐಬಿಎಂ ಅಲ್ಲಿ ಕೆಲಸ ಸಿಕ್ಕಿತ್ತು. ಹೀಗಾಗಿ ಇಬ್ಬರು ಹೈದರಾಬಾದ್ನಿಂದ ಎಂಟು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಭಾನುಚಂದರ್ ಆರ್ಥಿಕ ಸಂಕಷ್ಟ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಸಾವಿಗೂ ಮುನ್ನ ಮಾತನಾಡಿದ್ದ ಭಾನು
ಮಾ.22ರಂದು ಶಾಜಿಯಾ ಹೈದರಾಬಾದ್ನಿಂದ ಬೆಂಗಳೂರಿಗೆ ಮುಂಜಾನೆ ಆಗಮಿಸಿದ್ದರು. ಅದಕ್ಕೂ ಮುನ್ನ ಅವರು ಭಾನುಚಂದರ್ಗೆ ಕರೆ ಮಾಡಿ ಮಾತನಾಡಿದ್ದರಂತೆ. ಫುಡ್ ಆರ್ಡರ್ ಮಾಡಿ ಊಟ ಮಾಡುವುದಾಗಿ ಹೇಳಿಕೊಂಡಿದ್ದರಂತೆ.
ಆದರೆ, ಆಕೆ ಬೆಂಗಳೂರಿಗೆ ಬಂದು ಫ್ಲ್ಯಾಟ್ ಬೆಲ್ ಎಷ್ಟೇ ಬಾರಿ ಬಾರಿಸಿದರು ಸಹ ಭಾನುಚಂದರ್ ತೆರೆಯಲೇ ಇಲ್ಲ. ಸೆಕ್ಯೂರಿಟಿ ಸಿಬ್ಬಂದಿ ಸಹಾಯದಿಂದ ಬೆಳಿಗ್ಗೆ 7:30ಕ್ಕೆ ಬಾಗಿಲು ತೆರೆಸಿ ನೋಡಿದಾಗ ಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ಯಾರು ಗಮನಿಸದ ವೇಳೆ ಶಾಜಿಯಾ ಆತ್ಮಹತ್ಯೆ
ಸಾವಿನ ಸುದ್ದಿ ತಿಳಿದ ಅಕ್ಕ-ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಲು, ಆಂಬ್ಯುಲೆನ್ಸ್ಗೆ ಕರೆ ಮಾಡುವ ಗುಂಗಿನಲ್ಲಿದ್ದರು. ಘಟನೆ ನಡೆದ 20 ನಿಮಿಷದ ನಂತರ, ಆಕೆ 18ನೇ ಮಹಡಿಗೆ ತೆರಳಿ ಅಲ್ಲಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ.
ಭಾನುಚಂದರ್ ಮತ್ತು ಶಾಜಿಯಾ ಅಂತರ್ಧಮೀಯ ಮದುವೆ ಮಾಡಿಕೊಂಡಿದ್ದರು. ಎರಡು ವರ್ಷದಿಂದ ದಾಂಪತ್ಯ ಜೀವನ ನಡೆಸುತ್ತಿದ್ದರು. ಆದರೆ, ಈ ವಿಚಾರ ಯಾರಿಗೂ ತಿಳಿದಿರಲಿಲ್ಲ. ಖಾಸಗಿಯಾಗಿಯೇ ಇರಲು ಬಯಸಿದ್ದರಂತೆ. ಭಾನು ಚಂದರ್ ಹಾಗೂ ಶಾಜಿಯಾ ಸ್ನೇಹಿತರು ಮತ್ತು ಪೋಷಕರಿಗೆ ಮಾತ್ರ ಇವರ ವೈವಾಹಿಕ ಜೀವನದ ಬಗ್ಗೆ ತಿಳಿದಿತ್ತು ಎನ್ನಲಾಗಿದೆ. ಜೊತೆಗೆ ಭಾನುಚಂದರ್ ಅವರು ಕೆಲಸ ಸಿಗದೆ ಮಾನಸಿಕ ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ.
ಡೆತ್ನೋಟ್ನಲ್ಲಿ ಹೀಗಿತ್ತು...
ಕೆಲಸ ಕಳೆದುಕೊಂಡು ನಾನು ತೀವ್ರ ಸಂಕಷ್ಟಕ್ಕೀಡಾಗಿದ್ದೇನೆ. ಕ್ಷಮಿಸಿ ಬಿಡಿ ಎಂದು ಪತ್ನಿಗೆ ಹಾಗೂ ಪೋಷಕರಿಗೆ ಕ್ಷಮೆ ಕೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೊತ್ತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ,(ಏಜೆನ್ಸೀಸ್).