ಭಾರತದ ವಿರುದ್ಧ ಬಾಂಗ್ಲಾ ಆಕ್ರೋಶ: ಹಂತಕಿ ಹಸೀನಾ ದ್ವೇಷ ಭಾಷಣಕ್ಕೆ ಅವಕಾಶ ನೀಡಿದ್ದು ಶಾಕಿಂಗ್ ಎಂದ ಢಾಕಾ | Sheikh Hasina

ಭಾರತದ ವಿರುದ್ಧ ಬಾಂಗ್ಲಾ ಆಕ್ರೋಶ: ಹಂತಕಿ ಹಸೀನಾ ದ್ವೇಷ ಭಾಷಣಕ್ಕೆ ಅವಕಾಶ ನೀಡಿದ್ದು ಶಾಕಿಂಗ್ ಎಂದ ಢಾಕಾ
ಭಾರತದ ವಿರುದ್ಧ ಬಾಂಗ್ಲಾ ಆಕ್ರೋಶ: ಹಂತಕಿ ಹಸೀನಾ ದ್ವೇಷ ಭಾಷಣಕ್ಕೆ ಅವಕಾಶ ನೀಡಿದ್ದು ಶಾಕಿಂಗ್ ಎಂದ ಢಾಕಾ
Published on
ಢಾಕಾ: ಭಾರತದ ರಾಜಧಾನಿ ನವದೆಹಲಿಯಲ್ಲಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ(Sheikh Hasina) ಅವರು ಸಾರ್ವಜನಿಕವಾಗಿ ಭಾಷಣ ಮಾಡಿರುವುದಕ್ಕೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಭಾರತದ ಈ ನಡೆಯು ಬಾಂಗ್ಲಾದೇಶದ ಸರ್ಕಾರ ಮತ್ತು ಜನತೆಗೆ ಮಾಡಿದ ಅಪಮಾನ ಎಂದು ಕಿಡಿಕಾರಿದೆ.

ಘಟನೆಯ ಹಿನ್ನೆಲೆ: ದೆಹಲಿಯಲ್ಲಿ ಹಸೀನಾ ಆಡಿಯೋ ಭಾಷಣ

ಕಳೆದ 2024 ಆಗಸ್ಟ್​ನಿಂದ ಭಾರತದಲ್ಲಿ ಆಶ್ರಯ ಪಡೆದಿರುವ 78 ವರ್ಷದ ಶೇಖ್ ಹಸೀನಾ, ಶುಕ್ರವಾರ ದೆಹಲಿಯ ಪ್ರೆಸ್ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆಡಿಯೋ ಮೂಲಕ ಮೊದಲ ಬಾರಿಗೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ಅಧಿಕಾರ ಕಳೆದುಕೊಂಡು ಭಾರತಕ್ಕೆ ಪಲಾಯನ ಮಾಡಿದ್ದ ಹಸೀನಾ ಅವರ ಈ ಭಾಷಣವು ಈಗ ದ್ವಿಪಕ್ಷೀಯ ಸಂಬಂಧದಲ್ಲಿ ಬಿರುಗಾಳಿ ಎಬ್ಬಿಸಿದೆ.

ಬಾಂಗ್ಲಾದೇಶ ವಿದೇಶಾಂಗ ಸಚಿವಾಲಯದ ಖಂಡನೆ

ಈ ಬೆಳವಣಿಗೆಯ ಬಗ್ಗೆ ಭಾನುವಾರ ಅಧಿಕೃತ ಪ್ರಕಟಣೆ ಹೊರಡಿಸಿರುವ ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ, ಭಾರತ ಸರ್ಕಾರವು ಹಸೀನಾ ಅವರಿಗೆ ಸಾರ್ವಜನಿಕ ಭಾಷಣ ಮಾಡಲು ಅವಕಾಶ ನೀಡಿದ್ದು ನಮಗೆ ಆಶ್ಚರ್ಯ ಮತ್ತು ಆಘಾತ ತಂದಿದೆ. ಸಮೂಹ ಹಂತಕಿ ಎಂದು ಕರೆಯಲ್ಪಡುವ ಹಸೀನಾ ಅವರು ಮುಕ್ತವಾಗಿ ದ್ವೇಷ ಭಾಷಣ ಮಾಡಲು ಅವಕಾಶ ನೀಡಿರುವುದು ಬಾಂಗ್ಲಾದೇಶದ ಜನತೆಗೆ ಮಾಡಿದ ಅವಮಾನ ಎಂದು ಹೇಳಿದೆ.

ಮರಣದಂಡನೆ ಶಿಕ್ಷೆ ಮತ್ತು ಆರೋಪಗಳು

2024ರ ನವೆಂಬರ್​ನಲ್ಲಿ ಢಾಕಾ ನ್ಯಾಯಾಲಯವು ಹಸೀನಾ ಅವರ ಅನುಪಸ್ಥಿತಿಯಲ್ಲೇ ವಿಚಾರಣೆ ನಡೆಸಿ, ಪ್ರತಿಭಟನೆ ಹತ್ತಿಕ್ಕಲು ಕೊಲೆಗೆ ಆದೇಶ ನೀಡಿದ ಮತ್ತು ಅಮಾನವೀಯ ಕೃತ್ಯಗಳಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅವರಿಗೆ ಮರಣದಂಡನೆ ವಿಧಿಸಿದೆ. ಇಂತಹ ವ್ಯಕ್ತಿಯನ್ನು ಭಾರತವು ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡಲು ಬಿಟ್ಟಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

ಭಾರತ-ಬಾಂಗ್ಲಾ ಸಂಬಂಧದಲ್ಲಿ ಬಿರುಕು..?

ಹಸೀನಾ ಅವರ ಹಸ್ತಾಂತರಕ್ಕೆ ಬಾಂಗ್ಲಾದೇಶ ಮೊದಲೇ ಒತ್ತಾಯಿಸುತ್ತಿದೆ. ಈ ಮಧ್ಯೆ ಈ ಭಾಷಣದ ವಿವಾದವು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಭಾರತವು ಹಸೀನಾ ಅವರ ಉಪಸ್ಥಿತಿಯನ್ನು ಮಾನವೀಯತೆಯ ಆಧಾರದ ಮೇಲೆ ನೀಡಿದ ಆಶ್ರಯ ಎಂದು ಹೇಳುತ್ತಾ ಬಂದಿದೆಯಾದರೂ, ಸಾರ್ವಜನಿಕ ಭಾಷಣದ ಬಗ್ಗೆ ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net