ನೀರು ಕೇಳಿ ಮನೆಗೆ ನುಗ್ಗಲು ಯತ್ನ: ಝೆಪ್ಟೋ ಡೆಲಿವರಿ ಹುಡುಗನಿಂದ ಯುವತಿಗೆ ಕಿರುಕುಳ; ಕಂಪನಿಯಿಂದ ಖಡಕ್​ ಆ್ಯಕ್ಷನ್​! Zepto Delivery Boy Harasses Women

ಝೆಪ್ಟೋ ಡೆಲಿವರಿ ಬಾಯ್​ನಿಂದ ಯುವತಿಗೆ ಕಿರುಕುಳ
ಝೆಪ್ಟೋ ಡೆಲಿವರಿ ಬಾಯ್​ನಿಂದ ಯುವತಿಗೆ ಕಿರುಕುಳ
Published on

ಪ್ರಮುಖ ಮುಖ್ಯಾಂಶಗಳು

  • ಝೆಪ್ಟೋ ಡೆಲಿವರಿ ಬಾಯ್ ಕಿರುಕುಳ ಪ್ರಕರಣ
  • ನೀರು ಕೇಳುವ ನೆಪದಲ್ಲಿ ಯುವತಿ ಮನೆಗೆ ನುಗ್ಗಲು ಯತ್ನ
  • ಕಂಪನಿಯಿಂದ ಡೆಲಿವರಿ ಬಾಯ್​ ಮೇಲೆ ಕಠಿಣ ಕ್ರಮ ಜಾರಿ
ಬೆಂಗಳೂರು: ಇಂದಿನ ವೇಗದ ಜಗತ್ತಿನಲ್ಲಿ, ದಿನಸಿ ವಸ್ತುಗಳನ್ನು ತರಲು ನಮಗೆ ಸಮಯದ ಅಭಾವ ಕಾಡುತ್ತಿದೆ. ಹೀಗಾಗಿ ಇದನ್ನು ಬಳಸಿಕೊಂಡು ಕೆಲ ಕಂಪನಿಗಳು ಕೇವಲ 5 ನಿಮಿಷ, 10 ನಿಮಿಷಗಳಲ್ಲಿ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸೇವೆಯನ್ನು ನೀಡುವುದಾಗಿ ಭರವಸೆ ನೀಡುತ್ತವೆ.
ಆದರೆ, ಈಗ ಈ ಆನ್​ಲೈನ್​ ಸೇವೆಗಳೇ ಪ್ರಾಣಕ್ಕೆ, ಮಾನಕ್ಕೆ ಕುತ್ತು ತರುತ್ತಿರುವ ಕೆಲ ಘಟನೆಗಳು ವರದಿಯಾಗುತ್ತಿದ್ದು, ಇತ್ತೀಚೆಗೆ ಸಿಲಿಕಾನ್​ ಸಿಟಿಯಲ್ಲಿ ಮಹಿಳೆಯೊಬ್ಬಳಿಗೆ ಕಿರುಕುಳ (Zepto Delivery Boy Harasses Women) ನೀಡಿರುವ ಘಟನೆ ಮುನ್ನಲೆಗೆ ಬಂದಿದೆ.

ಇತ್ತೀಚೆಗೆ, ಸೋಷಿಯಲ್​ ಮೀಡಿಯಾ ವೇದಿಕೆಯಾದ ಇನ್‌ಸ್ಟಾಗ್ರಾಮ್‌ನಲ್ಲಿ ಯುವತಿಯೊಬ್ಬರು ಈ ಆಘಾತಕಾರಿ ವಿಡಿಯೋಚವೊಂದನ್ನು ಹಂಚಿಕೊಂಡಿದ್ದು, ಇದು ಗ್ರಾಹಕರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಏನಿದು ಘಟನೆ?

ಇನ್​​ಸ್ಟಾಗ್ರಾಮ್​ನಲ್ಲಿ ವೈರಲ್​ ಆಗುತ್ತಿರುವ ವಿಡಿಯೋನಲ್ಲಿ, ಯುವತಿ ಹೇಳುತ್ತಿರುವಂತೆ, ಆಕೆ ಕೆಲ ಅಗತ್ಯ ಸಾಮಾಗ್ರಿಗಳನ್ನು ಆನ್​ಲೈನ್​ ವೇದಿಕೆ ಝೆಪ್ಟೋ (Zepto) ಮೂಲಕ ಕೆಲ ಸಾಮಾನುಗಳನ್ನು ತರಿಸಿದ್ದಾಳೆ. ಆದರೆ ಈ ವಸ್ತುಗಳನ್ನು ಆಕೆಗೆ ನೀಡಲು ಬಂದ ಡೆಲಿವರಿ ಹುಡುಗ ಆಘಾತಕಾರಿಯಾಗಿ ನಡೆದುಕೊಂಡಿದ್ದಾನೆಂದು ಆಕೆ ಆರೋಪಿಸಿದ್ದಾಳೆ.
ಆಕೆ ವಿಡಿಯೋನಲ್ಲಿ ಹೇಳಿರುವಂತೆ, ಸಾಮಾಗ್ರಿಗಳನ್ನು ಯುವತಿ ಕೈಗೆ ನೀಡಿದ ಆತನು, ಕುಡಿಯಲು ನೀರನ್ನು ಕೇಳಿದ್ದಾನೆ. ಆಗ ಕುಡಿಯಲು ನೀರಿನ ಬಾಟಲಿ ನೀಡಿದ ಈಕೆ, ಬಾಟಲಿಯನ್ನು ನೀವೆ ಇಟ್ಟುಕೊಳ್ಳಿ ಈಗ ಇಲ್ಲಿಂದ ಹೊರಡಿ ಎಂದಿದ್ದಾಳೆ.

ನೀರಿನ ಬಾಟಲಿಯನ್ನು ಕೈಗೆತ್ತಿಕೊಂಡ ಯುವಕ, ಸಂಪೂರ್ಣವಾಗಿ ಕುಡಿದಿದ್ದು, ಇನ್ನೊಮ್ಮೆ ನೀರು ಕೊಡಿ, ನನ್ನನ್ನು ಐದು ನಿಮಿಷ ನಿಮ್ಮ ಮನೆಯಲ್ಲಿ ಇರಿಸಿಕೊಳ್ಳಿ ಎಂದಿದ್ದಾನೆ. ಈ ಮಾತನ್ನು ಕೇಳಿಸಿಕೊಂಡು ತಬ್ಬಿಬ್ಬಾದ ಯುವತಿ, ಕೂಡಲೇ ಮನೆಯ ಬಾಗಿಲನ್ನು ಹಾಕಿಕೊಂಡಿದ್ದಾಳೆ.


ಆದರೆ, ಇಷ್ಟಕ್ಕೆ ಸುಮ್ಮನಾಗದ ಡೆಲಿವರಿ ಹುಡುಗ, ಬಾಗಿಲನ್ನು ಬಡಿಯುವುದು ಹಾಗೂ ಕಾಲಿಂಗ್​ ಬೆಲ್​ಅನ್ನು ನಿರಂತರವಾಗಿ ಒತ್ತಿದ್ದಾನೆ. ಇದರಿಂದ ನನಗೆ ವಿಪರೀತ ಭಯ ಉಂಟಾಗಿತ್ತು ಎಂದು ಯುವತಿ ವಿಡಿಯೋನಲ್ಲಿ ಕಣ್ಣೀರನ್ನು ಸುರಿಸಿದ್ದಾಳೆ.

ಕಂಪನಿಯ ಪ್ರತಿಕ್ರಿಯೆ ಹೇಗಿತ್ತು?


ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ಯುವತಿ, ತಕ್ಷಣವೇ ಝೆಪ್ಟೋ ಆ್ಯಪ್ ಮೂಲಕ ದೂರು ದಾಖಲಿಸಲು ಪ್ರಯತ್ನಿಸಿದ್ದಾರೆ. ಆದರೆ ಆ್ಯಪ್‌ನಿಂದ ತನಿಖೆ ನಡೆಯುತ್ತಿದೆ ಎಂಬ ಸಂದೇಶವಷ್ಟೇ ಬಂದಿದೆ. ಇದರಿಂದ ಸಿಟ್ಟಿಗೆದ್ದ ಯುವತಿ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಝೆಪ್ಟೋ ಕಂಪನಿ, ಯುವತಿಯ ಪೋಸ್ಟ್‌ಗೆ ಕಮೆಂಟ್ ಮಾಡಿ ಕ್ಷಮೆಯಾಚಿಸಿದೆ. ಇದು ನಾವು ನೀಡಲು ಬಯಸುವ ಸೇವೆಯಲ್ಲ. ದಯವಿಟ್ಟು ಆರ್ಡರ್ ವಿವರ ಕಳುಹಿಸಿ, ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದೆ. ಆ ಬಳಿಕ ಫಾಲೋ-ಅಪ್ ವಿಡಿಯೋ ಮಾಡಿದ ಯುವತಿ, ಝೆಪ್ಟೋ ಕಂಪನಿ ಆ ಡೆಲಿವರಿ ಬಾಯ್ ಐಡಿಯನ್ನು ರದ್ದುಗೊಳಿಸಿದೆ ಹಾಗೂ ಆತ ನನ್ನ ಮನೆ ಬಳಿ ಬಾರದಂತೆ ತಡೆಯಾಜ್ಞೆ ನೀಡಿದೆ ಎಂದು ತಿಳಿಸಿದ್ದಾರೆ.

ಪೊಲೀಸರಿಗೆ ದೂರು ನೀಡದಿರಲು ಕಾರಣವೇನು?

ಯುವತಿ ಪೊಲೀಸರ ಬಳಿ ಯಾಕೆ ಹೋಗಲಿಲ್ಲ? ಎಂದು ಕೆಲವರು ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರಿಸಿದ ಯುವತಿ, ಆ ಸವಾರನ ಯಾವುದೇ ಸರಿಯಾದ ವಿವರಗಳು ಅಥವಾ ಐಡಿ ಕಾರ್ಡ್ ನನ್ನ ಬಳಿ ಇರಲಿಲ್ಲ. ಹಾಗಾಗಿ ನಾನು ನೇರವಾಗಿ ಪೊಲೀಸರ ಬಳಿ ಹೋಗಲು ಸಾಧ್ಯವಾಗಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನೆಟ್ಟಿಗರ ಅಭಿಪ್ರಾಯವೇನು?

ಈ ವಿಡಿಯೋ ನೋಡಿದ ಜನ ಬೆಚ್ಚಿಬಿದ್ದಿದ್ದು, ನೆಟ್ಟಿಗರು ಕಮೆಂಟ್​ ಸೆಕ್ಷನ್ ತುಂಬಿಸುವ ಕೆಲಸಕ್ಕೆ ಇಳಿದಿದ್ದಾರೆ. ಯಾವತ್ತೂ ಡೆಲಿವರಿ ಸಿಬ್ಬಂದಿಯನ್ನು ಮನೆಯೊಳಗೆ ಬಿಡಬೇಡಿ. ಆರ್ಡರ್ ತಗೊಂಡು ಗೇಟ್ ಮುಚ್ಚಿಬಿಡಿ ಎಂದು ಒಬ್ಬರು ಎಚ್ಚರಿಕೆ ನೀಡಿದ್ದಾರೆ. ಇಂತಹ ಕಂಪನಿಗಳು ಡೆಲಿವರಿ ಬಾಯ್ಸ್‌ಗಳನ್ನು ನೇಮಿಸಿಕೊಳ್ಳುವಾಗ ಕನಿಷ್ಠ ಕ್ರಿಮಿನಲ್ ಹಿನ್ನೆಲೆ ಪರಿಶೀಲನೆ ಮಾಡಲೇಬೇಕು ಎಂದು ಹಲವರು ಒತ್ತಾಯಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net