ಇಸ್ರೇಲ್ ದಾಳಿಗೆ ಮತ್ತೊಬ್ಬ ನಾಯಕ ಸಾವು; ಗುಪ್ತಚರ ಮುಖ್ಯಸ್ಥ ಖತೀಬ್ ಹತ್ಯೆ ಮಾಹಿತಿ: ಖಚಿತ ಪಡಿಸದ ಇರಾನ್ | Israel Airstrike

 ಇರಾನ್​ ಗುಪ್ತಚರ ಮುಖ್ಯಸ್ಥ ಎಸ್ಮಾಯಿಲ್ ಖತೀಬ್
ಇರಾನ್​ ಗುಪ್ತಚರ ಮುಖ್ಯಸ್ಥ ಎಸ್ಮಾಯಿಲ್ ಖತೀಬ್
Published on
Israel Airstrike: ಇರಾನ್ ಮೇಲೆ ರಾತ್ರೋ ರಾತ್ರಿ ನಡೆಸಿದ ಏರ್​ಸ್ಟ್ರೈಕ್​ನಲ್ಲಿ ಇರಾನ್​ ಗುಪ್ತಚರ ಮುಖ್ಯಸ್ಥ ಎಸ್ಮಾಯಿಲ್ ಖತೀಬ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಬುಧವಾರ(ಮಾ. 18) ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್​ ಹೇಳಿದ್ದು, ಆದ್ಯಾಗ್ಯೂ ಇರಾನ್ ಖತೀಬ್ ಅವರ ಸಾವನ್ನು ನಿರಾಕರಿಸಿದೆ. 
ಈ ಕುರಿತು ಮಾತನಾಡಿರುವ ಕಾಟ್ಜ್​, ಈ ದಿನವಿಡೀ ಎಲ್ಲಾ ವಿಭಾಗಗಳಲ್ಲಿ ಗಮನಾರ್ಹ ವಿಷಯಗಳು ಬರಲಿವೆ. ಇತ್ತೀಚೆಗೆ ಹೊಸದಾಗಿ ನಡೆಸಿದ ಏರ್​​ಸ್ಟ್ರೈಕ್​ನಲ್ಲಿ ಇರಾನ್ ಗುಪ್ತಚರ ಮುಖ್ಯಸ್ಥ ಖತೀಬ್ ಅವರನ್ನು ಹತ್ಯೆ ಮಾಡಲಾಗಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಹೆಚ್ಚುವರಿ ಅನುಮೋದನೆಗಳನ್ನು ಪಡೆಯದೇ ಇರಾನಿನ ಯಾವುದೇ ಅಧಿಕಾರಿ & ಮುಖ್ಯಸ್ಥನನ್ನು ಕೊಲ್ಲಲು ಸೇನೆಗೆ ಮುಕ್ತವಾದ ಸ್ವಾತಂತ್ರ್ಯ ನೀಡಿದ್ದಾರೆ ಎಂದು ಹೇಳಿದ್ದಾರೆ.
ಖತೀಬ್ ಅವರು ಸಾವನ್ನಪ್ಪಿದ್ದು ಖಚಿತವಾದರೇ, ಕಳೆದ ಎರಡು ದಿನಗಳಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್​ನ ಮೂರನೇ ಉನ್ನತ ಮಟ್ಟದ ನಾಯಕರೊಬ್ಬ ಹತ್ಯೆ ಮಾಡಿದ ಘಟನೆ ಇದಾಗಿದೆ. ಮಂಗಳವಾರ ಇರಾನ್ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಮತ್ತು ಕ್ರಾಂತಿಕಾರಿ ಗಾರ್ಡ್‌ಗಳ ಸ್ವಯಂಸೇವಕ ಬಸಿಜ್ ಪಡೆಯ ಮುಖ್ಯಸ್ಥ ಘೋಲಮ್ರೆಜಾ ಸೊಲೈಮಾನಿ ಕೊಲ್ಲಲಾಗಿದೆ. 

ಯುದ್ಧದ ಹಿನ್ನೆಲೆ ಏನು?

2026, ಫೆಬ್ರವರಿ 28ರಂದು ಆರಂಭವಾದ ಈ ಯುದ್ಧವು ಇರಾನ್ ಮತ್ತು ಇಸ್ರೇಲ್ ನಡುವಿನ ದಶಕಗಳ ಕಾಲದ 'ನೆರಳು ಯುದ್ಧ' (Shadow War) ನೇರ ಸಂಘರ್ಷವಾಗಿ ಬದಲಾದ ಮಹತ್ವದ ತಿರುವು. ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ತಡೆಯಲು ರಾಜತಾಂತ್ರಿಕ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ, ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ 'ಆಪರೇಷನ್ ಎಪಿಕ್ ಫ್ಯೂರಿ' ಮತ್ತು 'ರೋರಿಂಗ್ ಲಯನ್' ಎಂಬ ಹೆಸರಿನಡಿ ಇರಾನ್ ಮೇಲೆ ಬೃಹತ್ ವೈಮಾನಿಕ ದಾಳಿಗಳನ್ನು ನಡೆಸಿದವು. 
ಫೆಬ್ರವರಿ 28ರ ಮುಂಜಾನೆ ನಡೆದ ದಾಳಿಯಲ್ಲಿ ಇರಾನ್‌ನ ಪರಮಾಣು ಕೇಂದ್ರಗಳು, ಕ್ಷಿಪಣಿ ನೆಲೆಗಳು ಮತ್ತು ರಾಜಧಾನಿ ಟೆಹ್ರಾನ್‌ನಲ್ಲಿದ್ದ ಪ್ರಮುಖ ಸರ್ಕಾರಿ ಕಚೇರಿಗಳನ್ನು ಗುರಿಯಾಗಿಸಿ ದಾಳಿ ಮಾಡಲಾಯಿತು. ಈ ವೇಳೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವಿಗೀಡಾದರು. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್ ಮತ್ತು ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ನೂರಾರು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸುತ್ತಿದೆ. ಸದ್ಯ ಯುದ್ಧ ಮುಂದುವರಿದಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net