ರಾಷ್ಟ್ರೀಯ ಪಕ್ಷದಿಂದ ವಿಜಯ್​ಗೆ ಸಿಎಂ ಹುದ್ದೆಯ ಆಫರ್!.. ಅಚ್ಚರಿಯ ವಿಷಯ ಬಹಿರಂಗಪಡಿಸಿದ ಟಿವಿಕೆ ನಾಯಕ | TVK

TVK |  ನಟ ವಿಜಯ್
TVK | ನಟ ವಿಜಯ್
Published on
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವನ್ನು ತಮ್ಮ ಮೈತ್ರಿಕೂಟಕ್ಕೆ ಸೆಳೆಯಲು ರಾಷ್ಟ್ರೀಯ ಪಕ್ಷವೊಂದು ಮುಖ್ಯಮಂತ್ರಿ ಸ್ಥಾನ ಮತ್ತು 50 ರಿಂದ 90 ಸೀಟುಗಳ ಬೃಹತ್ ಆಫರ್ ನೀಡಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಮಂಗಳವಾರ ಕೊಳತ್ತೂರಿನಲ್ಲಿ ನಡೆದ ಪಕ್ಷದ ಪ್ರಮುಖ ಸಭೆಯಲ್ಲಿ ಮಾತನಾಡಿದ ಟಿವಿಕೆ ನಾಯಕ ಆಧವ್ ಅರ್ಜುನ, ವಿಜಯ್ ಅವರಿಗೆ ಬಂದಿರುವ ಆಫರ್ ಬಗ್ಗೆ ಅಚ್ಚರಿಯ ಮಾಹಿತಿ ಬಿಚ್ಚಿಟ್ಟಿದ್ದಾರೆ. ಮುಖ್ಯಮಂತ್ರಿ ಹುದ್ದೆಗಾಗಿ ವಿಜಯ್ ದೆಹಲಿಗೆ ಶರಣಾಗುವ ವ್ಯಕ್ತಿಯಲ್ಲ. ಅವರಿಗೆ 50 ರಿಂದ 90 ಸ್ಥಾನಗಳವರೆಗೆ ಮತ್ತು ಸಮಾನ ಅಧಿಕಾರ ಹಂಚಿಕೆಯ ಆಫರ್‌ಗಳನ್ನು ನೀಡಲಾಗಿತ್ತು. ಆದರೆ ಜನರ ವಿಶ್ವಾಸ ಮುಖ್ಯವೇ ಹೊರತು ಅಧಿಕಾರವಲ್ಲ ಎಂದು ನಮ್ಮ ನಾಯಕರು ಅದನ್ನು ನಿರಾಕರಿಸಿದ್ದಾರೆ ಎಂದರು.

ಎನ್‌ಡಿಎ ಒಕ್ಕೂಟದಲ್ಲಿ ತಲ್ಲಣ

ಬಿಜೆಪಿ ನೇತೃತ್ವದ ಎನ್​ಡಿಎ ಒಕ್ಕೂಟ ವಿಜಯ್​​ಗೆ ಉಪಮುಖ್ಯಮಂತ್ರಿ ಸ್ಥಾನ ಮತ್ತು 55 ಸೀಟುಗಳನ್ನು ನೀಡಲು ಮುಂದಾಗಿದೆ. ಆದರೆ, ಈ ಪ್ರಸ್ತಾವನೆಗೆ ಎನ್‌ಡಿಎ ಮಿತ್ರಪಕ್ಷವಾದ ಎಐಎಡಿಎಂಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ವಿಜಯ್​ರ ಪ್ರವೇಶದಿಂದ ತಮ್ಮ ಭದ್ರಕೋಟೆಗೆ ಹಾನಿಯಾಗಬಹುದು ಎಂಬ ಭೀತಿಯಲ್ಲಿರುವ ಎಡಪ್ಪಾಡಿ ಪಳನಿಸ್ವಾಮಿ, ಟಿವಿಕೆ ಜೊತೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸೈದ್ಧಾಂತಿಕ ಶತ್ರು Vs ರಾಜಕೀಯ ಶತ್ರು

ವಿಜಯ್ ಈಗಾಗಲೇ ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯನ್ನು ತಮ್ಮ ಸೈದ್ಧಾಂತಿಕ ಶತ್ರು ಎಂದು ಕರೆದಿರುವ ಅವರು, ಆಡಳಿತಾರೂಢ ಡಿಎಂಕೆ ಪಕ್ಷವನ್ನು ತಮ್ಮ ರಾಜಕೀಯ ಶತ್ರು ಎಂದು ಘೋಷಿಸಿದ್ದಾರೆ. ಈ ಮೂಲಕ ಸ್ಟಾಲಿನ್ ಮತ್ತು ಬಿಜೆಪಿ ಎರಡರಿಂದಲೂ ಸಮಾನ ಅಂತರ ಕಾಯ್ದುಕೊಳ್ಳುವ ಮುನ್ಸೂಚನೆ ನೀಡಿದ್ದಾರೆ. ಅಣ್ಣಾದೊರೈ ಮತ್ತು ಎಂಜಿಆರ್ ಅವರ ರಾಜಕೀಯ ಪರಂಪರೆಯನ್ನು ಪ್ರತಿಪಾದಿಸುತ್ತಿರುವ ವಿಜಯ್, ಈ ಚುನಾವಣೆಯಲ್ಲಿ ಏಕಾಂಗಿ ಹೋರಾಟ ನಡೆಸಲು ಸಜ್ಜಾಗಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net