ಬಾಂಗ್ಲಾದಲ್ಲಿ ನಿಲ್ಲದ ಹಿಂದೂಗಳ ಹತ್ಯೆ: 24 ಗಂಟೆಯಲ್ಲಿ 2ನೇ ಕೊಲೆ, ಒಟ್ಟು 6 ಅಮಾಯಕರು ಬಲಿ! Hindu

ಮೋನಿ ಚಕ್ರವರ್ತಿ ಹಾಗೂ ರಾಣಾ ಪ್ರತಾಪ್
ಮೋನಿ ಚಕ್ರವರ್ತಿ ಹಾಗೂ ರಾಣಾ ಪ್ರತಾಪ್
Published on

ಪ್ರಮುಖ ಮುಖ್ಯಾಂಶಗಳು

  • ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಹಿಂದೂಗಳ ಭೀಕರ ಹತ್ಯೆ ಮುಂದುವರೆದಿದೆ
  • ಕೇವಲ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಮತ್ತೊಬ್ಬ ಹಿಂದು ವ್ಯಕ್ತಿಯ ಹತ್ಯೆ
  • ಒಂದು ಆತಂಕಕಾರಿ ಬೆಳವಣಿಗೆ ಬಾಂಗ್ಲಾದಲ್ಲಿರುವ ಹಿಂದೂಗಳಲ್ಲಿ ಸಾಕಷ್ಟು ಭೀತಿ ಸೃಷ್ಟಿಸಿದೆ
  • ಮೋನಿ ಚಕ್ರವರ್ತಿ ಎಂಬುವರ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ ಹತ್ಯೆ
ಢಾಕಾ: ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಹಿಂದೂಗಳ ಭೀಕರ ಹತ್ಯೆ ಮುಂದುವರೆದಿದೆ. ಕಳೆದ ಕೆಲವು ದಿನಗಳಿಂದ ಹಿಂದೂ ( Hindu ) ಗಳನ್ನು ಗುರಿಯಾಗಿಸಿಕೊಂಡು ಬಾಂಗ್ಲಾದಲ್ಲಿ ದಾಳಿಗಳು ನಡೆಯುತ್ತಿದ್ದು, ಕೇವಲ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಮತ್ತೊಬ್ಬ ಹಿಂದು ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಒಂದು ಆತಂಕಕಾರಿ ಬೆಳವಣಿಗೆ ಬಾಂಗ್ಲಾದಲ್ಲಿರುವ ಹಿಂದೂಗಳಲ್ಲಿ ಸಾಕಷ್ಟು ಭೀತಿ ಸೃಷ್ಟಿಸಿದೆ.
ಸೋಮವಾರ (ಜ. 5) ಸಂಜೆ, ಜಶೋರ್ ಜಿಲ್ಲೆಯ ಮಣಿರಾಂಪುರದಲ್ಲಿ ಹಗಲು ಹೊತ್ತಿನಲ್ಲೇ ರಾಣಾ ಪ್ರತಾಪ್ ಎಂಬ ಹಿಂದೂ ಯುವಕನನ್ನು ದುಷ್ಕರ್ಮಿಗಳು ಕ್ರೂರವಾಗಿ ಗುಂಡಿಕ್ಕಿ ಕೊಂದರು. ರಾಣಾ ಪ್ರತಾಪ್ ಹತ್ಯೆಯಾದ 24 ಗಂಟೆಗಳ ಒಳಗೆ, ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ.
ಸೋಮವಾರ ರಾತ್ರಿ 10 ಗಂಟೆಗೆ ನರಸಿಂಗ್ಡಿ ಜಿಲ್ಲೆಯಲ್ಲಿ ಮೋನಿ ಚಕ್ರವರ್ತಿ ಎಂಬುವರ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಲಾಗಿದ್ದು, ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಚಕ್ರವರ್ತಿ ಮೃತಪಟ್ಟಿದ್ದಾರೆ. ಇದರೊಂದಿಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ಸಂಖ್ಯೆ 6 ಕ್ಕೆ ಏರಿದೆ.‘
ಈಯವರೆಗೆ, ದೀಪು ದಾಸ್, ಅಮೃತ್ ಮಂಡಲ್, ಬಜೇಂದ್ರ ಬಿಸ್ವಾಸ್, ಖೋಕೋನ್ ದಾಸ್ ಮತ್ತು ರಾಣಾ ಪ್ರತಾಪ್ ಕೊಲ್ಲಲ್ಪಟ್ಟಿದ್ದಾರೆ. ಇದೀಗ ಚಕ್ರವರ್ತಿ ಸೇರಿ ಒಟ್ಟು 6 ಹಿಂದುಗಳು ಹತ್ಯೆಯಾಗಿದ್ದಾರೆ. 
ಇನ್ನು ಶನಿವಾರ (ಜ.03) ಜೆನೈದಾ ಜಿಲ್ಲೆಯಲ್ಲಿ ಹಿಂದೂ ಮಹಿಳೆಯೊಬ್ಬರ ಮೇಲೆ ಇಬ್ಬರು ಪುರುಷರು ಅತ್ಯಾಚಾರ ಎಸಗಿ, ಹಣಕ್ಕೂ ಬೇಡಿಕೆ ಇಟ್ಟರು. ಆಕೆ ಕಿರುಚಿದಾಗ, ಆಕೆಯನ್ನು ಮರಕ್ಕೆ ಕಟ್ಟಿ, ಆಕೆಯ ಕೂದಲು ಕತ್ತರಿಸಿ, ಆ ಕೃತ್ಯವನ್ನು ರೆಕಾರ್ಡ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು. ಪ್ರಜ್ಞೆ ತಪ್ಪಿ ಬಿದ್ದಿದ್ದ ಮಹಿಳೆಯನ್ನು ಸ್ಥಳೀಯ ನಿವಾಸಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೆಲವು ದಿನಗಳ ಮೊದಲು, 50 ವರ್ಷದ ಖೋಕೋನ್ ಚಂದ್ರ ದಾಸ್ ಅವರನ್ನು ಕ್ರೂರವಾಗಿ ಹಲ್ಲೆ ಮಾಡಿ ಬೆಂಕಿ ಹಚ್ಚಲಾಯಿತು. ಅವರು ರಾಷ್ಟ್ರ ರಾಜಧಾನಿ ಢಾಕಾದಿಂದ 150 ಕಿ.ಮೀ ದೂರದಲ್ಲಿರುವ ತಮ್ಮ ಗ್ರಾಮದಲ್ಲಿ ಔಷಧಿ ಮತ್ತು ಮೊಬೈಲ್ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿದ್ದರು. ಕಳೆದ ಬುಧವಾರ ತನ್ನ ಅಂಗಡಿಯನ್ನು ಮುಚ್ಚಿ ಮನೆಗೆ ಹಿಂತಿರುಗುವಾಗ ದಾಳಿ ನಡೆಯಿತು. ಬೆಂಕಿ ಹಚ್ಚಿದಾಗ ಪಕ್ಕದಲ್ಲೇ ಇದ್ದ ಕೊಳಕ್ಕೆ ಹಾರಿದರು. ಇದರಿಂದ ತಲೆ ಮತ್ತು ಮುಖವನ್ನು ಆವರಿಸಿದ್ದ ಬೆಂಕಿ ನಂದಿತು. ಇದಾದ ನಂತರ ದಾಳಿಕೋರರು ಪರಾರಿಯಾಗಿದ್ದರು. ಆದರೆ, ಜನವರಿ 3 ರಂದು ಗಂಭೀರ ಗಾಯಗಳಿಂದಾಗಿ ಚಂದ್ರ ದಾಸ್​ ಆಸ್ಪತ್ರೆಯಲ್ಲಿ ನಿಧನರಾದರು.
ಡಿಸೆಂಬರ್ 29 ರಂದು ಮೈಮೆನ್ಸಿಂಗ್‌ನಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿ ಬಜೇಂದ್ರ ಬಿಸ್ವಾಸ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಭಾಲುಕಾದಲ್ಲಿ ಗಾರ್ಮೆಂಟ್ ಕಾರ್ಖಾನೆಯಲ್ಲಿ ಕರ್ತವ್ಯದಲ್ಲಿದ್ದಾಗ ನಲವತ್ತು ವರ್ಷದ ಬಿಸ್ವಾಸ್ ಅವರನ್ನು ಸಹೋದ್ಯೋಗಿಯಾದ ನೋಮನ್​ ಮಿಯಾ ಗುಂಡಿಕ್ಕಿ ಕೊಂದನು. ಈತ ಬಾಂಗ್ಲಾದೇಶದ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಅರೆಸೈನಿಕ ಸಹಾಯಕ ಪಡೆಯಾದ ಅನ್ಸಾರ್ ಬಹಿನಿಯ ಸದಸ್ಯ. 
ಡಿಸೆಂಬರ್ 24 ರಂದು, ರಾಜ್ಬರಿಯಲ್ಲಿ ಸುಲಿಗೆ ಆರೋಪದ ಮೇಲೆ ಅಮೃತ್ ಮಂಡಲ್ ಎಂಬ 29 ವರ್ಷದ ಹಿಂದೂ ವ್ಯಕ್ತಿಯನ್ನು ಗುಂಪು ಗುಂಪಾಗಿ ಹತ್ಯೆ ಮಾಡಲಾಯಿತು. ಡಿಸೆಂಬರ್ 18 ರಂದು, ಮೈಮೆನ್ಸಿಂಗ್‌ನಲ್ಲಿ ಧರ್ಮನಿಂದನೆಯ ಆರೋಪದ ಮೇಲೆ 29 ವರ್ಷದ ದೀಪು ಚಂದ್ರ ದಾಸ್ ಅವರನ್ನು ಗುಂಪೊಂದು ಹೊಡೆದು ಕೊಂದು, ಅವರ ದೇಹಕ್ಕೆ ಬೆಂಕಿ ಹಚ್ಚಿದರು. 

ಭಾರತ ಕಳವಳ

ಬಾಂಗ್ಲಾದೇಶದಲ್ಲಿ ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಬೌದ್ಧರು ಸೇರಿದಂತೆ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದಾಳಿಗಳು ತೀವ್ರ ಕಳವಳಕಾರಿ ವಿಷಯವಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ಬಾಂಗ್ಲಾದ ಮಧ್ಯಂತರ ಸರ್ಕಾರದ ಅವಧಿಯಲ್ಲಿ ಹತ್ಯೆಗಳು, ಬೆಂಕಿ ಹಚ್ಚುವಿಕೆ ಮತ್ತು ಭೂಕಬಳಿಕೆ ಪ್ರಕರಣಗಳು ಸೇರಿದಂತೆ ಅಲ್ಪಸಂಖ್ಯಾತರ ವಿರುದ್ಧದ 2,900 ಕ್ಕೂ ಹೆಚ್ಚು ಹಿಂಸಾಚಾರ ಘಟನೆಗಳು ವರದಿಯಾಗಿವೆ. ಈ ಘಟನೆಗಳನ್ನು ಕೇವಲ ಮಾಧ್ಯಮ ಉತ್ಪ್ರೇಕ್ಷೆ ಎಂದು ತಳ್ಳಿಹಾಕಲು ಸಾಧ್ಯವಿಲ್ಲ ಅಥವಾ ರಾಜಕೀಯ ಹಿಂಸಾಚಾರ ಎಂದು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net