ವಿಶ್ವಕರ್ಮ ಸಮಾಜಕ್ಕೆ ಬಜೆಟ್‌ನಲ್ಲಿ ಪ್ರತ್ಯೇಕ ಪ್ಯಾಕೇಜ್ ಘೋಷಿಸಿ- Vishwakarma Samaja

ಕೆ.ಪಿ.ನಂಜುಂಡಿ
ಕೆ.ಪಿ.ನಂಜುಂಡಿ
Published on
ಬೆಂಗಳೂರು: ದೇಶಕ್ಕೆ ತನ್ನದೆಯಾದ ಕೊಡುಗೆ ಕೊಟ್ಟಿರುವ ವಿಶ್ವಕರ್ಮ ಸಮುದಾಯಕ್ಕೆ, ರಾಜ್ಯ ಬಜೆಟ್‌ನಲ್ಲಿ ಪ್ರತ್ಯೇಕ ಪ್ಯಾಕೇಜ್ ಘೋಷಿಸಬೇಕೆಂದು ಸರ್ಕಾರವನ್ನು, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಒತ್ತಾಯಿಸಿದೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಜಿ ಎಂಎಲ್ಸಿ ಕೆ.ಪಿ.ನಂಜುಂಡಿ ಮಾತನಾಡಿ, ರಾಜ್ಯದಲ್ಲಿ ಅಂದಾಜು 40 ಲಕ್ಷ ವಿಶ್ವಕರ್ಮ ಸಮುದಾಯದ ಜನರು ಇದ್ದಾರೆ. ಜನಸಂಖ್ಯೆಯಲ್ಲಿ ಕುರುಬ ಸಮುದಾಯದ ನಂತರ ನಾವು ಹೆಚ್ಚು ಇದ್ದೇವೆ. ಆದರೆ, ರಾಜಕೀಯ ನಿರ್ಲಕ್ಷ್ಯದಿಂದ ಸಾಮಾಜಿಕ ನ್ಯಾಯದಿಂದ ನಮ್ಮನ್ನು ಹೊರಗಿಡಲಾಗಿದೆ. ಜಾತಿಜನಗಣತಿ ಸಂದರ್ಭದಲ್ಲಿ 40 ಲಕ್ಷ ಇದ್ದ ಜನಸಂಖ್ಯೆಯನ್ನು 8 ಲಕ್ಷಕ್ಕೆ ತಂದಿಟ್ಟಿದ್ದಾರೆ. ದೇಶದ ಸಾಂಸ್ಕೃತಿಕ ರಾಯಭಾರಿಗಳನ್ನು ಕರೆಯುವ ನಮ್ಮ ಸಮಾಜವನ್ನು ಹಿಂದಿನಿಂದಲೂ ಕಡೆಗಣಿಸಲಾಗುತ್ತಿದೆ. ಆದ್ದರಿಂದ, ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಸಮುದಾಯದ ಅಭ್ಯುದಯಕ್ಕಾಗಿ ಸರ್ಕಾರ ಆದ್ಯತೆ ನೀಡುವಂತಾಗಬೇಕು ಎಂದು ಮನವಿ ಮಾಡಿದರು.
ಸಾಮಾಜಿಕ ನ್ಯಾಯಕ್ಕಾಗಿ ಬೀದರ್‌ನಿಂದ ಬೆಂಗಳೂರುವರೆಗೆ ಪಾದಯಾತ್ರೆ ಮಾಡಲು ಹಿಂಜರಿಯುವುದಿಲ್ಲ. ಹಾವನೂರು ವರದಿಯಲ್ಲಿ ನಮ್ಮ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರುವ ಅರ್ಹತೆ ಇದ್ದರೂ ಹಿಂದುಳಿದ ವರ್ಗಕ್ಕೆ ಸೇರಿಸಲಾಗಿದೆ. ಎಲ್ಲರೂ ಒಗ್ಗಟ್ಟಾಗಿ ಸರ್ಕಾರದ ಸವಲತ್ತು ಮತ್ತು ಮೀಸಲಾತಿ ಸಿಗುವವರೆಗೂ ಹೋರಾಟ ನಡೆಸೋಣ. ಬರುವ ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸಮಾವೇಶ ನಡೆಸಲು ಉದ್ದೇಶ ಇದೆ. ನಮ್ಮನ್ನು ಹೊಟ್ಟೆ ಉರಿಸಿ ನೀವು ಬದುಕುವುದಕ್ಕೆ ಆಗುವುದಿಲ್ಲ. ನಮ್ಮ ಸಮಸ್ಯೆ ಪುಟಗಟ್ಟಲೆ ಇದೆ. ಹಾಗಾಗಿ, ಸಮಾಜವನ್ನು ಗುರುತಿಸುವ ಕೆಲಸವಾಗಬೇಕು ಎಂದು ಮನವಿ ಮಾಡಿದರು.
ದೌರ್ಜನಕ್ಕೆ ಒಳಗಾದ ಕಾಯಕ ಸಮಾಜಗಳು
ಅಗ್ಗಸಾಲಿಗರಿಗೆ ಕೆಲಸವಿಲ್ಲದೆ 3 ಹೊತ್ತು ಊಟಕ್ಕಾಗಿ ಪರದಾಡುತ್ತಿದ್ದಾರೆ. ಚಿನ್ನ ಮತ್ತು ಬೆಳ್ಳಿ ಸೇರಿ ಇತರ ಕಸುಬು ಮಾಡುತ್ತಿರುವ ನಮ್ಮ ಸಮುದಾಯ ಅಕ್ಷರಶಃ ನಡು ಬೀದಿಯಲ್ಲಿ ನಿಂತಿದೆ. ಗುಡಿ ಗೋಪುರಗಳಿಂದ ಕರ್ನಾಟಕಕ್ಕೆ ಹೆಸರು ಬಂದಿದೆ. ಇದಕ್ಕೆ ನಾವು ಮೂಲಪುರುಷರು. ಪ್ರತಿ ಮನೆಗೆ ದೇವರು ಮಾಡಿಕೊಟ್ಟಿದ್ದೇವೆ. ಹೀಗಿರುವಾಗ, ಸಾಮಾಜಿಕ ನ್ಯಾಯ ಸಿಗದೆ ನಮ್ಮ ಸಮಾಜ ಇಂದು ತಬ್ಬಲಿಯಾಗಿದೆ ಎಂದು ಕೆ.ಪಿ.ನಂಜುಂಡಿ ಬೇಸರ ವ್ಯಕ್ತಪಡಿಸಿದರು.
ಹಿಂದುಳಿದ ವರ್ಗದಡಿ ಬರುವ ವಿಶ್ವಕರ್ಮ ಸೇರಿ ಹತ್ತಾರು ಕಾಯಕ ಸಮಾಜಗಳು ದೌರ್ಜನ್ಯಕ್ಕೆ ಒಳಗಾಗಿವೆ. ಈ ಜಾತಿಗಳು ಒಗ್ಗೂಡಿ ಸಾಮಾಜಿಕ ನ್ಯಾಯ ಪಡೆಯಲು ಹೋರಾಟ ನಡೆಸುವ ಅಗತ್ಯವಿದೆ.ಇತ್ತೀಚಿನ ವರ್ಷಗಳಲ್ಲಿ ಜಾತಿಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲಾಗುತ್ತಿದೆ. ಸಮುದಾಯದ ಕಷ್ಟಗಳ ಬಗ್ಗೆ ಯಾವ ಜನಪ್ರತಿನಿಧಿಗಳು ವಿಧಾನಸಭೆಯಲ್ಲಿ ಧ್ವನಿ ಎತ್ತಿಲ್ಲ ಎಂದು ನೋವು ತೋಡಿಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net