ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಅಮಿತ್ ಷಾ ಭೇಟಿಯಾದ ಅಣ್ಣಾಮಲೈ!..ಸಿಂಗಂ ಮುಂದಿನ ನಡೆ ಏನು ಗೊತ್ತಾ..? | Annamalai Meets Amit Shah

Annamalai Meets Amit Shah | ಅಮಿತ್ ಷಾ ಭೇಟಿಯಾದ ಅಣ್ಣಾಮಲೈ!
Annamalai Meets Amit Shah | ಅಮಿತ್ ಷಾ ಭೇಟಿಯಾದ ಅಣ್ಣಾಮಲೈ!
Published on
ನವದೆಹಲಿ: ತಮಿಳುನಾಡು ರಾಜಕೀಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿರುವ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್​ ನವೀನ್​​ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ ಬೆನ್ನಲ್ಲೇ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ (Annamalai Meets Amit Shah) ಮಾತುಕತೆ ನಡೆಸಿದ್ದಾರೆ. 
ಅಣ್ಣಾಮಲೈ ಹೊಸ ರಾಜಕೀಯ ಪಕ್ಷ ಕಟ್ಟಲಿದ್ದಾರೆ ಎಂಬ ವದಂತಿಗಳು ದಟ್ಟವಾಗಿರುವ ಹೊತ್ತಿನಲ್ಲೇ ನಡೆದಿರುವ ಈ ಹೈ-ಪ್ರೊಫೈಲ್ ಭೇಟಿ, ಅವರ ಮುಂದಿನ ರಾಜಕೀಯ ಭವಿಷ್ಯದ ಕುರಿತಾದ ಚರ್ಚೆಗಳನ್ನು ರಾಷ್ಟ್ರ ಮಟ್ಟದಲ್ಲಿ ಮತ್ತಷ್ಟು ತೀವ್ರಗೊಳಿಸಿದೆ. ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ವದಂತಿಗಳಿಗೆ ಪುಷ್ಟಿ ನೀಡುವಂತೆ ಅಣ್ಣಾಮಲೈ ಬಿಜೆಪಿಗೆ ಗುಡ್‌ಬೈ ಹೇಳಿದ್ದು, ಶೀಘ್ರದಲ್ಲೇ ನೂತನವಾಗಿ ರಾಜಕೀಯ ಪಕ್ಷವನ್ನು ಸ್ಥಾಪಿಸಲಿದ್ದಾರೆ ಎಂಬ ವರದಿಗಳು ಕೇಳಿಬರುತ್ತಿವೆ. ಆದರೆ, ಹೊಸ ಪಕ್ಷದ ಘೋಷಣೆಯ ಕುರಿತು ಈವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

ಎರಡು ದಿನಗಳಲ್ಲಿ ನಿಲುವು ಸ್ಪಷ್ಟಪಡಿಸಲಿರುವ ಅಣ್ಣಾಮಲೈ!

ತಾವು ಹೊಸ ರಾಜಕೀಯ ಪಕ್ಷವನ್ನು ಅಸ್ತಿತ್ವಕ್ಕೆ ತರಲಿದ್ದಾರೆಯೇ ಎಂಬ ಮಾಧ್ಯಮಗಳ ತೀವ್ರ ಪ್ರಶ್ನೆಗಳಿಗೆ ಸೋಮವಾರವಷ್ಟೇ ಪ್ರತಿಕ್ರಿಯಿಸಿದ್ದ ಅಣ್ಣಾಮಲೈ, ದಯವಿಟ್ಟು ಇನ್ನು ಎರಡು ದಿನ ಕಾಯಿರಿ. ನಾವು ಒಟ್ಟಿಗೆ ಕುಳಿತು ಈ ಬಗ್ಗೆ ಸುದೀರ್ಘವಾಗಿ ಮಾತನಾಡೋಣ ಎಂದು ಹೇಳುವ ಮೂಲಕ ತಮ್ಮ ಮುಂದಿನ ನಿಲುವನ್ನು ಸಸ್ಪೆನ್ಸ್ ಆಗಿ ಇಟ್ಟಿದ್ದರು. ತಾವು ದೆಹಲಿಗೆ ತೆರಳಿ ಪಕ್ಷದ ಅಧ್ಯಕ್ಷರನ್ನು ಭೇಟಿಯಾಗಿ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಗಳ ನಡುವೆಯೇ ಈ ಹೇಳಿಕೆ ನೀಡಿದ್ದರು.

ಕೇಂದ್ರದ ನೀತಿಗೆ ಅಣ್ಣಾಮಲೈ ವಿರೋಧ!

ಇತ್ತೀಚೆಗೆ 9ನೇ ತರಗತಿ ವಿದ್ಯಾರ್ಥಿಗಳಿಗೆ ತ್ರಿಭಾಷಾ ನೀತಿಯನ್ನು (Three-Language Policy) ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂಬ ಸಿಬಿಎಸ್‌ಇ (CBSE) ಆದೇಶವನ್ನು ಅಣ್ಣಾಮಲೈ ಅವರು ಬಹಿರಂಗವಾಗಿ ವಿರೋಧಿಸಿದ್ದರು. ಅಲ್ಲದೆ ಈ ಅಧಿಸೂಚನೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದರು. ಕೇಂದ್ರ ಸರ್ಕಾರದ ನೀತಿಯನ್ನು ನೇರವಾಗಿ ಪ್ರಶ್ನಿಸಿದ್ದನ್ನು ಕಂಡ ರಾಜಕೀಯ ವಿಶ್ಲೇಷಕರು, ಅಣ್ಣಾಮಲೈ ಬಿಜೆಪಿಯಿಂದ ಹೊರಬಂದು ಸ್ವಂತ ಪಕ್ಷ ಕಟ್ಟಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದರು.

ಕಡೆಗಣನೆಯಿಂದ ಮೂಡಿತ್ತು ಅಸಮಾಧಾನ!

ಕಳೆದ 2021ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಟಿಟಿವಿ ದಿನಕರನ್ ಮತ್ತು ಮಾಜಿ ಮುಖ್ಯಮಂತ್ರಿ ಓ. ಪನ್ನೀರಸೆಲ್ವಂರನ್ನು ಎನ್‌ಡಿಎ ಮೈತ್ರಿಕೂಟಕ್ಕೆ ಕರೆತರುವಲ್ಲಿ ಅಣ್ಣಾಮಲೈ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಇತ್ತೀಚಿನ ವಿಧಾನಸಭಾ ಚುನಾವಣೆಯ ಮುನ್ನ ಬಿಜೆಪಿ ಹೈಕಮಾಂಡ್ ಅಣ್ಣಾಮಲೈ ಸ್ಥಾನಕ್ಕೆ ನಯಿನಾರ್ ನಾಗೇಂದ್ರನ್​ರನ್ನು ತಮಿಳುನಾಡು ಬಿಜೆಪಿ ಸಾರಥಿಯನ್ನಾಗಿ ನೇಮಿಸಿತ್ತು. ಅಲ್ಲದೆ, ತಮಿಳುನಾಡಿನಲ್ಲಿ ಎಐಎಡಿಎಂಕೆ (AIADMK) ಜೊತೆ ಮೈತ್ರಿಯನ್ನು ಪುನರಾರಂಭಿಸಿತ್ತು. ಈ ಬೆಳವಣಿಗೆಗಳ ನಂತರ ಅಣ್ಣಾಮಲೈ ರಾಜಕೀಯ ಚಟುವಟಿಕೆಗಳಿಂದ ಸಂಪೂರ್ಣ ದೂರ ಉಳಿದಿದ್ದರು. ಇದೀಗ ಕಮಲ ಪಾಳೆಯದಿಂದ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net