ನೆಹರು ವಿರುದ್ಧ ಅಮಿತ್ ಶಾ ವೋಟ್ ಚೋರಿ ಆರೋಪ; ಹಸಿ ಸುಳ್ಳು; ರಾಜ್​ಮೋಹನ್ ಗಾಂಧಿ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್ ತಿರುಗೇಟು | Congress

ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್
ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್
Published on
ನವದೆಹಲಿ: ಲೋಕಸಭೆಯಲ್ಲಿ ದೇಶದ ಮೊದಲ ಪ್ರಧಾನಿ ಸರ್ದಾರ್ ಪಟೇಲ್ ಆಗಬೇಕಿತ್ತು, ಆದರೆ ಜವಾಹರ್ ಲಾಲ್ ನೆಹರು ವೋಟ್ ಚೋರಿ ಮೂಲಕ ಮೊದಲ ಪ್ರಧಾನಿಯಾದರು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಹಸಿ ಸುಳ್ಳು ಎಂದು ಕರೆದಿರುವ ಕಾಂಗ್ರೆಸ್(Congress), ರಾಜ್​ಮೋಹನ್ ಗಾಂಧಿಯವರ ಹೇಳಿಕೆ ಉಲ್ಲೇಖಿಸಿ ತಿರುಗೇಟು ನೀಡಿದೆ.
ನೆಹರು ಪ್ರಧಾನಿಯಾದಾಗ ದೇಶ ಜನರು ತುಂಬಾ ಸಂತೋಷಪಟ್ಟಿದ್ದಾರೆ. ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ವತಃ ಅದನ್ನು ಬೆಂಬಲಿಸಿದ್ದರು ಎಂಬ ಖ್ಯಾತ ಇತಿಹಾಸಕಾರ-ಲೇಖಕ ರಾಜಮೋಹನ್ ಗಾಂಧಿಯವರ ಹೇಳಿಕೆಯನ್ನು ಕಾಂಗ್ರೆಸ್ ಉಲ್ಲೇಖಿಸಿಸಿದೆ.
ಈ ಕುರಿತು ಎಕ್ಸ್​ನಲ್ಲಿ ಮಹಾತ್ಮ ಗಾಂಧಿಯವರ ಮೊಮ್ಮಗ ರಾಜ್​ಮೋಹನ್ ಗಾಂಧಿಯವರ 13 ನಿಮಿಷದ ವಿಡಿಯೋವನ್ನು ಎಕ್ಸ್​ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಪ್ರಖ್ಯಾತ ಇತಿಹಾಸಕಾರ-ಲೇಖಕ ಮತ್ತು ಮಾಜಿ ಸಂಸದ ರಾಜಮೋಹನ್ ಗಾಂಧಿ ಅವರು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವರು ಹೇಳಿದ ಒಂದು ಹಸಿ ಸುಳ್ಳನ್ನು ಬಹಿರಂಗಪಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
13 ನಿಮಿಷಗಳ ರಾಜ್​ಮೋಹನ್ ಗಾಂಧಿಯವರ ಸಂದರ್ಶನದಲ್ಲಿ, ಪ್ರದೇಶ ಕಾಂಗ್ರೆಸ್ ಸಮಿತಿಯು 1946ರಲ್ಲಿ ಪಟೇಲ್ ಅವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಲು ಬೆಂಬಲ ನೀಡಿತ್ತು. ಮತ್ತು ಆ ಸಮಯದಲ್ಲಿ ಪ್ರಧಾನಿ ಹುದ್ದೆಯ ಪ್ರಶ್ನೆಯೇ ಇರಲಿಲ್ಲ ಎಂದು ಅವರು ಹೇಳಿದ್ದಾರೆ.
ಕ್ವಿಟ್ ಇಂಡಿಯಾ ಚಳುವಳಿಗಾಗಿ ಜೈಲಿಗೆ ಹೋದ ಸಾವಿರಾರು ಜನರನ್ನು 1945ರಲ್ಲಿ ಬಿಡುಗಡೆ ಮಾಡಲಾಯಿತು. 1940ರಲ್ಲಿ ರಾಮಗಢ ಕಾಂಗ್ರೆಸ್ ಅಧಿವೇಶನದ ನಂತರ ಮೌಲಾನಾ ಆಜಾದ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಹಲವು ಜನ ಜೈಲಿಗೆ ಹೋದ ಕಾರಣ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಶ್ನೆಯೇ ಬರಲಿಲ್ಲ. ಮತ್ತು ಕಾಂಗ್ರೆಸ್ ಅನ್ನು ಸಹ ನಿಷೇಧಿಸಲಾಗಿತ್ತು. ಆದ್ದರಿಂದ ಮೌಲಾನಾ ಆಜಾದ್ ಅಧ್ಯಕ್ಷರಾಗಿ ಮುಂದುವರೆದರು. 1946 ರಲ್ಲಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಶ್ನೆ ಉದ್ಭವಿಸಿತು. ಪ್ರಧಾನಿ ಯಾರೂ ಎಂಬ ಪ್ರಶ್ನೆ ಅಲ್ಲಿ ಇರಲಿಲ್ಲ. ಭಾರತ ಶೀಘ್ರದಲ್ಲೇ ಸ್ವಾತಂತ್ರ್ಯ ಪಡೆಯುತ್ತದೆ ಎಂದು ಜನರಿಗೆ ತಿಳಿದಿತ್ತು. ಆದರೆ ಬ್ರಿಟಿಷರು ಮತ್ತು ಭಾರತೀಯರ ನಡುವೆ ಯಾವುದೇ ಒಪ್ಪಂದಕ್ಕೆ ಬರಲಿಲ್ಲ ಎಂದು ತಿಳಿಸಿದ್ದಾರೆ.
ಪ್ರತಿ ಪಿಸಿಸಿಯೂ ಈ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಹೆಸರನ್ನು ಮುಂದಿಡುವ ಪದ್ಧತಿ ಇತ್ತು.ಮತ್ತು 3-4 ಹೆಸರುಗಳು ಬರುತ್ತಿದ್ದರೆ, ಈ ಎಲ್ಲಾ ಹೆಸರುಗಳನ್ನು (ಮಹಾತ್ಮ) ಗಾಂಧಿಜಿ ಅವರ ಮುಂದೆ ಇಡಲಾಗುತ್ತಿತ್ತು. ಅವರು 'ಈ ವ್ಯಕ್ತಿಗೆ ಒಂದು ಅವಕಾಶ ನೀಡೋಣ' ಎಂದು ಹೇಳುತ್ತಿದ್ದರು. ಜನರು ಅವರ ಮಾತನ್ನು ಹೆಚ್ಚಾಗಿ ಒಪ್ಪುತ್ತಿದ್ದರು. ಗಾಂಧಿಯವರು ಆಯ್ಕೆ ಮಾಡಿದ ವ್ಯಕ್ತಿಯನ್ನು ಕಾಂಗ್ರೆಸ್‌ನ ಮುಂದಿನ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ನಿರ್ಧರಿಸಲಾಯಿತು. ಇದು ಒಳ್ಳೆಯ ವಿಧಾನ ಎಂದು ನಾನು ಹೇಳುವುದಿಲ್ಲ ಆದರೆ ಆ ಸಮಯದಲ್ಲಿ ಇದನ್ನು ಅನುಸರಿಸಲಾಗುತ್ತಿತ್ತು ಎಂದಿದ್ದಾರೆ.
1946ರಲ್ಲಿ ಅಧ್ಯಕ್ಷ ಸ್ಥಾನದ ಪ್ರಶ್ನೆ ಉದ್ಭವಿಸಿದಾಗ ಅನೇಕ ಪಿಸಿಸಿಗಳು ಸರ್ದಾರ್ ಪಟೇಲ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಶಿಫಾರಸು ಮಾಡಿದವು. ಮತ್ತು ಎರಡು-ಮೂರು ಪಿಸಿಸಿಗಳು ಆಚಾರ್ಯ ಕೃಪಲಾನಿ ಅವರ ಹೆಸರನ್ನು ಪ್ರಸ್ತಾಪಿಸಿದವು. ಆದರೆ ಯಾರೂ ನೆಹರು ಹೆಸರನ್ನು ಪ್ರಸ್ತಾಪಿಸಲಿಲ್ಲ. ಗಾಂಧಿ ಜಿ ಪಟೇಲ್ ಮತ್ತು ಕೃಪಲಾನಿಗೆ ತಮ್ಮ ಹೆಸರುಗಳನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಹೇಳಿದರು ಮತ್ತು ಅವರು ತಕ್ಷಣ ಹಾಗೆ ಮಾಡಿದರು. ಕಾರ್ಯಕಾರಿ ಸಮಿತಿ ಸಭೆ ಸೇರಿದಾಗ, ಅವರು (ಕಾರ್ಯಕಾರಿ ಸಮಿತಿ ಸದಸ್ಯರು) ನೆಹರೂ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಮಾತ್ರ ಪ್ರಸ್ತಾಪಿಸಿದರು. ಬ್ರಿಟಿಷರೊಂದಿಗೆ ಸ್ವಾತಂತ್ರ್ಯ ನೀಡುವ ಒಪ್ಪಂದ ಮಾಡಿಕೊಂಡಾಗ, ನೆಹರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು ಮತ್ತು ಸರ್ಕಾರ ರಚಿಸಲು ಆಹ್ವಾನಿಸಲ್ಪಟ್ಟರು ಎಂದು ಪ್ರತಿಪಾದಿಸಿದ್ದಾರೆ.
ಜೊತೆಗೆ ಜಬಲ್ಪುರದ ಡಿ.ಪಿ. ಮಿಶ್ರಾ ತಮ್ಮ ಪುಸ್ತಕದಲ್ಲಿ ನಾವು ಪಟೇಲ್ ಹೆಸರನ್ನು ಪ್ರಸ್ತಾಪಿಸಿದಾಗ, ನಮ್ಮ ಮನಸ್ಸಿನಲ್ಲಿ ಪ್ರಧಾನ ಮಂತ್ರಿ ಹುದ್ದೆ ಇರಲಿಲ್ಲ ಎಂದು ಬರೆದಿದ್ದಾರೆ ಎಂದು ತಿಳಿಸಿರುವ ರಾಜಮೋಹನ್ ಗಾಂಧಿ, ಪಟೇಲ್ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸುತ್ತೇವೆ ಎಂದು ಅನೇಕ ಜನರು ಭಾವಿಸಿದ್ದರು ಆದರೆ ಅವರನ್ನು ಪ್ರಧಾನಿ ಮಾಡುವ ಬಗ್ಗೆ ಯಾವುದೇ ಚಿಂತನೆ ಇರಲಿಲ್ಲ. ಪಟೇಲ್ ಪ್ರಧಾನಿಯಾಗಬೇಕೆಂದು ಕಾಂಗ್ರೆಸ್ ನಾಯಕರು ಬಯಸಿದ್ದರೆ, ಕನಿಷ್ಠ ಕೆಲವು ಪತ್ರಿಕೆಗಳಾದರೂ ನೆಹರೂ ಪ್ರಧಾನಿಯಾಗುವುದರ ಬಗ್ಗೆ ಅತೃಪ್ತಿ ಹೊಂದಿದ್ದಾರೆಂದು ವರದಿ ಮಾಡುತ್ತಿದ್ದವು. ಆದರೆ ಸರ್ದಾರ ಪಟೇಲ್​ಗೆ ನೆಹರು ಪ್ರಧಾನಿಯಾಗಿದ್ದು ಖುಷಿ ತಂದಿತ್ತು. ಅವರನ್ನು ಬೆಂಬಲಿಸಿದ್ದರು ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net