ಎಂಟು ಬಾರಿ ಶಾಸಕ, ಒಂದು ಬಾರಿ ಸಂಸದ..6 ಸಲ ಡಿಸಿಎಂ; ಸ್ನೇಹ ಮತ್ತು ಸಂಘರ್ಷ ಎರಡನ್ನೂ ಸಮನಾಗಿ ಗೆದ್ದಿದ್ದ ಅಜಿತ್​ ದಾದಾ | Ajit Pawar

Ajit Pawar | ಮಹಾರಾಷ್ಟ್ರ ಡಿಸಿಎಂ ಅಜಿತ್​ ಪವಾರ್
Ajit Pawar | ಮಹಾರಾಷ್ಟ್ರ ಡಿಸಿಎಂ ಅಜಿತ್​ ಪವಾರ್
Published on
ಪುಣೆ: ರಾಜಕೀಯದಲ್ಲಿ ಶಾಶ್ವತ ಮಿತ್ರರು ಇಲ್ಲ, ಶತ್ರುಗಳು ಇಲ್ಲ ಎನ್ನುವ ಮಾತಿಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸದಾ ಉದಾಹರಣೆಯಾಗಿ ನಿಲ್ಲುತ್ತಾರೆ. ಬುಧವಾರ ಬಾರಾಮತಿಯಲ್ಲಿ ಲ್ಯಾಂಡಿಂಗ್​ ಆಗುವ ಪ್ರಯತ್ನದಲ್ಲಿ ವಿಮಾನ ಅಪಘಾತಕ್ಕೀಡಾಗುವ ಮೂಲಕ ಅಜಿತ್​ ದಾದಾ ರಾಜಕೀಯ ಪ್ರಯಾಣಕ್ಕೆ ಪೂರ್ಣವಿರಾಮ ಬಿದ್ದಿದೆ.
66 ವರ್ಷದ ಅಜಿತ್ ದಾದಾ,​ ರಾಜಕೀಯ ಮಹತ್ವಾಕಾಂಕ್ಷೆ ಇದ್ದಂತಹ ರಾಜಕಾರಣಿ, ಕೆಲ ಬೇಡದ ಸುದ್ದಿಗಳಿಂದ ಪ್ರಚಾರದಲ್ಲಿದ್ದಿದ್ದು ಬಿಟ್ಟರೆ, ಅವರು ಕಂಡ ಕನಸ್ಸುಗಳು ಸಾಗರದಷ್ಟಿದ್ದವು.

ಅಜಿತ್​ ದಾದಾ ಜೀವನ

1959 ರ ಜುಲೈ 22 ರಂದು ಅಹ್ಮದ್‌ನಗರ ಜಿಲ್ಲೆಯ ದಿಯೋಲಾಲಿ ಪ್ರವರದಲ್ಲಿ ಜನಿಸಿದ ಅಜಿತ್ ಪವಾರ್, ಮಹಾರಾಷ್ಟ್ರದ ಸಾರ್ವಜನಿಕ ಜೀವನದಲ್ಲಿ ದೊಡ್ಡ ಹೆಸರು ಮಾಡಿದ್ದ ಶರದ್​ ಪವಾರ್​ ಕುಟುಂಬದಲ್ಲಿ ಹುಟ್ಟಿದವರು.
ಅಜಿತ್ ಪವಾರ್ 18 ವರ್ಷದವರಿದ್ದಾಗ ಅವರ ತಂದೆ ಅನಂತರಾವ್ ಪವಾರ್ ನಿಧನರಾದರು. ಈ ಬಳಿಕ ಅಜಿತ್ ತಮ್ಮ ಚಿಕ್ಕಪ್ಪ ಶರದ್ ಪವಾರ್​ ಗರಡಿಯಲ್ಲಿ ಪಳಗಿ ರಾಜಕೀಯಕ್ಕೆ ಕಾಲಿಟ್ಟರು. 1982 ರಲ್ಲಿ ಸಕ್ಕರೆ ಸಹಕಾರಿ ಸಂಸ್ಥೆಯ ಮಂಡಳಿಗೆ ಪಾದಾರ್ಪಣೆ ಮಾಡುವ ಮೂಲಕ ತಮ್ಮ ಸಾರ್ವಜನಿಕ ಜೀವನವನ್ನು ಪ್ರಾರಂಭಿಸಿದರು. ಅಜಿತ್​ ದಾದಾ ದೊಡ್ಡ ಹುದ್ದೆಯನ್ನು ವಹಿಸಿಕೊಳ್ಳುವ ಮೊದಲೇ ಸಕ್ಕರೆ ಕಾರ್ಖಾನೆಗಳು, ಹಾಲು ಒಕ್ಕೂಟಗಳು ಮತ್ತು ಸ್ಥಳೀಯ ಬ್ಯಾಂಕ್‌ಗಳೊಂದಿಗೆ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದರು.
1991 ರಲ್ಲಿ ಬಾರಾಮತಿಯಿಂದ ಲೋಕಸಭೆಗೆ ಆಯ್ಕೆಯಾದ ಅಜಿತ್​ ಪವಾರ್, ಅಂದಿನ ಪ್ರಧಾನಿ ನರಸಿಂಹರಾವ್ ಸರ್ಕಾರದಲ್ಲಿ ರಕ್ಷಣಾ ಸಚಿವರಾದ ಅವರ ಚಿಕ್ಕಪ್ಪ ಶರದ್ ಪವಾರ್​​ಗೆ ಆ ಕ್ಷೇತ್ರವನ್ನು ನೀಡಿ ತಾವು ರಾಜ್ಯ ರಾಜಕೀಯಕ್ಕೆ ಪ್ರವೇಶಿಸುತ್ತಾರೆ. ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಸತತ 8 ಬಾರಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾದರು. (1991 ರ ಉಪಚುನಾವಣೆ, 1995, 1999, 2004, 2009, 2014, 2019 ಮತ್ತು 2024 ರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ನೀರಾವರಿ, ಜಲಸಂಪನ್ಮೂಲ ಹಣಕಾಸು ಸೇರಿದಂತೆ ಹಲವಾರು ಖಾತೆಗಳನ್ನು ನಿಭಾಯಿಸಿದ್ದಾರೆ. ಮಹಾರಾಷ್ಟ್ರದ ಬಜೆಟ್ ತಯಾರಿ ಸೇರಿದಂತೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಅಜಿತ್​ ದಾದಾ ಮುಂಚೂಣಿಯಲ್ಲಿರುತ್ತಿದ್ದರು ಮತ್ತು ಉಪಮುಖ್ಯಮಂತ್ರಿಯಾಗಿ ಅನೇಕ ಅವಧಿ ಸೇವೆ ಸಲ್ಲಿಸುವ ಮೂಲಕ ಆ ಹುದ್ದೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ರಾಜಕಾರಣಿಗಳಲ್ಲೊಬ್ಬರಾದರು.(ಪೃಥ್ವಿರಾಜ್ ಚವಾಣ್, ದೇವೇಂದ್ರ ಫಡ್ನವೀಸ್, ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಅವರ ಸಚಿವ ಸಂಪುಟಗಳಲ್ಲಿ ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು)
2019 ರ ಚುನಾವಣೆಯ ಬಳಿಕ ಬಿಜೆಪಿಗೆ ಬೆಂಬಲ ನೀಡಿದ್ದ ಅಜಿತ್​ ಮತ್ತು ದೇವೇಂದ್ರ ಫಡ್ನವಿಸ್​ರೊಂದಿಗೆ ಡಿಸಿಎಂ ಆಗಿ ತಡರಾತ್ರಿ ಪ್ರಮಾಣವಚನ ಸ್ವೀಕಾರಿಸಿ ಸುದ್ದಿಯಾದರು, ಕೆಲವೇ ದಿನಗಳಲ್ಲಿ ತಾವು ನೀಡಿದ್ದ ಬೆಂಬಲ ವಾಪಸ್​ ಪಡೆದ ಮೂಲ ಎನ್​​ಸಿಪಿಗೆ ಸೇರ್ಪಡೆಗೊಂಡರು. 2023 ರ ಜುಲೈನಲ್ಲಿ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷವನ್ನು ವಿಭಜಿಸಿದ ಅಜಿತ್, ಐದನೇ ಬಾರಿಗೆ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
2024 ರ ವಿಧಾನಸಭಾ ಚುನಾವಣೆಯಲ್ಲಿ ಅದೇ ಎನ್​ಸಿಪಿ ತಂಡದೊಂದಿಗೆ ಸ್ಪರ್ಧಿಸಿದ ಅಜಿತ್​ ದಾದಾ ದೊಡ್ಡ ಗೆಲುವು ದಾಖಲಿಸಿ ಫಡ್ನವೀಸ್​​ ಸರ್ಕಾರದಲ್ಲಿ ಆರನೇ ಬಾರಿಗೆ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ಹಣಕಾಸು ಖಾತೆಯನ್ನು ನಿಭಾಯಿಸಿದರು.
ಪಕ್ಷ ವಿಭಜನೆಯ ಬಳಿಕವೂ ಬಾರಾಮತಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಅಜಿತ್ ಪವರ್ ಹಾಗೆಯೇ ಇತ್ತು, ತಮ್ಮ ವೇಗದ ಕಾರ್ಯಶೈಲಿ ಮತ್ತು ಸಾರ್ವಜನಿಕ ಸಂವಹನಕ್ಕೆ ಹೆಸರುವಾಸಿಯಾದ ಪವಾರ್, ಕೊನೆಯವರೆಗೂ ಸರ್ಕಾರದಲ್ಲಿ ಸಕ್ರಿಯರಾಗಿದ್ದರು. ಅಜಿತ್ ಪವಾರ್ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ನಿಧನವು ಮಹಾರಾಷ್ಟ್ರ ರಾಜಕೀಯ ರಂಗಕ್ಕೆ ಬರ ಸಿಡಿಲು ಬಡಿದಂತಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net