ಅಂತ್ಯವಾಯ್ತು ಅಜಿತ್​ ದಾದಾ 'ಪವರ್​'...ಗಣ್ಯರನ್ನು ಬಲಿಪಡೆದ ದುರಂತಗಳ ವರದಿ ಇಲ್ಲಿದೆ! | Ajit Pawar

Ajit Pawar | ಮಹಾರಾಷ್ಟ್ರ ಡಿಸಿಎಂ ಅಜಿತ್​ ಪವಾರ್
Ajit Pawar | ಮಹಾರಾಷ್ಟ್ರ ಡಿಸಿಎಂ ಅಜಿತ್​ ಪವಾರ್
Published on
ಪುಣೆ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡಿದ್ದು, ಅಜಿತ್​ ಸೇರಿದಂತೆ ಇತರ ನಾಲ್ವರು ಸಾವನ್ನಪ್ಪಿದ್ದಾರೆ. ಈ ಹಿಂದೆ ವಿಮಾನ ಅಪಘಾತಗಳಲ್ಲಿ ಸಾವನ್ನಪ್ಪಿದ ಕೆಲವು ಹಿರಿಯ ರಾಜಕಾರಣಿಗಳು ಮತ್ತು ಗಣ್ಯರ ಕುರಿತಾದ ವರದಿ ಇಲ್ಲಿದೆ.

ಸಂಜಯ್ ಗಾಂಧಿ (1980)

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುತ್ರ ಸಂಜಯ್ ಗಾಂಧಿ, ಜೂನ್ 23, 1980 ರಂದು ನಡೆದ ದುರಂತದಲ್ಲಿ ನಿಧನರಾದರು. ಸಫ್ದರ್ಜಂಗ್ ವಿಮಾನ ನಿಲ್ದಾಣದ ಬಳಿ ದೆಹಲಿ ಫ್ಲೈಯಿಂಗ್ ಕ್ಲಬ್ ವಿಮಾನದಲ್ಲಿ ವೈಮಾನಿಕ ಸಾಹಸ ಮಾಡಲು ಪ್ರಯತ್ನಿಸುತ್ತಿದ್ದಾಗ, ವಿಮಾನವು ನಿಯಂತ್ರಣ ತಪ್ಪಿ ಪತನಗೊಂಡಿತು.

ಮಾಧವರಾವ್ ಸಿಂಧಿಯಾ (2001)

ಕಾಂಗ್ರೆಸ್​ನ ಹಿರಿಯ ನಾಯಕ, ಮಾಜಿ ನಾಗರಿಕ ವಿಮಾನಯಾನ ಸಚಿವರಾಗಿದ್ದ ಮಾಧವರಾವ್ ಸಿಂಧಿಯಾ 2001 ರ ಸೆಪ್ಟೆಂಬರ್ 30 ರಂದು ಕಾನ್ಪುರದಲ್ಲಿ ರಾಜಕೀಯ ಸಭೆಗೆ ತೆರಳುವ ಮಾರ್ಗಮಧ್ಯೆ ಸಂಭವಿಸಿದ ವಿಮಾನ ಅಪಘಾತದಲ್ಲಿ ನಿಧನರಾದರು. ಉತ್ತರ ಪ್ರದೇಶದ ಮಣಿಪುರಿ ಬಳಿ ಪ್ರತಿಕೂಲ ಹವಾಮಾನದಿಂದಾಗಿ ಖಾಸಗಿ ವಿಮಾನ ಅಪಘಾತಕ್ಕೀಡಾಯಿತು.

ಜಿಎಂಸಿ ಬಾಲಯೋಗಿ (2002)

ಲೋಕಸಭಾ ಸ್ಪೀಕರ್ ಆಗಿದ್ದ ಮತ್ತು ತೆಲುಗು ದೇಶಂ ಪಕ್ಷದ ನಾಯಕ ಜಿಎಂಸಿ ಬಾಲಯೋಗಿ 2002 ರ ಮಾರ್ಚ್ 3 ರಂದು ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಿಂದ ತೆರಳುತ್ತಿದ್ದಾಗ ಖಾಸಗಿ ಹೆಲಿಕಾಪ್ಟರ್ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಕೈಕಲೂರು ಬಳಿಯ ಕೊಳಕ್ಕೆ ಅಪ್ಪಳಿಸಿತು.

ಸಿಪ್ರಿಯನ್ ಸಂಗ್ಮಾ (2004)

2004 ರ ಸೆಪ್ಟೆಂಬರ್ 22 ರಂದು ಗುವಾಹಟಿಯಿಂದ ಶಿಲ್ಲಾಂಗ್‌ಗೆ ಹೋಗುತ್ತಿದ್ದಾಗ ಬಾರಾಪಾನಿ ಸರೋವರದ ಬಳಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಮೇಘಾಲಯದ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಸಿಪ್ರಿಯನ್ ಸಂಗ್ಮಾ ಮತ್ತು ಇತರ ಒಂಬತ್ತು ಮಂದಿ ಸಾವನ್ನಪ್ಪಿದ್ದರು.

ಕೆ.ಎಸ್. ಸೌಮ್ಯ (2004)

ದಕ್ಷಿಣ ಭಾರತದ ಖ್ಯಾತ ನಟಿ ಕೆ.ಎಸ್. ಸೌಮ್ಯ, ಸೌಂದರ್ಯ ಎಂದೇ ಜನಪ್ರಿಯರಾಗಿದ್ದರು. 2004 ರ ಏಪ್ರಿಲ್ 17 ರಂದು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರು. ಆಪ್ತಮಿತ್ರ ಚಿತ್ರದ ಮೂಲಕ ಮನೆಮಾತಾಗಿದ್ದ ನಟಿ ಬೆಂಗಳೂರಿನಿಂದ ಕರೀಂನಗರಕ್ಕೆ ತನ್ನ ಸಹೋದರನೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.

O.P. ಜಿಂದಾಲ್ ಮತ್ತು ಸುರೇಂದರ್ ಸಿಂಗ್ (2005)

2005 ರಲ್ಲಿ ಹರಿಯಾಣ ಸಚಿವರಾಗಿದ್ದ ಓಂ ಪ್ರಕಾಶ್ ಜಿಂದಾಲ್, ಕೃಷಿ ಸಚಿವ ಸುರೇಂದರ್ ಸಿಂಗ್ ಅವರೊಂದಿಗೆ ಹೆಲಿಕಾಪ್ಟರ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡರು. ದೆಹಲಿಯಿಂದ ಚಂಡೀಗಢಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಅಪಘಾತಕ್ಕೀಡಾಯಿತು.

ವೈ.ಎಸ್. ರೆಡ್ಡಿ (2009)

ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈ.ಎಸ್. ರಾಜಶೇಖರ ರೆಡ್ಡಿ 2009 ರ ಸೆಪ್ಟೆಂಬರ್ 2 ರಂದು ಅವರ ಬೆಲ್ 430 ಹೆಲಿಕಾಪ್ಟರ್ ಕೆಟ್ಟ ಹವಾಮಾನದಿಂದಾಗಿ ದಟ್ಟವಾದ ನಲ್ಲಮಲ ಕಾಡಿನಲ್ಲಿ ಅಪಘಾತಕ್ಕೀಡಾಗಿ ನಿಧನರಾದರು.

ದೋರ್ಜಿ ಖಂಡು (2011)

2011 ಏಪ್ರಿಲ್ 30, ರಂದು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ದೋರ್ಜಿ ಖಂಡು ಮತ್ತು ಇತರ ನಾಲ್ವರು ಜನರನ್ನು ತವಾಂಗ್‌ನಿಂದ ಇಟಾನಗರಕ್ಕೆ ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ರಾಜ್ಯದ ಪಶ್ಚಿಮ ಕಾಮೆಂಗ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿತ್ತು, ಇದರಲ್ಲಿದ್ದ ಖಂಡು ಮೃತಪಟ್ಟಿದ್ದರು.

ವಿಜಯ್ ರೂಪಾನಿ (2025)

ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ 2025 ರ ಜೂನ್ 12 ರಂದು ಅಹಮದಾಬಾದ್‌ನಲ್ಲಿ ನಡೆದ ದುರಂತ ವಿಮಾನ ಅಪಘಾತದಲ್ಲಿ ನಿಧನರಾದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಪತನಗೊಂಡ ಲಂಡನ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ರೂಪಾನಿ ಕೂಡ ಪ್ರಯಾಣಿಸುತ್ತಿದ್ದರು. ವಿಮಾನದಲ್ಲಿದ್ದ 242 ಜನರ ಪೈಕಿ 241 ಜನರು ಸಾವನ್ನಪ್ಪಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net