3 ದಿನದಲ್ಲಿ 587 ಕೋಟಿ ಮದ್ಯ ಆದಾಯ- liquor revenue

ಅಬಕಾರಿ ಆದಾಯ
ಅಬಕಾರಿ ಆದಾಯ
Published on
ಬೆಂಗಳೂರು: ಹೊಸ ವರ್ಷಕ್ಕೆ ರಾಜ್ಯದಲ್ಲಿ ಮದ್ಯ ಕಿಕ್ ಜೋರಾಗಿತ್ತು. ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಒಟ್ಟು 587 ಕೋಟಿ ರೂ.ಆದಾಯ ಬಂದಿದೆ.
2025ರ ಡಿ.29ರಂದು 1.99 ಲಕ್ಷ ಬಾಕ್ಸ್ ಇಂಡಿಯನ್ ಮೇಡ್ ಲಿಕ್ಕರ್(ಐಎಂಎಲ್), 1.45 ಲಕ್ಷ ಬಾಕ್ಸ್ ಬಿಯರ್, ಡಿ.30ರಂದು 4.32 ಲಕ್ಷ ಬಾಕ್ಸ್ ಐಎಂಎಲ್, 2.94 ಲಕ್ಷ ಬಾಕ್ಸ್ ಬಿಯರ್ ಹಾಗೂ ಡಿ.31ರಂದು 3.53 ಲಕ್ಷ ಬಾಕ್ಸ್ ಐಎಂಎಲ್, 2.25 ಲಕ್ಷ ಬಾಕ್ಸ್ ಬಿಯರ್ ಮಾರಾಟ ವಾಗಿದೆ. 2024ರ ಡಿ.29ರಂದು ಯಾವುದೇ ಮದ್ಯ ವಹಿವಾಟು ನಡೆದಿರಲಿಲ್ಲ. ಡಿ.30ರಂದು 2.78 ಲಕ್ಷ ಬಾಕ್ಸ್ ಐಎಂಎಲ್, 1.91 ಲಕ್ಷ ಬಾಕ್ಸ್ ಬಿಯರ್, ಡಿ.31ರಂದು 5.47 ಲಕ್ಷ ಬಾಕ್ಸ್ ಐಎಂಎಲ್, 3.12 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. 2023ರ ಡಿ.29ರಂದು 3.04 ಲಕ್ಷ ಬಾಕ್ಸ್ ಐಎಂಎಲ್, 1.91 ಲಕ್ಷ ಬಾಕ್ಸ್ ಬಿಯರ್, ಡಿ.30ರಂದು 3.32 ಲಕ್ಷ ಬಾಕ್ಸ್ ಐಎಂಎಲ್, 2.30 ಲಕ್ಷ ಬಾಕ್ಸ್ ಬಿಯರ್, ಡಿ.31ರಂದು 3.08 ಲಕ್ಷ ಬಾಕ್ಸ್ ಐಎಂಎಲ್ ಮತ್ತು 1.95 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು.
ಪಬ್​​, ಬಾರ್ ಆಂಡ್ ರೆಸ್ಟೋರೆಂಟ್ ಮಾಲೀಕರು ಹೊಸ ವರ್ಷ ಸ್ವಾಗತಕ್ಕೆ ವಿಶೇಷ ಸಿದ್ಧತೆ ಮಾಡಿಕೊಂಡಿದ್ದರು. ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ತರಹೇವಾರಿಯಾಗಿ ಬಾರ್‌ಗಳನ್ನು ವಿನ್ಯಾಸ ಮಾಡಲಾಗಿತ್ತು. ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಂಡಿದ್ದ ಮದ್ಯ, ಬಿಯರ್ ಸೇಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾಲೀಕರು ಖುಷಿಯಾಗಿದ್ದಾರೆ.
3 ದಿನದಲ್ಲಿ 9.84 ಲಕ್ಷ ಬಾಕ್ಸ್ ಸೇಲ್:
2025ರ ಡಿ.29ರಿಂದ ಡಿ.31ರವರೆಗೆ ಒಟ್ಟು 9.84 ಲಕ್ಷ ಬಾಕ್ಸ್ ಐಎಂಎಲ್ ಮತ್ತು 6.64 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ. 2024ರ ಡಿ.29ರಿಂದ ಡಿ.31ರವರೆಗೆ ಒಟ್ಟು 8.25 ಲಕ್ಷ ಬಾಕ್ಸ್ ಐಎಂಎಲ್, 5.03 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. 2023ರ ಡಿ.29ರಿಂದ 9.44 ಲಕ್ಷ ಬಾಕ್ಸ್ ಐಎಂಎಲ್ ಮತ್ತು 6.16 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. ಆದರೆ, 2025ರ ಡಿ.23ರಿಂದ ಡಿ.31ರವರೆಗೆ 22.59 ಲಕ್ಷ ಬಾಕ್ಸ್ ಐಎಂಎಲ್ ಸೇಲಾಗಿದೆ. 2024ರ ಡಿ.23ರಿಂದ ಡಿ.31ರವೆರೆಗೆ 23.33 ಲಕ್ಷ ಬಾಕ್ಸ್ ಐಎಂಎಲ್ ಮಾರಾಟವಾಗಿತ್ತು. ಆದರೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಐಎಂಎಲ್ ಮಾರಾಟದಲ್ಲಿ ಶೇ.3.17 ಕುಸಿತವಾಗಿದೆ. ಆದರೆ, ಬಿಯರ್ ಮಾರಾಟದಲ್ಲಿ ಶೇ.1.80 ಮಾರಾಟ ಹೆಚ್ಚಳವಾಗಿದೆ.
ಹಳ್ಳಿ ಹಳ್ಳಿಗಳಲ್ಲೂ ಮದ್ಯ ಘಮಲು
ಹೊಸ ವರ್ಷದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಹೋಟೆಲ್ ಹಾಗೂ ಗಿರಾಣಿ ಅಂಗಡಿಗಳಲ್ಲಿ ಕಾನೂನುಬಾಹಿರವಾಗಿ ಲಕ್ಷಾಂತರ ರೂ.ಮೌಲ್ಯದ ಮದ್ಯ ಮಾರಾಟ ಮಾಡಿರುವುದು ಕಂಡುಬಂದಿದೆ. ಪ್ರತಿ ಬಾಟಲ್‌ಗೆ ನಿಗದಿತ ದರಗಿಂತ ಸರಾಸರಿ 20-30 ರೂ. ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಯಿತು. ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಇಂದಿರನಗರ, ರಿಚ್‌ಮಂಡ್ ಸರ್ಕಲ್ ಮತ್ತು ಕೋರಮಂಗಲ ಸೇರಿ ಇತರೆ ಪ್ರದೇಶಗಳಲ್ಲಿ ಇರುವ ಪಬ್‌ಗಳು ತಡರಾತ್ರಿ 3 ಗಂಟೆವರೆಗೂ ಕಾರ್ಯನಿರ್ವಹಿಸಿದ್ದವು. ಯುವ ಜನಾಂಗವು ಕಂಠಪೂರ್ತಿ ಮದ್ಯ ಸೇವಿಸಿ ಕುಣಿದು ಕುಪ್ಪಳಿ ಹೊಸ ವರ್ಷವನ್ನು ಸ್ವಾಗತ ಮಾಡಿಕೊಂಡಿದ್ದರು.
ಆದಾಯ ವಿವರ:
* 2025ರ ಡಿ.29ರಿಂದ ಡಿ.31ವರೆಗೆ 587 ಕೋಟಿ
* 2024ರ ಡಿ.29ರಿಂದ ಡಿ.31ವರೆಗೆ 420 ಕೋಟಿ
* 2023ರ ಡಿ.29ರಿಂದ ಡಿ.31ವರೆಗೆ 490 ಕೋಟಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net