ಅಸ್ಸಾಂನಲ್ಲಿ ಯುಸಿಸಿ ಜಾರಿಗೊಳಿಸುತ್ತೇವೆ; ನುಸುಳುಕೋರರು ನಾಲ್ಕು ಮದುವೆಯಾಗಲು ಸಾಧ್ಯವಿಲ್ಲ: ಅಮಿತ್ ಶಾ ಗುಡುಗು | Amit Shah

ಅಮಿತ್ ಶಾ
ಅಮಿತ್ ಶಾ
Published on
ಗುವಾಹಟಿ: ಅಸ್ಸಾಂ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ರಾಜ್ಯದಲ್ಲಿ ಮರಳಿ ಮೂರನೇ ಅವಧಿಗೆ ಬಿಜೆಪಿ ಅಧಿಕಾರಕ್ಕೆ ಬಂದ್ರೆ, ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯನ್ನು ಜಾರಿಗೊಳಿಸಲಾಗುವುದು. ಈ ಮೂಲಕ ಅಕ್ರಮ ನುಸುಳುಕೋರರು ನಾಲ್ಕು ಮದುವೆಯಾಗಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಗುಡುಗಿದ್ದಾರೆ.
ಶುಕ್ರವಾರ ಅಸ್ಸಾಂನ ಗೋಲ್ಪಾರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿರುವ ಅವರು, ತಾವು ಮತ್ತೆ ಅಧಿಕಾರಕ್ಕೆ ಬಂದರೆ ಅಕ್ರಮ ನುಸುಳುಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಬುಡಕಟ್ಟು ಅಭಿವೃದ್ಧಿಗಾಗಿ ಸಮಗ್ರ ನಕ್ಷೆಯನ್ನು ಸಿದ್ಧಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಬುಡಕ್ಕಟು ಅಭಿವೃದ್ಧಿಯ ನಕ್ಷೆಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಬಿಜೆಪಿಗೆ ಮತ ಹಾಕುವಂತೆ ಒತ್ತಾಯಿಸಿರುವ ಅವರು, ಮೋದಿ ಅವರ ನಾಯಕತ್ವದಲ್ಲಿ ಮೊದಲ ಬಾರಿಗೆ ಬುಡಕಟ್ಟು ಮಹಿಳೆಯೊಬ್ಬರು ದೇಶದ ರಾಷ್ಟ್ರಪತಿಯಾದರು. 70 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಎಂದೂ ಬುಡಕಟ್ಟು ಮಹಿಳೆಯನ್ನು ರಾಷ್ಟ್ರಪತಿಯಾಗಿ ಮಾಡಲಿಲ್ಲ ಎಂದಿದ್ದಾರೆ.
ಬುಡಕಟ್ಟು ಪ್ರದೇಶಗಳ ಮೇಲೆ ಯುಸಿಸಿಯನ್ನು ಬಲವಂತವಾಗಿ ಹೇರಲಾಗುತ್ತಿದೆ ಎಂಬ ಕಾಂಗ್ರೆಸ್ ಪ್ರಚಾರದಲ್ಲಿ ಯಾವುದೇ ಸತ್ಯವಿಲ್ಲ. ಬುಡಕಟ್ಟು ಪ್ರದೇಶಗಳನ್ನು ಯುಸಿಸಿಯಿಂದ ಹೊರಗಿಡಲಾಗುವುದು. ನೆರೆಯ ಮೇಘಾಲಯದಲ್ಲಿ, ಇತ್ತೀಚೆಗೆ ಒಳನುಸುಳುವವರು ಗಾರೋ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿಯಲ್ಲಿ ಬುಡಕಟ್ಟು ಮಹಿಳೆಯರನ್ನು ಮದುವೆಯಾಗುವ ಮೂಲಕ ರಾಜಕೀಯ ಪ್ರಭಾವ ಪಡೆಯಲು ಪ್ರಯತ್ನಿಸಿದರು. ಇದು ಉದ್ವಿಗ್ನತೆಗೆ ಕಾರಣವಾಯಿತು ಎಂದು ತಿಳಿಸಿದ್ದಾರೆ.
ಅಸ್ಸಾಂ ವಿಧಾನಸಭಾ ಚುನಾವಣೆ ಏಪ್ರಿಲ್ 9ರಂದು ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ಎರಡು ಅವಧಿಗೆ ಸಿಎಂ ಆಗಿರುವ ಸಿಎಂ ಹಿಮಂತ ಬಿಸ್ವಾ ಶರ್ಮಾ, ಈ ಬಾರಿಯೂ ಅಧಿಕಾರಕ್ಕೇರಬೇಕು ಎಂಬ ಹಠದಲ್ಲಿದ್ದಾರೆ. ಕಳೆದ 10 ವರ್ಷಗಳಿಂದ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಮರು ವಶಪಡಿಸಿಕೊಳ್ಳಬೇಕೆಂಬ ಬಯಕೆಯಲ್ಲಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net