ಮಹಾರಾಷ್ಟ್ರದಲ್ಲಿ ಇರಬೇಕಾ? ಹಾಗಾದ್ರೆ ಮರಾಠಿ ಕಲಿಲೇಬೇಕು! ಭಾಷೆ ಬರಲ್ಲ ಅಂದ್ರ ನಾವೇ ಕಲಿಸ್ತೀವಿ; ಸಿಎಂ ದೇವೇಂದ್ರ ಫಡ್ನವೀಸ್ ಖಡಕ್​ ವಾರ್ನಿಂಗ್​! DevendraFadnavis

ಭಾಷೆ ಬರಲ್ಲ ಅಂದ್ರ ನಾವೇ ಕಲಿಸ್ತೀವಿ; ಸಿಎಂ ದೇವೇಂದ್ರ ಫಡ್ನವೀಸ್ ಖಡಕ್​ ವಾರ್ನಿಂಗ್​!
ಭಾಷೆ ಬರಲ್ಲ ಅಂದ್ರ ನಾವೇ ಕಲಿಸ್ತೀವಿ; ಸಿಎಂ ದೇವೇಂದ್ರ ಫಡ್ನವೀಸ್ ಖಡಕ್​ ವಾರ್ನಿಂಗ್​!
Published on

ಪ್ರಮುಖ ಮುಖ್ಯಾಂಶಗಳು

  • ಮಹಾರಾಷ್ಟ್ರದಲ್ಲಿ ಇರಬೇಕಾ? ಹಾಗಾದ್ರೆ ಮರಾಠಿ ಕಲಿಲೇಬೇಕು!
  • ಭಾಷೆ ಬರಲ್ಲ ಅಂದ್ರ ನಾವೇ ಕಲಿಸ್ತೀವಿ; ಸಿಎಂ ದೇವೇಂದ್ರ ಫಡ್ನವೀಸ್ ಖಡಕ್​ ವಾರ್ನಿಂಗ್​!
  • ಆಟೋ-ಟ್ಯಾಕ್ಸಿ ಚಾಲಕರಿಗೆ ಮರಾಠಿ ಪರೀಕ್ಷೆ!
ಮುಂಬೈ: ಮಹಾರಾಷ್ಟ್ರದಲ್ಲಿ ಈಗ ಮತ್ತೆ ಭಾಷಾ ರಾಜಕೀಯದ ಬಿಸಿ ಏರಿದೆ. ರಾಜ್ಯದಲ್ಲಿ ಇರಬೇಕೆಂದರೆ ಮರಾಠಿ ಕಲಿಲೇಬೇಕು! ಎಂಬ ಚರ್ಚೆ ಈಗ ಗಲ್ಲಿ ಗಲ್ಲಿಯಲ್ಲೂ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (DevendraFadnavis) ನೀಡಿರುವ ಹೇಳಿಕೆ ಈಗ ಹೊಸ ಸಂಚಲನ ಸೃಷ್ಟಿಸಿದೆ.

ಕಲಿಯದಿದ್ದರೆ ನಾವೇ ಕಲಿಸ್ತೀವಿ!

ಅಂತರರಾಷ್ಟ್ರೀಯ ಕಾರ್ಮಿಕ ದಿನದ ಸಂದರ್ಭದಲ್ಲಿ ಮಾತನಾಡಿದ ಫಡ್ನವೀಸ್, ಮರಾಠಿ ಭಾಷೆಯ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರಕ್ಕೆ ಬರುವವರನ್ನು ಬೇಡ ಎನ್ನುವಷ್ಟು ಸಂಕುಚಿತ ಮನೋಭಾವ ನಮ್ಮದಲ್ಲ. ಆದರೆ, ಇಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಮರಾಠಿ ಭಾಷೆಯ ಬಗ್ಗೆ ಹೆಮ್ಮೆ ಇರಬೇಕು. ಮರಾಠಿ ಕಲಿಯಲು ಪ್ರಯತ್ನಿಸಬೇಕು. ಒಂದು ವೇಳೆ ಅವರಿಗೆ ಕಲಿಯಲು ಆಗದಿದ್ದರೆ, ನಾವೇ ಅವರಿಗೆ ಕಲಿಸುತ್ತೇವೆ, ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಇದೇ ವೇಳೆ ಭಾಷೆಯ ಹೆಸರಿನಲ್ಲಿ ಹಿಂಸಾಚಾರ ಮಾಡುವುದು ಅಕ್ಷಮ್ಯ ಅಪರಾಧ ಎಂದು ಎಚ್ಚರಿಸಿದ್ದಾರೆ.
ಆಟೋ-ಟ್ಯಾಕ್ಸಿ ಚಾಲಕರಿಗೆ ಮರಾಠಿ ಪರೀಕ್ಷೆ!
ಮೇ 1 ರಿಂದ ಮಹಾರಾಷ್ಟ್ರದ ಎಲ್ಲಾ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಮರಾಠಿ ಓದಲು ಮತ್ತು ಬರೆಯಲು ಬರುತ್ತದೆಯೇ ಎಂದು ತಿಳಿಯಲು ಪರೀಕ್ಷನೆ ನಡಿಸುವಂತೆ ರಾಜ್ಯ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಆದೇಶಿಸಿದ್ದಾರೆ. ರಾಜ್ಯದ 59 ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (RTO) ಈ ಪರೀಕ್ಷೆ ನಡೆಯಲಿದ್ದು, ವಿಶೇಷವಾಗಿ ಪರರಾಜ್ಯಗಳಿಂದ ಬಂದು ಇಲ್ಲಿ ಜೀವನ ಕಟ್ಟಿಕೊಂಡಿರುವ ಚಾಲಕರಿಗೆ ಮರಾಠಿ ಕಲಿಸುವುದು ಅವರ ಉದ್ದೇಶವಾಗಿದೆ.

ಚಾಲಕರ ಸಂಘಗಳ ಆಕ್ರೋಶ: ಪ್ರತಿಭಟನೆ ಎಚ್ಚರಿಕೆ

ಸರ್ಕಾರದ ಈ ನಿರ್ಧಾರವನ್ನು ಚಾಲಕರ ಸಂಘಗಳು ತೀವ್ರವಾಗಿ ವಿರೋಧಿಸಿವೆ. ಇದು ಕೇವಲ ವಲಸೆ ಕಾರ್ಮಿಕರಿಗೆ ಕಿರುಕುಳ ನೀಡುವ ತಂತ್ರ. ಭಾಷೆಯ ಹೆಸರಿನಲ್ಲಿ ದಂಡ ವಿಧಿಸಿದರೆ ನಾವು ಸುಮ್ಮನಿರುವುದಿಲ್ಲ, ರಾಜ್ಯಾದ್ಯಂತ ಸ್ಟ್ರೈಕ್ ಮಾಡ್ತೀವಿ ಎಂದು ಚಾಲಕರು ಗುಡುಗಿದ್ದಾರೆ. ಆದರೆ ಸರ್ಕಾರ ಮಾತ್ರ, ಇದು ಹೊಸ ನಿಯಮವಲ್ಲ, ವರ್ಷಗಳಿಂದ ಇದ್ದ ನಿಯಮವನ್ನು ನಾವು ಈಗ ಕಟ್ಟುನಿಟ್ಟಾಗಿ ಜಾರಿ ಮಾಡ್ತಿದ್ದೀವಿ ಅಷ್ಟೇ ಎಂದು ಸಮರ್ಥಿಸಿಕೊಂಡಿದೆ.

ಕಾನೂನು ಸಮರ: ಹೈಕೋರ್ಟ್ ಏನು ಹೇಳುತ್ತೆ?

ಸರ್ಕಾರದ ಈ ನಿಯಮ ಕಾನೂನುಬದ್ಧವೇ? ಎಂಬ ಪ್ರಶ್ನೆ ಎದ್ದಿದೆ. 1988ರ ಕೇಂದ್ರ ಮೋಟಾರು ವಾಹನ ಕಾಯ್ದೆಯ ಪ್ರಕಾರ, ಡ್ರೈವಿಂಗ್ ಲೈಸೆನ್ಸ್ ಪಡೆಯಲು 8ನೇ ತರಗತಿ ಪಾಸಾಗಿದ್ದರೆ ಸಾಕು, ನಿರ್ದಿಷ್ಟ ಭಾಷೆ ಕಡ್ಡಾಯವಲ್ಲ.
ಅಷ್ಟೇ ಅಲ್ಲ, 2017ರಲ್ಲಿ ಬಾಂಬೆ ಹೈಕೋರ್ಟ್ ಒಂದು ಮಹತ್ವದ ತೀರ್ಪು ನೀಡಿತ್ತು. ಆಟೋರಿಕ್ಷಾಗಳು ಮೋಟಾರ್ ಕ್ಯಾಬ್ ವ್ಯಾಪ್ತಿಗೆ ಬರುವುದರಿಂದ, ಅವುಗಳ ಮೇಲೆ ಮರಾಠಿ ಭಾಷೆಯ ನಿಬಂಧನೆಯನ್ನು ಹೇರಲು ಬರುವುದಿಲ್ಲ ಎಂದು ಕೋರ್ಟ್ ಹೇಳಿತ್ತು. ಹೀಗಿರುವಾಗ ಸರ್ಕಾರ ಈಗ ಈ ನಿಯಮ ಜಾರಿಗೊಳಿಸಲು ಹೊರಟಿರುವುದು ಕಾನೂನು ಸಂಘರ್ಷಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ.

ಬೆಳವಣಿಗೆಯ ಎಂಜಿನ್ ಮಹಾರಾಷ್ಟ್ರ

ಮಹಾರಾಷ್ಟ್ರವು ವಿಶ್ವದ 30ನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು ದೇಶದ ಪ್ರಮುಖ ಆರ್ಥಿಕ ಶಕ್ತಿ ಕೇಂದ್ರವಾಗಿದೆ ಎಂದು ಫಡ್ನವೀಸ್ ಬಣ್ಣಿಸಿದ್ದಾರೆ. ಭಾಷೆಯ ಅಭಿಮಾನ ಇರಲಿ, ಆದರೆ ಅದು ವಿಕಾಸಕ್ಕೆ ಅಡ್ಡಿಯಾಗಬಾರದು ಎಂಬುದು ಅವರ ಮಾತಿನ ತಾತ್ಪರ್ಯವಾಗಿತ್ತು.
ಒಟ್ಟಿನಲ್ಲಿ, ಮುಂಬೈನ ಬೀದಿಗಳಲ್ಲಿ ಸಂಚರಿಸುವ ಆಟೋ ಚಾಲಕರು ಇನ್ನು ಮುಂದೆ ಮರಾಠಿ ಮಾಣೂಸ್ ಆಗಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಸರ್ಕಾರದ ಈ ಭಾಷಾ ಪ್ರೇಮ ಚಾಲಕರ ಬದುಕಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ, (ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net