ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ 'ಜೋಯ್‌ಮೋತಿ' ಆನೆಗೆ ಮರುಜೀವ ಕೊಟ್ಟ 'ವಂತಾರ': ಏರ್‌ಲಿಫ್ಟ್ ಮೂಲಕ ಆಸ್ಪತ್ರೆಗೆ ರವಾನೆ! Vantara Airlifts Elephant Joymoti

ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ 'ಜೋಯ್‌ಮೋತಿ' ಆನೆಗೆ ಮರುಜೀವ ಕೊಟ್ಟ ವಂತಾರ
ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ 'ಜೋಯ್‌ಮೋತಿ' ಆನೆಗೆ ಮರುಜೀವ ಕೊಟ್ಟ ವಂತಾರ
Published on

ಪ್ರಮುಖ ಮುಖ್ಯಾಂಶಗಳು

  • ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ 'ಜೋಯ್‌ಮೋತಿ' ಆನೆಗೆ ಮರುಜೀವ ಕೊಟ್ಟ ವಂತಾರ
  • ಗಂಭೀರ ಗಾಯಗೊಂಡಿದ್ದ ಪ್ರವಾಹ ಸಂತ್ರಸ್ತ ಆನೆ 'ಜೋಯ್‌ಮೋತಿ'
  • ಏರ್‌ಲಿಫ್ಟ್ ಮೂಲಕ ಗುಜರಾತ್‌ನ ವಂತಾರಾ ಆಸ್ಪತ್ರೆಗೆ ರವಾನೆ
ಅಸ್ಸಾಂ: ಜುಲೈ ತಿಂಗಳಲ್ಲಿ ಅಸ್ಸಾಂ ಮತ್ತು ನಾಗಾಲ್ಯಾಂಡ್​​ನಲ್ಲಿ ಸಂಭವಿಸಿದ್ದ ಭೀಕರ ಪ್ರವಾಹದಲ್ಲಿ ಕೊಚ್ಚಿಹೋಗಿ ಗಂಭೀರವಾಗಿ ಗಾಯಗೊಂಡಿದ್ದ 53 ವರ್ಷದ ಜೋಯ್‌ಮೋತಿ ಎಂಬ ಹೆಣ್ಣು ಆನೆಯನ್ನು, ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆಗಾಗಿ ಗುಜರಾತ್‌ನ ಜಾಮ್‌ನಗರದಲ್ಲಿರುವ ವಂತಾರ (Vantara Airlifts Elephant Joymoti) ಆನೆ ಆಸ್ಪತ್ರೆಗೆ ವಿಮಾನದ ಮೂಲಕ ಸುರಕ್ಷಿತವಾಗಿ ಸಾಗಿಸಲಾಗಿದೆ.

ಪ್ರವಾಹದಲ್ಲಿ ಸಿಲುಕಿ ನಲುಗಿದ ಆನೆ

ಜುಲೈ ಎರಡನೇ ವಾರದಲ್ಲಿ ನುಗ್ಗಿದ ಪ್ರವಾಹದ ಅಬ್ಬರಕ್ಕೆ ಸಿಲುಕಿ ಈ ಹಿರಿಯ ಆನೆ ನೀರಿನಲ್ಲಿ ಕೊಚ್ಚಿಹೋಗಿತ್ತು. ಸ್ಥಳೀಯರು ಹಾಗೂ ಸರ್ಕಾರಿ ಸಂಸ್ಥೆಗಳ ಸಹಾಯದಿಂದ ಆನೆಯನ್ನು ಹೇಗೋ ರಕ್ಷಿಸಲಾಯಿತಾದರೂ, ಅಷ್ಟರಲ್ಲಿ ಆನೆ ಮೈಮೇಲೆ ಅನೇಕ ಗಂಭೀರ ಗಾಯಗಳಾಗಿದ್ದವು. ಹಣೇ, ಬಲ ಕಿವಿ, ಬಾಲದ ಮೇಲ್ಭಾಗ, ಹೊಟ್ಟೆ ಹಾಗೂ ಎಡ ತೊಡೆಯ ಮೇಲೆ ತೀವ್ರ ಸ್ವರೂಪದ ಗಾಯಗಳಾಗಿದ್ದವು.

ಅಲ್ಲದೆ, ಆನೆಯ ಜನನಾಂಗದ ಸುತ್ತಲೂ ಆಳವಾದ ಗಾಯವಾಗಿ ಹುಳುಗಳು ಬಿದ್ದಿದ್ದವು. ಪ್ರವಾಹದಲ್ಲಿ ಬಲಗಣ್ಣಿಗೆ ತೀವ್ರ ಪೆಟ್ಟುಬಿದ್ದು ಆ ಕಣ್ಣು ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದು, ನಿರಂತರವಾಗಿ ನೀರು ಸೋರುತ್ತಿತ್ತು. ಇದರ ಜೊತೆಗೆ, ಹಿಂದೊಮ್ಮೆ ಕಾಡಿನಲ್ಲಿ ಮರಗಳನ್ನು ಎಳೆಯುವಾಗ ಕಾಲಿನ ಮುರಿತದಿಂದಾಗಿ ಆನೆ ಈಗಾಗಲೇ ಎಡ ಹಿಂಗಾಲಿನ ಕುಂಟತನದ ಸಮಸ್ಯೆಯನ್ನೂ ಎದುರಿಸುತ್ತಿತ್ತು. ಇದರಿಂದಾಗಿ ಅದಕ್ಕೆ ಆಹಾರ ಮತ್ತು ನೀರನ್ನು ಹುಡುಕಿಕೊಂಡು ಹೋಗುವುದೂ ಕಷ್ಟವಾಗಿತ್ತು.


ರಸ್ತೆ ಮಾರ್ಗದ ಪ್ರಯಾಣ ತಪ್ಪಿಸಲು 'ಏರ್‌ಲಿಫ್ಟ್'


ಆನೆಯ ಗಾಯಗಳ ತೀವ್ರತೆ ಮತ್ತು ಅದರ ವಯಸ್ಸನ್ನು ಗಮನಿಸಿದ ಸ್ಥಳೀಯ ವೈದ್ಯರು, ಪ್ರಾಥಮಿಕ ಚಿಕಿತ್ಸೆಯಷ್ಟೇ ಸಾಲದು ಎಂದು ಮನಗಂಡಿದ್ದಾರೆ. ಆದರೆ, ದಿನಗಳವರೆಗೆ ಲಾರಿ ಅಥವಾ ಟ್ರಕ್‌ನಲ್ಲಿ ಕರೆದೊಯ್ದರೆ ಆನೆಗೆ ವಿಪರೀತ ದೈಹಿಕ ಒತ್ತಡ ಉಂಟಾಗುತ್ತದೆ ಹಾಗೂ ಗಾಯಗಳು ಮತ್ತಷ್ಟು ಉಲ್ಬಣಗೊಳ್ಳುತ್ತವೆ. ಈ ಕಾರಣದಿಂದಲೇ ಭಾರತದಲ್ಲೇ ಪ್ರಥಮ ಬಾರಿಗೆ ಆನೆಯೊಂದನ್ನು ವಿಮಾನದ ಮೂಲಕ ತುರ್ತು ಚಿಕಿತ್ಸೆಗೆ ಸಾಗಿಸುವ ಬೃಹತ್ ಸಾಹಸಕ್ಕೆ ಕೈಹಾಕಲಾಗಿದೆ.
ಗುಜರಾತ್‌ನ ವಂತಾರ ತಲುಪಿದ ಬಳಿಕ ಜೋಯ್‌ಮೋತಿಗೆ ಅಲ್ಲಿನ ನುರಿತ ಪಶುವೈದ್ಯರಿಂದ ಅತ್ಯಾಧುನಿಕ ತಪಾಸಣೆ ಮತ್ತು ವಿಶೇಷ ಆಸ್ಪತ್ರೆ ಚಿಕಿತ್ಸೆ ಸಿಗಲಿದೆ. ಕಣ್ಣಿನ ದೋಷ, ಹುಳುಬಿದ್ದ ಗಾಯಗಳಿಗೆ ಮುಕ್ತಿ ನೀಡಿ, ಆನೆಗೆ ನೋವಿನಿಂದ ಮುಕ್ತವಾದ ಆರೋಗ್ಯಕರ ಬದುಕು ಕಲ್ಪಿಸುವುದೇ ತಜ್ಞರ ಪ್ರಮುಖ ಗುರಿಯಾಗಿದೆ.

ಇದು ಶಾಶ್ವತ ಸ್ಥಳಾಂತರವಲ್ಲ!

ಇದು ಜೋಯ್‌ಮೋತಿಯನ್ನು ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಿಸುತ್ತಿಲ್ಲ. ಪ್ರಸ್ತುತ ಆನೆಗೆ ತುರ್ತಾಗಿ ಬೇಕಿರುವ ಜೀವ ರಕ್ಷಕ ಹಾಗೂ ವಿಶೇಷ ವೈದ್ಯಕೀಯ ಚಿಕಿತ್ಸೆ ಕೊಡಿಸಲು ಮಾತ್ರ ಈ ವ್ಯವಸ್ಥೆ ಮಾಡಲಾಗಿದೆ.
ಅಲ್ಲದೆ, ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಇಂತಹ ಪ್ರಕೃತಿ ವಿಕೋಪಗಳು ಮತ್ತು ವನ್ಯಜೀವಿ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸ್ಥಳೀಯವಾಗಿಯೇ ಆನೆಗಳಿಗಾಗಿ ವಿಶೇಷ ಪಶುವೈದ್ಯಕೀಯ ಕೇಂದ್ರಗಳನ್ನು ಸ್ಥಾಪಿಸಲು ವಂತಾರ ಪ್ರಸ್ತಾವನೆ ಮುಂದಿಟ್ಟಿದೆ. ಇದರಿಂದ ಮುಂದಿನ ದಿನಗಳಲ್ಲಿ ಇಂತಹ ಸಂಕಷ್ಟಕ್ಕೆ ಸಿಲುಕುವ ಮೂಕಪ್ರಾಣಿಗಳಿಗೆ ಸ್ಥಳದಲ್ಲೇ ಉತ್ತಮ ಚಿಕಿತ್ಸೆ ಸಿಗುವಂತೆ ಮಾಡುವುದು ವಂತಾರಾದ ಗುರಿಯಾಗಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net