ಟಿಆರ್​ಎಸ್ ಹೆಸರು ವಿವಾದ; ಕೆಸಿಆರ್ ಪುತ್ರಿ ಕೆ.ಕವಿತಾಗೆ ಪಕ್ಷದ ಹೆಸರು ಬದಲಾಯಿಸಲು ಸೂಚಿಸಿದ ಭಾರತೀಯ ಚುನಾವಣೆ ಆಯೋಗ | K Kavitha

ಮಾಜಿ ಸಿಎಂ ಕೆಸಿಆರ್ ಪುತ್ರಿ ಕೆ.ಕವಿತಾ
ಮಾಜಿ ಸಿಎಂ ಕೆಸಿಆರ್ ಪುತ್ರಿ ಕೆ.ಕವಿತಾ
Published on
ಹೈದರಾಬಾದ್: ತೆಲಂಗಾಣ ರಾಜಕೀಯದಲ್ಲಿ ಟಿಆರ್​ಎಸ್ ಹೆಸರಿನಲ್ಲಿ ಹೊಸ ಪಕ್ಷ ಕಟ್ಟಿರುವ ಮಾಜಿ ಸಿಎಂ ಕೆಸಿಆರ್ ಪುತ್ರಿ ಕೆ.ಕವಿತಾ(K Kavitha) ಅವರಿಗೆ ಭಾರತೀಯ ಚುನಾವಣೆ ಆಯೋಗ, ಶನಿವಾರ(ಜು. 04) ಪಕ್ಷದ ಹೆಸರನ್ನು ಬದಲಾಯಿಸಿಕೊಳ್ಳುವಂತೆ ಸೂಚನೆ ನೀಡಿದೆ ಎಂದು ವರದಿಯಾಗಿದೆ.
ಟಿಆರ್​ಎಸ್​ ಹೆಸರಿನ ಬಗ್ಗೆ ವಿವಿಧ ಪಕ್ಷಗಳ ನಾಯಕರ ಆಕ್ಷೇಪಣೆ ಹಿನ್ನೆಲೆ, ಕವಿತಾ ಅವರಿಗೆ ಚುನಾವಣೆ ಆಯೋಗ ಪತ್ರ ಬರೆದಿದ್ದು, 15 ದಿನಗಳೊಳಗೆ ಪಕ್ಷಕ್ಕೆ ಮೂರು ಪರ್ಯಾಯ ಹೆಸರುಗಳನ್ನು ಸಲ್ಲಿಸುವಂತೆ ಕೇಳಿಕೊಂಡಿದೆ. ಜೊತೆಗೆ ನಿಗದಿತ ಅವಧಿಯೊಳಗೆ ಈ ಬಗ್ಗೆ ಪ್ರತಿಕ್ರಿಯಿಸಲು ವಿಫಲವಾದರೆ, ಪಕ್ಷದ ನೋಂದಣಿ ಅರ್ಜಿಯನ್ನು ಯಾವುದೇ ಸೂಚನೆಯಿಲ್ಲದೇ ತಿರಸ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಈ ವರ್ಷ ಏಪ್ರಿಲ್​ 25ರಂದು ಮೆಡ್ಚಲ್​ನಲ್ಲಿ ತಮ್ಮ ಹೊಸ ಪಕ್ಷವನ್ನು ಸ್ಥಾಪಿಸಿದ್ದ ಕೆ.ಕವಿತಾ, ಆರಂಭದಲ್ಲಿ ಅದಕ್ಕೆ ತೆಲಂಗಾಣ ರಾಷ್ಟ್ರ ಸೇನಾ ಎಂದು ಹೆಸರಿಟ್ಟಿದ್ದರು. ಮೂರು ದಿನಗಳ ಬಳಿಕ ಅಂತಿಮವಾಗಿ ತೆಲಂಗಾಣ ರಕ್ಷಣಾ ಸೇನೆ ಎಂಬ ಹೆಸರನ್ನು ತಮ್ಮ ಪಕ್ಷಕ್ಕೆ ಇಟ್ಟುಕೊಂಡಿದ್ದರು.
ಚುನಾವಣಾ ಆಯೋಗವು ಪಕ್ಷದ ಹೆಸರನ್ನು ಅನುಮೋದಿಸುವ ವೇಳೆ ಪ್ರಸ್ತಾವಿತ ಹೆಸರನ್ನು ಸಾರ್ವಜನಿಕ ಸೂಚನೆಗಾಗಿ ಪ್ರಕಟಿಸಲು ಅನುಮತಿ ನೀಡಿತ್ತು. ಅಂತಿಮ ಅನುಮೋದನೆಯು ನಿಗದಿತ ಅವಧಿಯಲ್ಲಿ ಸ್ವೀಕರಿಸಿದ ಆಕ್ಷೇಪಣೆಗಳನ್ನು ಅವಲಂಬಿಸಿರುತ್ತದೆ ಎಂದು ಹೇಳಿತ್ತು. ಈ ಹಿನ್ನೆಲೆ ಸಾವಿರಕ್ಕೂ ಹೆಚ್ಚು ಆಕ್ಷೇಪಣೆಗಳು ಬಂದ ಹಿನ್ನೆಲೆ ನೋಟಿಸ್ ನೀಡಿದೆ ಎನ್ನಲಾಗಿದೆ.
ಪ್ರಮುಖವಾಗಿ ತೆಲಂಗಾಣ ರಕ್ಷಣಾ ಸೇನಾದ ಟಿಆರ್‌ಎಸ್ ಎಂಬ ಹೆಸರು ಕೆಸಿಆರ್​ ಅವರ ಬಿಆರ್​ಎಸ್ ಪಕ್ಷದ ಹಿಂದಿನ ಹೆಸರಾದ ತೆಲಂಗಾಣ ರಾಷ್ಟ್ರ ಸಮಿತಿ ಟಿಆರ್‌ಎಸ್​ಗೆ ಹೋಲಿಕೆಯಾಗುತ್ತಿದ್ದು, ಈ ಬಗ್ಗೆ ಮತದಾರರಲ್ಲಿ ಗೊಂದಲ ಉಂಟಾಗಲಿದೆ ಎಂದು ಬಿಆರ್​ಎಸ್ ಸಹ ಆಕ್ಷೇಪಣೆ ಸಲ್ಲಿಸಿತ್ತು.
ಈ ಕುರಿತು ಮಾತನಾಡಿರುವ ಕೆ.ಕವಿತಾ, ಚುನಾವಣಾ ಆಯೋಗದಿಂದ ಬಂದ ಎರಡು ಆಕ್ಷೇಪಣೆಗಳಿಗೆ ಅಧಿಕೃತವಾಗಿ ಪ್ರತಿಕ್ರಿಯಿಸಿದ್ದೇನೆ. ಆದಾಗ್ಯೂ, ಹೊಸ ಹೆಸರುಗಳನ್ನು ನೀಡುವುದಿಲ್ಲ. ನಾವು ನಮ್ಮ ಜೀವಿತಾವಧಿಯಲ್ಲಿ ಈ ಹೆಸರಿಗಾಗಿ ಶ್ರಮಿಸಿದ್ದೇವೆ. ಟಿಆರ್‌ಎಸ್ ಅನ್ನು ಯಶಸ್ವಿ ಪಕ್ಷವನ್ನಾಗಿ ಮಾಡಲು ಇಪ್ಪತ್ತು ವರ್ಷಗಳ ಕಾಲ ನಮ್ಮ ರಕ್ತ ಮತ್ತು ಬೆವರು ಸುರಿಸಿದ್ದೇವೆ. ಬಳಿಕ ನಾವು ತೆಲಂಗಾಣ ರಾಜ್ಯವನ್ನು ಸಾಧಿಸಿದ್ದೇವೆ. ಈ ಸಂಬಂಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net