ದೀದಿಗೆ ಕೊನೆ ಕ್ಷಣದ ಶಾಕ್... ಮತದಾನಕ್ಕೂ ಮುನ್ನವೇ ಬಿಜೆಪಿ ಸೇರ್ಪಡೆಗೊಂಡ ಟಿಎಂಸಿ ಶಾಸಕ ಖಗೇಂದ್ರನಾಥ್ ಮಹಾತೋ! | Khagendranath Mahato

Khagendranath Mahato | ಬಿಜೆಪಿ ಸೇರ್ಪಡೆಗೊಂಡ ಟಿಎಂಸಿ ಶಾಸಕ ಖಗೇಂದ್ರನಾಥ್ ಮಹಾತೋ
Khagendranath Mahato | ಬಿಜೆಪಿ ಸೇರ್ಪಡೆಗೊಂಡ ಟಿಎಂಸಿ ಶಾಸಕ ಖಗೇಂದ್ರನಾಥ್ ಮಹಾತೋ
Published on
Khagendranath Mahato: ಪಶ್ಚಿಮ ಬಂಗಾಳದ ರಾಜಕೀಯ ಅಖಾಡದಲ್ಲಿ ಮೊದಲ ಹಂತದ ಮತದಾನಕ್ಕೂ ಮುನ್ನ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಭಾರಿ ಆಘಾತ ಎದುರಾಗಿದ್ದು, ಜಾರ್ಗ್ರಾಮ್ ಜಿಲ್ಲೆಯ ಗೋಪಿಬಲ್ಲವ್‌ಪುರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಖಗೇಂದ್ರನಾಥ್ ಮಹಾತೋ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಗೊಂಡಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಗೆ ಟಿಎಂಸಿ ಪಕ್ಷವು ಮಹಾತೋಗೆ ಟಿಕೆಟ್ ನಿರಾಕರಿಸಿತ್ತು. ಈ ನಿರ್ಧಾರದಿಂದ ತೀವ್ರ ಅಸಮಾಧಾನಗೊಂಡಿದ್ದ ಅವರು, ಚುನಾವಣೆಯ ಹೊಸ್ತಿಲಲ್ಲೇ ಪಕ್ಷ ಬದಲಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ. ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿ ಇರುವಾಗ ಕಮಲ ಮುಡಿದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸುವೇಂದು ಅಧಿಕಾರಿ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ

ಬಿಧಾನ್‌ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಖಗೇಂದ್ರನಾಥ್ ಮಹಾತೋಗೆ ಬಿಜೆಪಿ ಧ್ವಜ ನೀಡಿ ಪಕ್ಷಕ್ಕೆ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಸುವೇಂದು ಅಧಿಕಾರಿ, ಖಗೇಂದ್ರನಾಥ್ ಒಬ್ಬ ವೈದ್ಯರಾಗಿದ್ದು, ಟಿಎಂಸಿ ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ಹೋರಾಡುವ ಹಂಬಲದಿಂದ ಇಂದು ನಮ್ಮ ಪಕ್ಷಕ್ಕೆ ಸೇರಿದ್ದಾರೆ ಎಂದರು. ಗೋಪಿಬಲ್ಲವ್‌ಪುರವು ಬಿಜೆಪಿ ಆಡಳಿತವಿರುವ ಒಡಿಶಾದೊಂದಿಗೆ ಗಡಿ ಹಂಚಿಕೊಂಡಿದ್ದು, ಅಲ್ಲಿನ ಉತ್ತಮ ಆಡಳಿತದಿಂದ ಪ್ರಭಾವಿತರಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.

ಬೇಷರತ್ತಾಗಿ ಬಿಜೆಪಿ ಸೇರ್ಪಡೆ...

ಪಕ್ಷ ಸೇರ್ಪಡೆ ವೇಳೆ ಸುವೇಂದು ಅಧಿಕಾರಿ ಒಂದು ಮಹತ್ವದ ಸ್ಪಷ್ಟನೆ ನೀಡಿದ್ದು, ಬಿಜೆಪಿ ಈಗಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದ್ದು, ಪ್ರಚಾರದ ಅವಧಿಯೂ ಮುಗಿಯುತ್ತಾ ಬಂದಿದೆ. ಹೀಗಾಗಿ ಖಗೇಂದ್ರನಾಥ್ ಯಾವುದೇ ಚುನಾವಣಾ ಲಾಭದ ನಿರೀಕ್ಷೆಯಿಲ್ಲದೆ, ಬೇಷರತ್ತಾಗಿ ಪಕ್ಷಕ್ಕೆ ಸೇರಿದ್ದಾರೆ. ನಮ್ಮ ಪಕ್ಷದ ಕಾರ್ಯ ಸಂಸ್ಕೃತಿಯನ್ನು ಮೆಚ್ಚಿ ಈ ಹಂತಕ್ಕೆ ಬಂದಿದ್ದಾರೆ ಎಂದು ಹೇಳಿದರು.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತವು ಇಂದು (ಏಪ್ರಿಲ್ 23, ಗುರುವಾರ) ನಡೆಯುತ್ತಿದ್ದು, ಉತ್ತರ, ಪಶ್ಚಿಮ ಮತ್ತು ದಕ್ಷಿಣ ಬಂಗಾಳದ ಒಟ್ಟು 152 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಜಾರಿಯಲ್ಲಿದೆ. ಉಳಿದ 142 ಕ್ಷೇತ್ರಗಳಿಗೆ ಏಪ್ರಿಲ್ 29 ರಂದು ಮತದಾನ ನಡೆಯಲಿದ್ದು, ಮೇ 4 ರಂದು ಇಡೀ ರಾಜ್ಯದ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮತ್ತು ಪೂರ್ಣ ಶಕ್ತಿಯೊಂದಿಗೆ ಅಖಾಡಕ್ಕಿಳಿದಿರುವ ಬಿಜೆಪಿ ನಡುವೆ ಇಲ್ಲಿ ನೇರ ಹಣಾಹಣಿ ಏರ್ಪಟ್ಟಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net