ಬಾಬರಿ ಮಸೀದಿ ಕಟ್ಟಲು ಇದು ನಿಮ್ಮಪ್ಪನ ಆಸ್ತಿನಾ...? ಇನ್ಶಾ ಅಲ್ಲಾ ಜೊತೆಗೆ ‘ಜೈ ಶ್ರೀರಾಮ್’ ಕೂಡ ಹೇಳಿ ಎಂದ ಹಿಮಂತ ಬಿಸ್ವಾ ಶರ್ಮಾ | Himanta Biswa Sarma

Himanta Biswa Sarma | ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ
Himanta Biswa Sarma | ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ
Published on
West Bengal Elections: ಪಶ್ಚಿಮ ಬಂಗಾಳದಲ್ಲಿ ಇಂದು ಮೊದಲ ಹಂತದ ವಿಧಾನಸಭಾ ಚುನಾವಣಾ ಮತದಾನವು ಅತ್ಯಂತ ಭರದಿಂದ ಸಾಗಿದ್ದು, ಮತದಾರರು ಹೆಚ್ಚಿನ ಉತ್ಸಾಹದೊಂದಿಗೆ ಮತಗಟ್ಟೆಗಳಿಗೆ ಆಗಮಿಸಿ ಹಕ್ಕು ಚಲಾಯಿಸುತ್ತಿದ್ದಾರೆ. ರಾಜ್ಯದ ಕೆಲವು ಭಾಗಗಳಲ್ಲಿ ರಾಜಕೀಯ ಘರ್ಷಣೆಗಳು ನಡೆದ ಬಗ್ಗೆ ವರದಿಯಾಗಿದ್ದರೂ ಸಹ, ಉಳಿದ ಬಹುತೇಕ ಕಡೆಗಳಲ್ಲಿ ಮತದಾನ ಪ್ರಕ್ರಿಯೆಯು ಶಾಂತಿಯುತವಾಗಿ ನಡೆಯುತ್ತಿದೆ.
ಎರಡನೇ ಹಂತದಲ್ಲಿ ಚುನಾವಣೆ ನಡೆಯುವ ಬಂಗಾಳದ ಕಲನಾದಲ್ಲಿ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಟಿಎಂಸಿ ಮುಖ್ಯಸ್ಥೆ ರಾಜ್ಯದ ಹಿಂದೂ ಜನಸಂಖ್ಯೆಯನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

'ಜೈ ಶ್ರೀರಾಮ್' ಎನ್ನಲು ಕಲಿಯಿರಿ

ಮಮತಾ ಬ್ಯಾನರ್ಜಿ ಭಾಷಣದ ಶೈಲಿಯನ್ನು ಟೀಕಿಸಿದ ಶರ್ಮಾ, ದೀದಿಯವರ ಯಾವುದೇ ಭಾಷಣದ ವೀಡಿಯೊ ನೋಡಿ, ಅವರು ಮೈಕ್ ತೆಗೆದುಕೊಂಡು ಬಲಕ್ಕೆ ಹೋಗಿ ಇನ್ಶಾ ಅಲ್ಲಾ ಎನ್ನುತ್ತಾರೆ, ಎಡಕ್ಕೆ ಹೋಗಿ ಖುದಾ ಹಫೀಜ್ ಎನ್ನುತ್ತಾರೆ. ಆದರೆ ಮಮತಾ ದೀದಿ ಅವರೇ, ಈ ಜಗತ್ತಿನಲ್ಲಿ ಜೈ ಶ್ರೀರಾಮ್ ಎಂಬ ಘೋಷಣೆ ಕೂಡ ಇದೆ ಎಂಬುದನ್ನು ಮರೆಯಬೇಡಿ ಎಂದು ಕುಟುಕಿದರು. ಇನ್ಶಾ ಅಲ್ಲಾ ಹೇಳುವುದಕ್ಕೆ ನಮ್ಮ ಅಭ್ಯಂತರವಿಲ್ಲ, ಆದರೆ ಬ್ಯಾನರ್ಜಿ ಅವರು ಜೈ ಶ್ರೀರಾಮ್, ಮಾ ದುರ್ಗಾ ಮತ್ತು ಮಾ ಕಾಳಿ ಎಂದು ಕರೆಯುವುದನ್ನು ಕಲಿಯಬೇಕು. ಇಲ್ಲದಿದ್ದರೆ ಚುನಾವಣೆಯಲ್ಲಿ ಸೋತ ಬಳಿಕ ನಿಮಗೆ ಶಾಂತಿ ಸಿಗುವುದಿಲ್ಲ ಎಂದು ಎಚ್ಚರಿಸುತ್ತಾ, ಬಂಗಾಳದಲ್ಲಿ ಹಿಂದೂಗಳು ಕೂಡ ಇದ್ದಾರೆ ಎಂಬ ಸತ್ಯವನ್ನು ಮಮತಾ ಮರೆತಂತಿದೆ ಎಂದು ಕಿಡಿಕಾರಿದರು.
ಬಂಗಾಳದಲ್ಲಿ ಬಾಬರಿ ಮಸೀದಿ ನಿರ್ಮಾಣದ ಕುರಿತು ಟಿಎಂಸಿಯ ಉಚ್ಛಾಟಿತ ಶಾಸಕ ಹುಮಾಯೂನ್ ಕಬೀರ್ ನೀಡಿದ್ದ ಹೇಳಿಕೆಗಳನ್ನು ಹಿಮಂತ ಬಿಸ್ವಾ ಶರ್ಮಾ ಕಟುವಾಗಿ ಟೀಕಿಸಿದ್ದು, ಮಮತಾ ದೀದಿಯವರ ಬಂಗಾಳದಲ್ಲಿ ಯಾರೋ ಒಬ್ಬರು ಬಾಬರಿ ಮಸೀದಿ ಕಟ್ಟುತ್ತೇವೆ ಎನ್ನುತ್ತಾರೆ, ಇನ್ನೊಬ್ಬರು ಹುಮಾಯೂನ್ ಅಥವಾ ಶಹಜಹಾನ್ ಮಸೀದಿ ಕಟ್ಟುತ್ತೇವೆ ಎನ್ನುತ್ತಾರೆ. ನೀವು ಎಲ್ಲಿ ಬೇಕೆಂದರಲ್ಲಿ ಬಾಬರಿ ಮಸೀದಿ ನಿರ್ಮಿಸಲು ಹೇಗೆ ಸಾಧ್ಯ?, ಇದು ನಿಮ್ಮ ಅಪ್ಪನ ಆಸ್ತಿಯೇ..? ಎಂದು ಪ್ರಶ್ನಿಸಿದರು.

ಮಾಂಸಾಹಾರ ಸೇವನೆ ಬಗ್ಗೆ ಶರ್ಮಾ ಶಾಕಿಂಗ್​ ರಿಯಾಕ್ಷನ್​!

ಬಿಜೆಪಿ ಅಧಿಕಾರಕ್ಕೆ ಬಂದರೆ ಮಾಂಸಾಹಾರವನ್ನು ನಿಷೇಧಿಸುತ್ತದೆ ಎಂಬ ತೃಣಮೂಲ ಕಾಂಗ್ರೆಸ್‌ನ ಆರೋಪವನ್ನು ಹಿಮಂತ್​ ಬಿಸ್ವಾ ಶರ್ಮಾ ತಳ್ಳಿಹಾಕಿದ್ದು, ಬಿಜೆಪಿ ಆಡಳಿತವಿರುವ ಅಸ್ಸಾಂನಲ್ಲಿ ಜನರು ಮೀನು ಮತ್ತು ಮಾಂಸವನ್ನು ಸೇವಿಸುತ್ತಾರೆ. ಈ ವಿಷಯದಲ್ಲಿ ಸುಳ್ಳು ಪ್ರಚಾರ ಬೇಡ ಎಂದರು. ಮಮತಾ ಬ್ಯಾನರ್ಜಿ ಅವರಿಗೆ ಬಹಿರಂಗವಾಗಿ ಮೀನು ತಿನ್ನುವ ಸ್ಪರ್ಧೆಗೆ ಸವಾಲು ಹಾಕಿದ ಶರ್ಮಾ, ಇದಕ್ಕಾಗಿ ಅವರನ್ನು ತಮ್ಮ ಮನೆಗೆ ಆಹ್ವಾನಿಸಿದರು ಅಥವಾ ಅಗತ್ಯವಿದ್ದರೆ ತಾವೇ ಅವರ ನಿವಾಸಕ್ಕೆ ಬರುವುದಾಗಿ ತಿಳಿಸಿದರು. ಈ ಮೂಲಕ ಬಿಜೆಪಿ ಸಸ್ಯಾಹಾರಿ ಸಂಸ್ಕೃತಿಯನ್ನು ಹೇರುತ್ತದೆ ಎಂಬ ಆರೋಪಕ್ಕೆ ವ್ಯಂಗ್ಯವಾಗಿ ಉತ್ತರಿಸಿದರು.

ಬಂಗಾಳದಲ್ಲಿ ಮೊದಲ ಹಂತದ ಅಗ್ನಿಪರೀಕ್ಷೆ

ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳ ಪೈಕಿ 152 ಕ್ಷೇತ್ರಗಳಲ್ಲಿ ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ. ಈ ಹಂತವು ರಾಜ್ಯದ ಅರ್ಧಕ್ಕಿಂತ ಹೆಚ್ಚು ಸ್ಥಾನಗಳನ್ನು ಒಳಗೊಂಡಿರುವುದರಿಂದ ಬಿಜೆಪಿಗೆ ಭರ್ಜರಿ ಮುನ್ನಡೆ ಸಾಧಿಸಲು ಇದು ಪ್ರಮುಖ ಅವಕಾಶವಾಗಿದೆ. ಮತ್ತೊಂದೆಡೆ, ಸತತ ನಾಲ್ಕನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಹವಣಿಸುತ್ತಿರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ಗೆ ಈ ಹಂತವು ಅತ್ಯಂತ ನಿರ್ಣಾಯಕ ಪರೀಕ್ಷೆಯಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net