ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ: ಕ್ರಿಕೆಟ್​ ಆಡುತ್ತಿದ್ದ ಮಕ್ಕಳ ಮೇಲೆ ಡ್ರೋನ್​ ದಾಳಿ; ಮೂವರ ಸ್ಥಿತಿ ಗಂಭೀರ! Drone Attack

 ಕ್ರಿಕೆಟ್​ ಆಡುತ್ತಿದ್ದ ಮಕ್ಕಳ ಮೇಲೆ ಡ್ರೋನ್​ ದಾಳಿ
ಕ್ರಿಕೆಟ್​ ಆಡುತ್ತಿದ್ದ ಮಕ್ಕಳ ಮೇಲೆ ಡ್ರೋನ್​ ದಾಳಿ
Published on

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ
  • ಕ್ರಿಕೆಟ್​ ಆಡುತ್ತಿದ್ದ ಮಕ್ಕಳ ಮೇಲೆ ಡ್ರೋನ್​ ದಾಳಿ
ಪೇಶಾವರ್: ಆಟವಾಡುತ್ತಿದ್ದ ಪುಟ್ಟ ಮಕ್ಕಳ ಮೇಲೆ ಉಗ್ರರು ಡ್ರೋನ್ ಮೂಲಕ ದಾಳಿ (Drone Attack) ನಡೆಸಿರುವ ಘೋರ ಘಟನೆ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ನಡೆದಿದೆ. ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ಮೈದಾನವನ್ನೇ ಗುರಿಯಾಗಿಸಿಕೊಂಡು ಉಗ್ರರು ಈ ಹೇಯ ಕೃತ್ಯ ಎಸಗಿದ್ದು, ಪ್ರದೇಶದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.

ಮೈದಾನದಲ್ಲಿ ನಡೆದಿದ್ದೇನು?

ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಮೈದಾನವೊಂದರಲ್ಲಿ ಸ್ಥಳೀಯರು ಕ್ರಿಕೆಟ್ ಪಂದ್ಯವನ್ನು ಆಯೋಜಿಸಿದ್ದರು. ಬ್ಯಾಟಿಂಗ್-ಬೌಲಿಂಗ್ ಅಬ್ಬರದ ನಡುವೆ ಆಟಗಾರರು ಮತ್ತು ಪ್ರೇಕ್ಷಕರು ಸಂಭ್ರಮಿಸುತ್ತಿದ್ದಾಗಲೇ ಆಕಾಶದಿಂದ ಸಾವು ಎರಗಿ ಬಂದಿದೆ. ಉಗ್ರರು ಬಳಸಿದ ಕ್ವಾಡ್‌ಕಾಪ್ಟರ್ (ಡ್ರೋನ್) ಮೈದಾನದ ಮೇಲೆ ಬಾಂಬ್ ಎಸೆದಿದೆ. ಈ ಸ್ಫೋಟದಲ್ಲಿ ಮೂವರು ಅಮಾಯಕ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟ ಸಂಭವಿಸುತ್ತಿದ್ದಂತೆ ಮೈದಾನದಲ್ಲಿದ್ದವರು ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದಾರೆ.
ಗಡಿಯಾಚೆಗಿನ ಗುಂಡಿನ ಅಬ್ಬರ: 9 ಮಂದಿ ಬಲಿ!
ಇತ್ತ ಕ್ರಿಕೆಟ್ ಮೈದಾನದ ಮೇಲೆ ದಾಳಿಯಾದರೆ, ಅತ್ತ ಬಜೌರ್ ಗಡಿ ಭಾಗದಲ್ಲಿ ಅಫ್ಘಾನ್ ತಾಲಿಬಾನ್ ಉಗ್ರರು ನಡೆಸಿದ ಅಪ್ರಚೋದಿತ ಗುಂಡಿನ ದಾಳಿ ಭಾರೀ ದುರಂತಕ್ಕೆ ಕಾರಣವಾಗಿದೆ. ಗಡಿಯಾಚೆಗಿನಿಂದ ನಡೆಸಿದ ಈ ದಾಳಿಯಲ್ಲಿ ಮೂವರು ಮಹಿಳೆಯರು ಮತ್ತು ಆರು ಮಕ್ಕಳು ಸೇರಿದಂತೆ ಒಟ್ಟು 9 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಎರಡು ತಿಂಗಳಿಂದ ಮಾಮುಂಡ್ ಮತ್ತು ಸ್ಲಾರ್ಜೈ ಗಡಿ ಪ್ರದೇಶಗಳಲ್ಲಿ ಅಫ್ಘಾನ್ ಕಡೆಯಿಂದ ಸತತವಾಗಿ ಮಾರ್ಟರ್ ಶೆಲ್‌ಗಳನ್ನು ಹಾರಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೇರ ಹಣಾಹಣಿಗೆ ಧೈರ್ಯವಿಲ್ಲದೆ ನಾಗರಿಕರ ಮೇಲೆ ದಾಳಿ!

ಸೇನಾ ಪಡೆಗಳನ್ನು ನೇರವಾಗಿ ಎದುರಿಸುವ ತಾಕತ್ತಿಲ್ಲದ ಉಗ್ರರು, ಈಗ ಜನಸಾಮಾನ್ಯರನ್ನು ಮತ್ತು ಮಕ್ಕಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಆಕ್ರೋಶ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. ನಾಗರಿಕರ ಮೇಲೆ ದಾಳಿ ನಡೆಸಿ ಭಯ ಹುಟ್ಟಿಸುವುದು ಉಗ್ರರ ತಂತ್ರವಾಗಿದೆ. ಇದು ಅವರ ಅಸಮರ್ಥತೆಯನ್ನು ತೋರಿಸುತ್ತದೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

ಬುಡಕಟ್ಟು ಜನರ ಆಕ್ರೋಶ!

ಈ ಸತತ ದಾಳಿಗಳಿಂದ ರೋಸಿಹೋಗಿರುವ ಸ್ಥಳೀಯ ಬುಡಕಟ್ಟು ಹಿರಿಯರು ಮತ್ತು ನಿವಾಸಿಗಳು ಉಗ್ರರ ವಿರುದ್ಧ ಬಲವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಮಕ್ಕಳು ಮೈದಾನದಲ್ಲಿ ಆಟವಾಡುವಂತಿಲ್ಲ, ಮಹಿಳೆಯರು ಮನೆಯಲ್ಲಿ ಸುರಕ್ಷಿತವಾಗಿರುವಂತಿಲ್ಲ ಎಂದರೆ ಹೇಗೆ? ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲೇಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸದ್ಯ ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದಿದ್ದು, ದಾಳಿಕೋರರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಉಗ್ರರ ಅಡಗುದಾಣಗಳನ್ನು ಗುರಿಯಾಗಿಸಿಕೊಂಡು ಪಾಕ್ ಸೇನೆ ಮರುದಾಳಿ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net