ಬೋರ್ಡ್ ತೋರಿಸಿ ಆಮೇಲೆ ದಂಡ ಹಾಕಿ: ಸಿಗರೇಟ್ ಸೇದುತ್ತಾ ಲೇಡಿ ಪೊಲೀಸ್ ಜೊತೆ ಯುವತಿ ಜಗಳ; ವಿಡಿಯೋ ವೈರಲ್!Viral Video
ಸಿಗರೇಟ್ ಸೇದಬೇಡಿ ಎಂದ ಪೊಲೀಸ್ ಜೊತೆಗೆ ಜಗಳ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದ ಯುವತಿ
ಸಿಗರೇಟ್ ಸೇದಬೇಡಿ ಎಂದ ಪೊಲೀಸ್ ಜೊತೆಗೆ ಜಗಳ
ನೋ ಸ್ಮೋಕಿಂಗ್ ಬೋರ್ಡ್ ತೋರಿಸಿ ಆಮೇಲೆ ಮಾತಾಡಿ ಎಂದು ಆವಾಜ್
ನವದೆಹಲಿ: ದೇಶದ ರಾಜಧಾನಿ ದೆಹಲಿಯ ಅತ್ಯಂತ ಜನನಿಬಿಡ ಮತ್ತು ಪ್ರತಿಷ್ಠಿತ ಪ್ರದೇಶವಾದ ಕನ್ನಾಟ್ ಪ್ಲೇಸ್ (Connate Place) ಬುಧವಾರ (ಏ.1) ಸಂಜೆ ಒಂದು ವಿಚಿತ್ರ ಘಟನೆಗೆ ಸಾಕ್ಷಿಯಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದಬೇಡಿ ಅಂದಿದ್ದಕ್ಕೆ ಯುವತಿಯೊಬ್ಬಳು ಪೊಲೀಸ್ ಅಧಿಕಾರಿಗಳ ಜೊತೆಗೇ ವಾಗ್ವಾದಕ್ಕೆ ಇಳಿದ ಘಟನೆ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ (Viral Video) ಆಗುತ್ತಿದೆ.
ಏನಿದು ಘಟನೆ?
ಕನ್ನಾಟ್ ಪ್ಲೇಸ್‌ನ ಸಾರ್ವಜನಿಕ ಪ್ರದೇಶದಲ್ಲಿ ಯುವತಿಯೊಬ್ಬಳು ಧೂಮಪಾನ ಮಾಡುತ್ತಿದ್ದಳು. ಇದನ್ನು ಗಮನಿಸಿದ ಮಹಿಳಾ ಸಬ್-ಇನ್ಸ್‌ಪೆಕ್ಟರ್ ಮತ್ತು ಇತರ ಸಿಬ್ಬಂದಿ ಅವಳ ಹತ್ತಿರ ಬಂದು, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು ಅಪರಾಧ, ನಾವು ನಿಮಗೆ ದಂಡ ವಿಧಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಸಾಮಾನ್ಯವಾಗಿ ಪೊಲೀಸರು ಬಂದಾಗ ಯಾರು ಕೂಡ ಸಿಗರೇಟ್ ಎಸೆದು ಕ್ಷಮೆ ಕೇಳುತ್ತಾರೆ. ಆದರೆ ಇಲ್ಲಿದ್ದಿದ್ದೇ ಉಲ್ಟಾ!
ಪೊಲೀಸರ ಮಾತಿಗೆ ಕಿಂಚಿತ್ತೂ ಹೆದರದ ಆ ಯುವತಿ, ಇಲ್ಲಿ ಸಿಗರೇಟ್ ಸೇದಬಾರದು ಎಂದು ಬರೆದಿರುವ ಬೋರ್ಡ್ ಎಲ್ಲಿದೆ? ಮೊದಲು ಆ ಫಲಕವನ್ನು ನನಗೆ ತೋರಿಸಿ ಎಂದು ಪದೇ ಪದೇ ಒತ್ತಾಯಿಸಿ ಪೊಲೀಸರನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದಾಳೆ.
ಬೋರ್ಡ್ ಎಲ್ಲಿದೆ ತೋರಿಸಿ?
ವಿಡಿಯೋದಲ್ಲಿ ಕಾಣುವಂತೆ, ಸಬ್-ಇನ್ಸ್‌ಪೆಕ್ಟರ್ ಅವಳಿಗೆ ಇದು ಧೂಮಪಾನ ಮಾಡಲು ಗೊತ್ತುಪಡಿಸಿದ ಜಾಗವಲ್ಲ, ಸಿಗರೇಟ್ ಎಸೆಯಿರಿ ಎಂದು ಹೇಳುತ್ತಾರೆ. ಅದಕ್ಕೆ ಯುವತಿ, ಇಲ್ಲಿ ಓಡಾಡಲು ಅವಕಾಶ ಇದೆಯಲ್ಲ? ಹಾಗಾದರೆ ಧೂಮಪಾನ ಮಾಡಬೇಡಿ ಎಂಬ ಫಲಕ ಎಲ್ಲಿದೆ? ಎಂದು ಮರುಪ್ರಶ್ನೆ ಹಾಕುತ್ತಾಳೆ.
ವಾದ ಮುಂದುವರಿದಾಗ ಪೊಲೀಸ್ ಅಧಿಕಾರಿ ಸಮಾಧಾನ ಕಳೆದುಕೊಳ್ಳದೆ, ಸರಿ, ಹಾಗಾದರೆ ಇಲ್ಲಿ ಧೂಮಪಾನ ಮಾಡಲು ಅನುಮತಿ ಇದೆ ಎಂದು ಬರೆದಿರುವ ಫಲಕವನ್ನು ನೀವೇ ನಮಗೆ ತೋರಿಸಿ ಎಂದು ಸವಾಲು ಹಾಕಿದ್ದಾರೆ.
ಪೊಲೀಸರ ಎಚ್ಚರಿಕೆಯ ಹೊರತಾಗಿಯೂ ಯುವತಿ ಸಿಗರೇಟ್ ಸೇದುತ್ತಾ, ವಾದ ಮಾಡುತ್ತಾ ಅಲ್ಲಿಂದ ಕದಲುವುದಿಲ್ಲ. ಸುತ್ತಲೂ ನೆರೆದಿದ್ದ ಜನರು ಈ ವಾಗ್ವಾದವನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ.
ಇದು ನಿರ್ಭಯವೋ ಅಥವಾ ಅಸಭ್ಯವೋ?
ಈ ವಿಡಿಯೋವನ್ನು @NCIBHQ ಎಂಬ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈಗ ಇದು ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. ಯುವತಿಯ ಈ ನಡೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಎರಡು ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಇದು ಅತೀಯಾದ ಅಸಭ್ಯ ವರ್ತನೆ. ಪೊಲೀಸರ ಜೊತೆ ಈ ರೀತಿ ಮಾತನಾಡುವುದು ಸರಿಯಲ್ಲ. ನಿಯಮಗಳು ಎಲ್ಲರಿಗೂ ಒಂದೇ ಎಂದು ಒಂದು ವರ್ಗದ ಜನ ಟೀಕಿಸುತ್ತಿದ್ದಾರೆ. ಯುವತಿ ಕೇಳುತ್ತಿರುವುದು ಸರಿ ಇದೆ. ನೋ ಸ್ಮೋಕಿಂಗ್ ಬೋರ್ಡ್ ಇಲ್ಲದ ಕಡೆ ದಂಡ ಹಾಕಲು ಹೇಗೆ ಸಾಧ್ಯ? ಅವಳ ಧೈರ್ಯವನ್ನು ಮೆಚ್ಚಬೇಕು ಎಂದು ಇನ್ನೊಂದು ವರ್ಗ ಬೆಂಬಲಿಸುತ್ತಿದ್ದಾರೆ,(ಏಜನ್ಸೀಸ್).