ಏಳರ ಪೋರನ ಅಪ್ರತಿಮ ಸಾಹಸ: ಪಾಕ್ ಜಲಸಂಧಿ ಈಜಿದ 'ಜಲವೀರ' ಇಶಾಂಕ್; ವಿಶ್ವ ದಾಖಲೆ ಬರೆದ ರಾಂಚಿಯ ಬಾಲಕ! Ishank

ಶ್ರೀಲಂಕಾದಿಂದ ಭಾರತದವರೆಗೆ ಪಾಕ್ ಜಲಸಂಧಿಯನ್ನು ಈಜಿದ ಏರಳ ಬಾಲಕ
ಶ್ರೀಲಂಕಾದಿಂದ ಭಾರತದವರೆಗೆ ಪಾಕ್ ಜಲಸಂಧಿಯನ್ನು ಈಜಿದ ಏರಳ ಬಾಲಕ
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀಲಂಕಾದಿಂದ ಭಾರತದವರೆಗೆ ಪಾಕ್ ಜಲಸಂಧಿಯನ್ನು ಈಜಿದ ಏರಳ ಬಾಲಕ
  • ಕೇವಲ 9 ಗಂಟೆ 50 ನಿಮಿಷಗಳಲ್ಲಿ ಈಜಿ ದಾಟಿದ ರಾಂಚಿಯ 7 ವರ್ಷದ ಬಾಲಕ ಇಶಾಂಕ್
  • ಈ ಮಾರ್ಗವನ್ನು ದಾಟಿದ ವಿಶ್ವದ ಅತ್ಯಂತ ಕಿರಿಯ ಈಜುಗಾರ ಎಂಬ ಹೆಗ್ಗಳಿಕೆ
ರಾಂಚಿ: 7 ವರ್ಷದ ಮಕ್ಕಳು ಸಾಮಾನ್ಯವಾಗಿ ಅಮ್ಮನ ಹಿಂದೆ ಸುತ್ತುತ್ತಾ, ಆಟದ ಸಾಮಾನುಗಳಿಗಾಗಿ ಹಠ ಮಾಡುವುದನ್ನು ನಾವು ನೋಡಿರುತ್ತೆವೆ. ಆದರೆ, ಜಾರ್ಖಂಡ್‌ನ ರಾಂಚಿಯ ಈ ಪೋರ ಮಾತ್ರ ಅರಬ್ಬಿ ಸಮುದ್ರದ ಅಲೆಗಳ ಜೊತೆ ಸೆಣಸಾಡಿ, ಇಡೀ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ.
ಹೌದು, ರಾಂಚಿಯ ಏಳು ವರ್ಷದ ಬಾಲಕ ಇಶಾಂಕ್ (Ishank), ಶ್ರೀಲಂಕಾ ಮತ್ತು ಭಾರತದ ನಡುವಿನ ಅಪಾಯಕಾರಿ ಸಮುದ್ರ ಮಾರ್ಗವನ್ನು ಈಜುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾನೆ.

9 ಗಂಟೆ 50 ನಿಮಿಷಗಳ ಕಾಲ ಸಮುದ್ರದೊಂದಿಗೆ ಹೋರಾಟ!

ರಾಂಚಿಯ ಧುರ್ವಾ ಮೂಲದ ಈ ಯುವ ಈಜುಗಾರ ಇಶಾಂಕ್, ಶ್ರೀಲಂಕಾದ ತಲೈಮನ್ನಾರ್‌ನಿಂದ ಭಾರತದ ಧನುಷ್ಕೋಡಿಯವರೆಗಿನ ಪಾಕ್ ಜಲಸಂಧಿಯನ್ನು (Palk Strait) ಕೇವಲ 9 ಗಂಟೆ 50 ನಿಮಿಷಗಳಲ್ಲಿ ದಾಟಿ ಇತಿಹಾಸ ನಿರ್ಮಿಸಿದ್ದಾನೆ. ಸಮುದ್ರದ ಭೀಕರ ಅಲೆಗಳು, ಪ್ರವಾಹ ಮತ್ತು ಅಪಾಯಕಾರಿ ಜಲಚರಗಳ ನಡುವೆಯೂ ಧೃತಿಗೆಡದೆ ಗುರಿ ತಲುಪಿದ ಇಶಾಂಕ್, ಈ ಮಾರ್ಗವನ್ನು ದಾಟಿದ ವಿಶ್ವದ ಅತ್ಯಂತ ಕಿರಿಯ ಈಜುಗಾರ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
ಏಪ್ರಿಲ್ 30ರಂದು ಸೃಷ್ಟಿಯಾಯ್ತು ಇತಿಹಾಸ
2026ರ ಏಪ್ರಿಲ್ 30ರಂದು ಈ ಸಾಹಸ ಪೂರ್ಣಗೊಂಡಿದೆ. ಈ ಅದ್ಭುತ ಸಾಧನೆಗಾಗಿ ಯೂನಿವರ್ಸಲ್ ರೆಕಾರ್ಡ್ಸ್ ಫೋರಮ್ ಇಶಾಂಕ್‌ಗೆ ವಿಶ್ವ ದಾಖಲೆ ಪ್ರಮಾಣಪತ್ರವನ್ನು ನೀಡಿ ಗೌರವಿಸಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ಕಠಿಣ ಸವಾಲನ್ನು ಗೆದ್ದಿರುವುದು ಇಡೀ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ.

ಅಣೆಕಟ್ಟಿನಲ್ಲಿ ಶುರುವಾದ 'ವಿಶ್ವ ದಾಖಲೆ' ಕನಸು!

ಇಶಾಂಕ್ ಈ ಗುರಿಯನ್ನು ಒಂದೇ ದಿನದಲ್ಲಿ ತಲುಪಿದಲ್ಲ. ಇದರ ಹಿಂದೆ ಕಠಿಣ ಪರಿಶ್ರಮ ಮತ್ತು ತ್ಯಾಗವಿದೆ. ಪ್ರತಿದಿನ ರಾಂಚಿಯ ಧುರ್ವಾ ಅಣೆಕಟ್ಟಿನಲ್ಲಿ 4 ರಿಂದ 5 ಗಂಟೆಗಳ ಕಾಲ ಈತ ಬೆವರು ಸುರಿಸುತ್ತಿದ್ದ. ತನ್ನ ತರಬೇತುದಾರರಾದ ಅಮನ್ ಕುಮಾರ್ ಜೈಸ್ವಾಲ್ ಮತ್ತು ಬಜರಂಗ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಮುದ್ರದ ಸವಾಲುಗಳನ್ನು ಎದುರಿಸಲು ವಿಶೇಷ ತರಬೇತಿ ಪಡೆದಿದ್ದ. ಆ ಶ್ರಮಕ್ಕೆ ಈಗ ತಕ್ಕ ಪ್ರತಿಫಲ ಸಿಕ್ಕಿದೆ ಎಂದರೆ ಸುಳ್ಳಲ್ಲ.

ಶಾಲೆಯಲ್ಲೂ 'ಹೀರೋ' ಆದ ಇಶಾಂಕ್

ರಾಂಚಿಯ ಡಿಎವಿ ಶ್ಯಾಮಲಿ ಶಾಲೆಯಲ್ಲಿ 3ನೇ ತರಗತಿ ಓದುತ್ತಿರುವ ಇಶಾಂಕ್ ಸಾಧನೆಗೆ ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ. ಸವಾಲಿನ ಸಮುದ್ರ ಪರಿಸ್ಥಿತಿಗಳನ್ನು ಎದುರಿಸಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ವಿಶ್ವ ದಾಖಲೆ ನಿರ್ಮಿಸುವುದು ಅಸಾಧಾರಣ ಧೈರ್ಯ. ಇಶಾಂಕ್ ನಮ್ಮ ಶಾಲೆಯ ಮತ್ತು ದೇಶದ ಹೆಮ್ಮೆ ಎಂದು ಪ್ರಾಂಶುಪಾಲರು ಪ್ರಶಂಸಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net