ದಶಕಗಳ ಆಡಳಿತಕ್ಕೆ ನಿತೀಶ್ ವಿದಾಯ?..ರಾಜ್ಯಸಭೆಗೆ ಎಂಟ್ರಿ ಕೊಟ್ಟು ಪುತ್ರನಿಗೆ ಪಟ್ಟ ಕಟ್ಟಲು ಸಿದ್ಧವಾದರೇ ಸುಶಾಸನ್ ಬಾಬು? | Nitish Kumar Resignation Rumors

Nitish Kumar Resignation Rumors | ಬಿಹಾರದಲ್ಲಿ ನಾಯಕತ್ವ ಬದಲಾವಣೆಯ ಬಿರುಗಾಳಿ
Nitish Kumar Resignation Rumors | ಬಿಹಾರದಲ್ಲಿ ನಾಯಕತ್ವ ಬದಲಾವಣೆಯ ಬಿರುಗಾಳಿ
Published on
ಪಟನಾ: ಬಿಹಾರ ರಾಜಕೀಯದಲ್ಲಿ ದಶಕಗಳಿಂದ ಅಧಿಕಾರದ ಕೇಂದ್ರಬಿಂದುವಾಗಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ (Nitish Kumar Resignation Rumors), ಕೇಂದ್ರ ರಾಜಕಾರಣಕ್ಕೆ ತೆರಳಲಿದ್ದಾರೆ ಎಂದು ವರದಿಯಾಗಿದ್ದು, ಅಂದುಕೊಂಡಂತೆ ನಡೆದರೆ ಅವರ ಮಗ ನಿಶಾಂತ್ ಕುಮಾರ್ ರಾಜ್ಯದ ಉಪಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.
ಈಗಾಗಲೇ ಸುದೀರ್ಘ ರಾಜಕೀಯದಲ್ಲಿ ತಮ್ಮನೇ ತಾವು ಸವೆಸಿಕೊಂಡಿರುವ ನಿತೀಶ್​, ತಮ್ಮ ಉತ್ತರಾಧಿಕಾರಿಯನ್ನು ಅಖಾಡಕ್ಕಿಳಿಸಲು ಸಜ್ಜಾಗಿದ್ದಾರೆ ಎಂದು ಜೆಡಿಯು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದ್ದು, ಅವರ ಪುತ್ರ ನಿಶಾಂತ್ ಕುಮಾರ್ ಸಕ್ರಿಯ ರಾಜಕೀಯಕ್ಕೆ ಪದಾರ್ಪಣೆ ಮಾಡುವುದು ಈಗ ಬಹುತೇಕ ಖಚಿತವಾಗಿದೆ.
ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ನಿಶಾಂತ್ ಹೋಳಿ ಹಬ್ಬದ ಸಂದರ್ಭದಲ್ಲಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದು ಬಿಹಾರದ ಆಡಳಿತಾರೂಢ ಮೈತ್ರಿಯಲ್ಲಿ ಹೊಸ ಸಂಚಲನ ಮೂಡಿಸಿದೆ. ಮಾರ್ಚ್ 5 ರಂದು ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಇದೇ ವೇಳೆ ಜೆಡಿಯುನಿಂದ ನಿಶಾಂತ್ ಕುಮಾರ್ ಅಥವಾ ನಿತೀಶ್ ಕುಮಾರ್ ಅವರ ಹೆಸರು ಅಂತಿಮಗೊಳ್ಳುವ ಸಾಧ್ಯತೆಯಿದೆ.
ನಿತೀಶ್ ಕುಮಾರ್ ಸ್ಥಾನಕ್ಕೆ ಬಿಜೆಪಿ ತನ್ನದೇ ನಾಯಕರನ್ನು ತಂದು ಕೂರಿಸಲಿದೆ ಎನ್ನಲಾಗಿದ್ದು, ಸದ್ಯಕ್ಕೆ ಬಿಜೆಪಿ ನಾಯಕರು ನಿಶಾಂತ್ ಕುಮಾರ್ ರಾಜಕೀಯ ಪ್ರವೇಶಕ್ಕೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಲೇ ಬಂದಿದ್ದ ನಿತೀಶ್ ಕುಮಾರ್ ಈಗ ತಮ್ಮ ಪುತ್ರನನ್ನೇ ರಾಜಕೀಯಕ್ಕೆ ತರುತ್ತಿರುವುದು ವಿರೋಧ ಪಕ್ಷಗಳ ಟೀಕೆಗೆ ಆಹಾರವಾಗಿದ್ದರೂ, ಜೆಡಿಯು ಕಾರ್ಯಕರ್ತರಲ್ಲಿ ಮಾತ್ರ ಈ ನಿರ್ಧಾರವು ಹೊಸ ಹುಮ್ಮಸ್ಸು ತಂದಿದೆ.
ನಿಶಾಂತ್ ಕುಮಾರ್ ರಾಜಕೀಯ ಪ್ರವೇಶಿಸುವುದನ್ನು ಬಿಹಾರದ ಸಚಿವ ಶ್ರವಣ್ ಕುಮಾರ್ ಮಂಗಳವಾರ ದೃಢಪಡಿಸಿದ್ದು, ಪಕ್ಷವು ಶೀಘ್ರದಲ್ಲೇ ಔಪಚಾರಿಕ ಘೋಷಣೆ ಮಾಡಲಿದೆ ಎಂದು ತಿಳಿಸಿದ್ದಾರೆ.
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದ ಸಚಿವ ಶ್ರವಣ್​ ಕುಮಾರ್, ಮುಖ್ಯಮಂತ್ರಿ ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್ ಅವರ ಹೆಸರು ರಾಜ್ಯಾದ್ಯಂತ ಸ್ವಲ್ಪ ಸಮಯದಿಂದ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು, ಅವರು ಶೀಘ್ರದಲ್ಲೇ ಸಕ್ರಿಯ ರಾಜಕೀಯಕ್ಕೆ ಕಾಲಿಡಲಿದ್ದಾರೆ ಎಂದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net