ಜಾತಿ ಜನಗಣತಿ ಕೋಲ್ಡ್ ಸ್ಟೋರೇಜ್ ಪಾಲು..ಕೇಂದ್ರದ ವಿರುದ್ಧ ಕಾಂಗ್ರೆಸ್ ಕಿಡಿ; ಅಷ್ಟಕ್ಕೂ ಬಿಹಾರ-ತೆಲಂಗಾಣದಲ್ಲಿ ಆಗಿದ್ದೇನು..? | Jairam Ramesh

Jairam Ramesh | ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್
Jairam Ramesh | ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್
Published on
ದೆಹಲಿ: ಜಾತಿ ಜನಗಣತಿ, ಮಹಿಳಾ ಮೀಸಲಾತಿ ಕಾನೂನಿನ ವಿಷಯದಲ್ಲಿ ಮೋದಿ ಸರ್ಕಾರವು ದೇಶವನ್ನು ಹಾದಿತಪ್ಪಿಸುತ್ತಿದೆ ಮತ್ತು ಜಾತಿ ಜನಗಣತಿಯನ್ನು ಕೋಲ್ಡ್ ಸ್ಟೋರೇಜ್​ನಲ್ಲಿ ಇಡಲು ಬಯಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೈ ರಾಮ್​ ರಮೇಶ್​, ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಕಾನೂನಿನ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಂವಿಧಾನದ 334-A ವಿಧಿಯನ್ನು ತಿದ್ದುಪಡಿ ಮಾಡುವ ಮೂಲಕ ಗುಪ್ತ ಕಾರ್ಯಸೂಚಿಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ.
ಬಿಹಾರ ಮತ್ತು ತೆಲಂಗಾಣದಂತಹ ರಾಜ್ಯಗಳು ಕೇವಲ ಆರು ತಿಂಗಳ ಅವಧಿಯಲ್ಲಿ ಜಾತಿ ಸಮೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ ಎಂಬ ಸತ್ಯವನ್ನು ಮರೆಮಾಚಿ, ಜನಗಣತಿ ಫಲಿತಾಂಶಗಳು ಲಭ್ಯವಾಗಲು ಹಲವು ವರ್ಷಗಳು ಬೇಕಾಗುತ್ತವೆ ಎಂಬ ನೆಪದಲ್ಲಿ ಸರ್ಕಾರವು ಮೀಸಲಾತಿ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿದೆ ಎಂಬುದು ಕಾಂಗ್ರೆಸ್ ಪಕ್ಷದ ಪ್ರಮುಖ ವಾದವಾಗಿದೆ.
ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆಯ ನಂತರವಷ್ಟೇ ಮಹಿಳಾ ಮೀಸಲಾತಿ ಜಾರಿಗೆ ಬರಬೇಕೆಂಬ ನಿಬಂಧನೆಯನ್ನು ಪ್ರಸ್ತುತ ಕಾಯ್ದೆ ಒಳಗೊಂಡಿದ್ದರೂ, ಸರ್ಕಾರವು ಈಗ ಈ ಪ್ರಕ್ರಿಯೆಯನ್ನು ಜನಗಣತಿಯಿಂದ ಬೇರ್ಪಡಿಸಲು ಮುಂದಾಗಿದೆ ಎಂದು ರಮೇಶ್ ಟೀಕಿಸಿದ್ದು, ಈ ಹಿಂದೆ ಸಂಸತ್ತಿನಲ್ಲಿ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸುವ ಮೂಲಕ ಜಾತಿ ಜನಗಣತಿ ನಡೆಸದಿರುವುದು ಸರ್ಕಾರದ ನೀತಿ ನಿರ್ಧಾರ ಎಂದು ಹೇಳಲಾಗಿತ್ತು. ಆದರೆ ಈಗ ಅನಿರೀಕ್ಷಿತವಾಗಿ ಜನಗಣತಿಯ ಭಾಗವಾಗಿ ಜಾತಿ ಎಣಿಕೆ ಮಾಡಲಾಗುವುದು ಎಂದು ಸರ್ಕಾರ ಘೋಷಿಸಿರುವುದು ರಾಜಕೀಯ ಲಾಭಕ್ಕಾಗಿ ಎಂದು ಕಾಂಗ್ರೆಸ್ ಆರೋಪಿಸಿದೆ.
ಡಿಜಿಟಲ್ ರೂಪದಲ್ಲಿ ಜನಗಣತಿ ನಡೆಯುತ್ತಿರುವುದರಿಂದ 2027ರ ವೇಳೆಗೆ ಫಲಿತಾಂಶ ಲಭ್ಯವಾಗಲಿದೆ ಎಂದು ರಿಜಿಸ್ಟ್ರಾರ್ ಜನರಲ್ ಹೇಳಿದ್ದರೂ, ಸರ್ಕಾರ ಈಗ ಫಲಿತಾಂಶ ಲಭ್ಯತೆ ಬಗ್ಗೆ ವಿಭಿನ್ನ ರಾಗ ಎಳೆಯುತ್ತಿರುವುದು ವಂಚನೆಯ ಭಾಗವಾಗಿದೆ ಎಂದು ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಮುಂಬರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 816 ಕ್ಕೆ ಹೆಚ್ಚಿಸಿ, ಅದರಲ್ಲಿ 273 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಮಸೂದೆಗಳನ್ನು ತರಲು ಸರ್ಕಾರ ಸಜ್ಜಾಗಿದೆ. ಆದರೆ ಈ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯು ಅಸಂವಿಧಾನಿಕ ಮತ್ತು ಗಂಭೀರ ಪರಿಣಾಮಗಳನ್ನು ಬೀರಲಿದ್ದು, ನಡೆಯುತ್ತಿರುವ ವಿಧಾನಸಭಾ ಚುನಾವಣೆಗಳ ನಂತರ ಈ ಬಗ್ಗೆ ಸಮಗ್ರ ಚರ್ಚೆ ನಡೆಯಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಕ್ಷೇತ್ರ ಪುನರ್ವಿಂಗಡಣೆಯ ಸಂಪೂರ್ಣ ವಿವರಗಳಿಲ್ಲದೆ ಮಹಿಳಾ ಕೋಟಾ ಬಗ್ಗೆ ಚರ್ಚಿಸುವುದು ಅಸಾಧ್ಯ ಎಂದು ತಿಳಿಸಿದ್ದಾರೆ. ಅಲ್ಲದೆ, ಏಪ್ರಿಲ್ 15 ರಂದು ಎಲ್ಲಾ ವಿರೋಧ ಪಕ್ಷಗಳ ನಾಯಕರ ಸಭೆಯನ್ನು ಕರೆದು ಸಂಸತ್ತಿನಲ್ಲಿ ಜಂಟಿ ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್ ನಿರ್ಧರಿಸಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net