10 ಸಾವಿರ ಕೋಟಿ ಕೊಟ್ಟರೂ ಹಿಂದಿ ಹೇರಿಕೆಗೆ ಜಾಗವಿಲ್ಲ... ಪಳನಿಸ್ವಾಮಿ ಬಿಜೆಪಿ ಗುಲಾಮ ಎಂದ ಸ್ಟಾಲಿನ್​ | M K Stalin

M K Stalin | ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್
M K Stalin | ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್
Published on
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಮ್ಮ ಪ್ರಚಾರದ ವೇಗವನ್ನು ಹೆಚ್ಚಿಸಿದ್ದು, ಪುದುಕ್ಕೊಟ್ಟೈನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರವು ಹಿಂದಿ ಭಾಷೆಯನ್ನು ಹೇರುವ ಮೂಲಕ ತಮಿಳುನಾಡಿನ ಭಾಷಾ ಗುರುತನ್ನು ಮತ್ತು ಸಂಸ್ಕೃತಿಯನ್ನು ದುರ್ಬಲಗೊಳಿಸುವ ಸಂಚು ರೂಪಿಸುತ್ತಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ ಸ್ಟಾಲಿನ್​, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನಡೆಯನ್ನು ಟೀಕಿಸಿದರು. ಶಿಕ್ಷಣವನ್ನು ಬಲಪಡಿಸುವ ಬದಲು ಅದನ್ನು ಕೇಸರಿಕರಣ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಕಿಡಿಕಾರಿದರು.
ರಾಜ್ಯವು ತ್ರಿಭಾಷಾ ನೀತಿಯನ್ನು ನಿರಾಕರಿಸಿದ್ದಕ್ಕಾಗಿ ಕೇಂದ್ರ ಸರ್ಕಾರವು ಸುಮಾರು 2,000 ಕೋಟಿ ರೂಪಾಯಿಗಳ ಶಿಕ್ಷಣ ನಿಧಿಯನ್ನು ತಡೆಹಿಡಿದಿದೆ ಎಂದು ದೂರಿದ ಸ್ಟಾಲಿನ್​, ನಮಗೆ ನೀವು 10,000 ಕೋಟಿ ರೂಪಾಯಿ ನೀಡಿದರೂ ಸಹ ನಾವು ಹಿಂದಿ ಹೇರಿಕೆಗೆ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಖಡಕ್ ಆಗಿ ಘೋಷಿಸಿದರು.

ಪಳನಿಸ್ವಾಮಿ ಬಿಜೆಪಿ ಗುಲಾಮ

ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಬಿಜೆಪಿಯ ಹಿತಾಸಕ್ತಿಗಳಿಗಾಗಿ ತಮಿಳುನಾಡಿನ ಸ್ವಾಭಿಮಾನವನ್ನು ಬಲಿ ಕೊಡುತ್ತಿದ್ದಾರೆ ಎಂದು ಆರೋಪಿಸಿದ ಸಿಎಂ, ಎನ್‌ಡಿಎ ಎಂಬ ವಿಪತ್ತನ್ನು ತಮಿಳುನಾಡಿಗೆ ಹಿಂಬಾಗಿಲಿನ ಮೂಲಕ ತರಲು ಪಳನಿಸ್ವಾಮಿ ಬಿಜೆಪಿಯ ಗುಲಾಮನಂತೆ ವರ್ತಿಸುತ್ತಿದ್ದಾರೆ. ಎಐಎಡಿಎಂಕೆಯು ದೆಹಲಿಯ ಆದೇಶಕ್ಕೆ ತಲೆಬಾಗುವ ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದು, ಈ ಮೈತ್ರಿಯು ತಮಿಳು ಭಾಷೆ ಹಾಗೂ ಜನರಿಗೆ ಮಾಡಿದ ದೊಡ್ಡ ದ್ರೋಹವಾಗಿದೆ ಎಂದರು.
ತಮಿಳುನಾಡಿನಲ್ಲಿ ಎನ್‌ಡಿಎ ಸಮ್ಮಿಶ್ರ ಸರ್ಕಾರ ರಚನೆಯ ಬಗ್ಗೆ ಕೇಂದ್ರ ಸಚಿವ ರಾಮದಾಸ್ ಅಠಾವಳೆ ನೀಡಿದ ಹೇಳಿಕೆಗಳಿಗೆ ಎಐಎಡಿಎಂಕೆ ಮೌನವಾಗಿರುವುದನ್ನು ಸ್ಟಾಲಿನ್ ಪ್ರಶ್ನಿಸಿದ್ದು, ಬಿಜೆಪಿ ನಾಯಕತ್ವದ ಯಾವುದೇ ಹೇಳಿಕೆಗಳನ್ನು ಪ್ರಶ್ನಿಸುವ ಧೈರ್ಯ ಎಐಎಡಿಎಂಕೆಗೆ ಇಲ್ಲದಿರುವುದು ಅವರ ಮೌನದಿಂದ ಸಾಬೀತಾಗಿದೆ, ಪಿಯೂಷ್ ಗೋಯಲ್ ಮತ್ತು ಧರ್ಮೇಂದ್ರ ಪ್ರಧಾನ್ ಅವರಂತಹ ಕೇಂದ್ರ ಸಚಿವರು ತ್ರಿಭಾಷಾ ಸೂತ್ರದ ಹೆಸರಿನಲ್ಲಿ ಹಿಂದಿ ಹೇರಿಕೆಯನ್ನು ಪ್ರತಿಪಾದಿಸುತ್ತಿದ್ದಾರೆ ಎಂದು ಸ್ಟಾಲಿನ್​ ಆರೋಪಿಸಿದ್ದಾರೆ.
ಇದು ಕೇವಲ ಭಾಷೆಯ ವಿಷಯವಲ್ಲ, ಬದಲಿಗೆ ತಮಿಳು ಜನರ ಸಾಂಸ್ಕೃತಿಕ ಮತ್ತು ಭಾಷಾ ಹಕ್ಕುಗಳ ರಕ್ಷಣೆಯ ಹೋರಾಟವಾಗಿದೆ ಎಂದು ಸ್ಟಾಲಿನ್​ ಪುನರುಚ್ಚರಿಸಿದ್ದಾರೆ. ತಮಿಳುನಾಡಿನ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ. ರಾಜ್ಯದ ಭಾಷಾ ಅಸ್ಮಿತೆಯನ್ನು ಉಳಿಸಿಕೊಳ್ಳಲು ಡಿಎಂಕೆ ಬದ್ಧವಾಗಿದೆ ಎಂಬ ಭರವಸೆಯೊಂದಿಗೆ ಸ್ಟಾಲಿನ್ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net