16 ನೇ ವಯಸ್ಸಲ್ಲಿ ಮದುವೆ..ಪತಿಯ ಕಿರುಕುಳ..ವಿಚ್ಛೇದನ: ಗರ್ಭದಲ್ಲಿದ್ದ ಮಗುವಿನೊಂದಿಗೆ ಮನೆ ತೊರೆದಿದ್ದ ಅಶಾ ಭೋಸ್ಲೆ! Asha Bhosle Divorce

ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ಗಾಯಕಿ
ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ಗಾಯಕಿ
Published on

ಪ್ರಮುಖ ಮುಖ್ಯಾಂಶಗಳು

  • ಸಂಗೀತ ಲೋಕದ ದಿಗ್ಗಜ ಗಾಯಕಿ ಆಶಾ ಭೋಸ್ಲೆ ನಿಧನ
  • ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ಗಾಯಕಿ
  • ವಿಚ್ಛೇದನದ ನಂತರ ಆರ್​.ಡಿ. ಬರ್ಮನ್​ರನ್ನು ಮದುವೆಯಾಗಿದ್ದ ಆಶಾ
ಮುಂಬೈ: ಶನಿವಾರ (ಏ.11) ರಂದು ಕಾರ್ಡಿಯಾಕ್​ ಅರೆಸ್ಟ್​ಗೆ ತುತ್ತಾಗಿದ್ದ ಭಾರತೀಯ ಸಂಗೀತ ಲೋಕದ ದಿಗ್ಗಜ ಗಾಯಕಿ, ಏಷ್ಯಾದ ನೈಟಿಂಗೆಲ್​ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಆಶಾ ಭೋಸ್ಲೆ ಅವರು ಭಾನುವಾರ (ಏ.12) ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರ ಅಂತ್ಯಕ್ರಿಯೆಯನ್ನು ನಾಳೆ (ಏ.12) ಸಂಜೆ 4 ಗಂಟೆಗೆ ಮುಂಬೈನ ಶಿವಾಜಿ ಪಾರ್ಕ್​ನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ವರ್ಗ ತಿಳಿಸಿದೆ.

ಮೊದಲ ಪತಿಯಿಂದ ವಿಚ್ಚೇದನ ಪಡೆದಿದ್ದ ಆಶಾ!

ಭಾರತೀಯ ಸಂಗೀತ ಲೋಕದಲ್ಲಿ ತನ್ನದೇ ಆದ ವಿಶಿಷ್ಟ ಗಾಯನದ ಮೂಲಕ ತಲಮಾರುಗಳ ಕಾಲ ಬಾಲಿವುಡ್​ನ್ನು ಆಳಿದ ಆಶಾ ಭೋಸ್ಲೆ ಕುಟುಂಬ ಮತ್ತು ದಾಂಪತ್ಯ ಜೀವನದಲ್ಲಿ (Asha Bhosle Divorce) ಬಹಳ ನೋವನ್ನು ಅನುಭವಿಸಿದ್ದರು.
ಇವರು ತಮ್ಮ 16 ನೇ ವಯಸ್ಸಿನಲ್ಲಿ ತಮಗಿಂತ 15 ವರ್ಷ ದೊಡ್ಡವರಾದ ಗಣಪತ್​ ರಾವ್​ ಭೋಸ್ಲೆ ಅವರನ್ನು ಆಶಾ ಮದುವೆಯಾಗಿದ್ದರು. ಆದರೆ ಈ ಗಣಪತ್​ ರಾವ್​ ಭೋಸ್ಲೆ ಸದಾ ಆಶಾ ಅವರ ಚಾರಿತ್ರ್ಯದ ಮೇಲೆ ಅನುಮಾನ ಹೊಂದಿದ್ದರಿಂದ ಆಶಾ ತನ್ನ ಗಂಡನ ಮನೆಯಲ್ಲಿ ನೆಮ್ಮದಿಯಿಂದಿರಲು ಸಾಧ್ಯವಾಗಲಿಲ್ಲ.
ಒಂದು ದಿನ ಗಂಡನ ಮನೆಯವರು ಮತ್ತು ಆಶಾ ಭೋಸ್ಲೆ ನಡುವೆ ಭಯಂಕರ ಜಗಳ ನಡೆದ ಪರಿಣಾಮ ಆಶಾ ತನ್ನೆರಡು ಮಕ್ಕಳು ಹಾಗೂ ಮೂರನೇ ಮಗುವನ್ನು (ಹೇಮಂತ್​, ವರ್ಷಾ ಮತ್ತು ಆನಂದ್) ಗರ್ಭದಲ್ಲಿಟ್ಟುಕೊಂಡು ತವರು ಮನೆಗೆ ಬಂದುಬಿಟ್ಟರು. ನಂತರ 1960 ರಲ್ಲಿ ಗಣಪತ್​ ರಾವ್​ ಭೋಸ್ಲೆ ಅವರಿಗೆ ಆಶಾ ವಿಚ್ಛೇದನ ನೀಡಿದರು.

ಆರ್​.ಡಿ. ಬರ್ಮನ್​ರನ್ನು ಮದುವೆಯಾದ ಆಶಾ

ಗಣಪತ್​ ರಾವ್​ ಭೋಸ್ಲೆ ಜೊತೆ ವಿಚ್ಛೇದನ ಪಡೆದ ಆಶಾ ನಂತರ ತಮ್ಮ ಸಂಗೀತದ ಪಯಣವನ್ನು ಮುಂದುವರೆಸಿದರು. ನಂತರ 1980 ರಲ್ಲಿ ಖ್ಯಾತ ಸಂಗೀತ ನಿರ್ದೇಶಕ ರಾಹುಲ್​ ದೇವ್​ ಬರ್ಮನ್​ (ಆರ್​.ಡಿ. ಬರ್ಮನ್​) ಅವರನ್ನು ಆಶಾ ಮದುವೆಯಾದರು. ಈ ಮುದುವೆಗೆ ಆರ್​.ಡಿ. ಬರ್ಮನ್ ತಾಯಿಯ ಒಪ್ಪಿಗೆ ಇರಲಿಲ್ಲ ಹಾಗೆಯೇ ಆರ್​.ಡಿ. ಬರ್ಮನ್ ಸಹ 1971 ರಲ್ಲಿ ರೀಟಾ ಪಟೇಲ್ ಅವರಿಂದ ವಿಚ್ಛೇದನ ಪಡೆದಿದ್ದರು.

ಸಂಗೀತ ಕ್ಷೇತ್ರಕ್ಕೆ ಕೊಡುಗೆ ಮತ್ತು ಪ್ರಶಸ್ತಿ

1933 ರಲ್ಲಿ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದ ಆಶಾ ಭೋಸ್ಲೆ ಅವರು, ತಮ್ಮ ಒಂಬತ್ತನೇ ವಯಸ್ಸಿನಲ್ಲೇ ಸಂಗೀತ ಯಾತ್ರೆ ಆರಂಭಿಸಿದ್ದರು. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅವರು ಹಿಂದಿ ಸೇರಿದಂತೆ ಕನ್ನಡ, ಮರಾಠಿ, ಬೆಂಗಾಲಿ ಮುಂತಾದ 20ಕ್ಕೂ ಹೆಚ್ಚು ಭಾಷೆಗಳಲ್ಲಿ 12,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಇವರ ಈ ಸಂಗೀತ ಸೇವೆಗೆ ಭಾರತ ಸರ್ಕಾರವು ಅವರಿಗೆ ಪದ್ಮವಿಭೂಷಣ ಮತ್ತು ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net